Advertisement

ಗೊಂದಲಗಳಿಗೆ ತೆರೆ ಎಳೆದ ಬಿಜೆಪಿ : ಗೋವಾಕ್ಕೆ ಮತ್ತೆ ಸಾವಂತ್ ಸಿಎಂ

07:45 PM Mar 21, 2022 | Team Udayavani |

ಪಣಜಿ: ಗೋವಾ ಬಿಜೆಪಿ ನೇತೃತ್ವದ ಸರ್ಕಾರದ ಮುಖ್ಯಮಂತ್ರಿಯಾಗಿ  ಎರಡನೇಯ ಬಾರಿ ಪ್ರಮೋದ್ ಸಾವಂತ್ ಆಯ್ಕೆಯಾಗಿದ್ದು, ಮುಖ್ಯಮಂತ್ರಿ ಸ್ಥಾನದ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಂತಾಗಿದೆ.

Advertisement

ವಿಧಾನಸಭಾ ಚುನಾವಣೆಯ ನಂತರ ಇದೀಗ ಗೋವಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸ್ಥಾಪನೆಗಾಗಿ ನೂತನ ಮುಖ್ಯಮಂತ್ರಿ ಆಯ್ಕೆಗೆ ಕೇಂದ್ರ ವೀಕ್ಷಕರಾದ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಮತ್ತು ಪಶುಸಂಗೋಪನಾ ಖಾತೆಯ ರಾಜ್ಯ ಸಚಿವ ಎಲ್.ಮುರುಗನ್ ಗೋವಾಕ್ಕೆ ಆಗಮಿಸಿದ್ದು, ಅವರ ನೇತೃತ್ವದಲ್ಲಿ ಸೋಮವಾರ ಸಂಜೆ ಪಣಜಿಯಲ್ಲಿ ಬಿಜೆಪಿ ಸಭೆ ನಡೆಸಲಾಯಿತು.

ಹಂಗಾಮಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮತ್ತು ಶಾಸಕ ವಿಶ್ವಜಿತ್ ರಾಣೆ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಗ್ಗ ಜಗ್ಗಾಟ ನಡೆಯುತ್ತಿತ್ತು. ಆದರೆ ಇದೀಗ ಬಿಜೆಪಿ ನಾಯಕರು ವಿಶ್ವಜಿತ್ ರಾಣೆಯವರ ಅಸಮಾಧಾನವನ್ನು ಹೋಗಲಾಡಿಸಿ ಪ್ರಮೋದ ಸಾವಂತ್ ರವರನ್ನು ವಿಧಾನಸಭೆಯ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಗೋವಾ ಬಿಜೆಪಿ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್, ಗೋವಾ ಬಿಜೆಪಿ ಪ್ರಭಾರಿ ಸಿ.ಟಿ.ರವಿ, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಉಪಸ್ಥಿತರಿದ್ದು, ಎರಡನೇಯ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಾ. ಪ್ರಮೋದ ಸಾವಂತ್ ರವರನ್ನು ಅಭಿನಂದಿಸಿದರು.

ಪಣಜಿಯಲ್ಲಿ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಶಾಸಕ ವಿಶ್ವಜಿತ್ ರಾಣೆ ರವರು ಪ್ರಮೋದ್ ಸಾವಂತ್ ರವರ ಹೆಸರನ್ನು ಪ್ರಸ್ತಾಪಿಸಿದರು. ಇದನ್ನು ರವಿ ನಾಯ್ಕ, ಬಾಬೂಶ್ ಮೊನ್ಸೆರಾತ್, ಸೇರಿದಂತೆ ಎಲ್ಲ ಶಾಸಕರು ವಿಶ್ವಜಿತ್ ರಾಣೆಯವರ ಪ್ರಸ್ತಾವವನ್ನು ಸಮರ್ಥಿಸಿದರು. ಎಲ್ಲ ಶಾಸಕರೂ ಪ್ರಮೋದ ಸಾವಂತ್ ರವರನ್ನು ಸಮರ್ಥಿಸಿದರು.

Advertisement

ಕಳೆದ ಐದು ವರ್ಷಗಳ ಕಾಲ ಗೋವಾದಲ್ಲಿ ಬಿಜೆಪಿ ಸರ್ಕಾರವು ಉತ್ತಮ ಆಡಳಿತ ನೀಡಲು ಪ್ರಯತ್ನಿಸಿದೆ. ಅಂತೆಯೇ ಮುಂಬರುವ ಐದು ವರ್ಷಗಳ ವರೆಗೆ ಮತ್ತೆ ಪ್ರಮೋದ ಸಾವಂತ್ ರವರ ನೇತೃತ್ವದಲ್ಲಿ ಗೋವಾದಲ್ಲಿ ಬಿಜೆಪಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದೆ ಎಂದು ಕೇಂದ್ರದ ನಿರೀಕ್ಷಕ ಹಾಗೂ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಪ್ರಮೋದ ಸಾವಂತ್ ಕೆಲಸ ನಿರ್ವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರದ ನೇತೃತ್ವದ ಮೂಲಕ ಗೋವಾದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಗೋವಾದಲ್ಲಿ ಉತ್ತಮ ಆಡಳಿತ ನೀಡಲು ಪ್ರಯತ್ನಿಸಿದ್ದಾರೆ. ಇನ್ನು ಮುಂಬರುವ ಐದು ವರ್ಷಗಳಿಗಾಗಿ ಪ್ರಮೋದ ಸಾವಂತ್ ರವರು ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ನರೇಂದ್ರಸಿಂಗ್ ತೋಮರ್ ಹೇಳಿದರು.

ಗೊಂದಲದಿಂದಾಗಿ ಚುನಾವಣಾ ಫಲಿತಾಂಶ ಹೊರಬಿದ್ದು 10 ದಿನ ಕಳೆದರೂ ಬಿಜೆಪಿ ನೇತೃತ್ವದ ನೂತನ ಸರ್ಕಾರ ಸ್ಥಾಪನೆ ಸಾಧ್ಯವಾಗಿರಲಿಲ್ಲ. ಕಳೆದ ಎರಡು ದಿನಗಳ ಹಿಂದಷ್ಟೇ ಪ್ರಮೋದ ಸಾವಂತ್ ಮತ್ತು ವಿಶ್ವಜಿತ್ ರಾಣೆ ದೆಹಲಿಗೆ ತೆರಳಿ ಬಿಜೆಪಿ ವರಿಷ್ಠನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಗೋವಾ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದ್ದು, ಎರಡನೇಯ ಬಾರಿ ಮುಖ್ಯಮಂತ್ರಿಯಾಗಿ ಡಾ. ಪ್ರಮೋದ ಸಾವಂತ್ ಸರ್ಕಾರವನ್ನು ಮುನ್ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next