Advertisement

ಬಿಜೆಪಿ ಬರ ಅಧ್ಯಯನ​​​​​​​

06:00 AM Nov 30, 2018 | Team Udayavani |

ಬೆಂಗಳೂರು: ರಾಜ್ಯದ ಬರಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾರ್ಯವನ್ನು ಸರ್ಕಾರ ಸಮರ್ಪಕವಾಗಿ ಕೈಗೊಳ್ಳದ ಕಾರಣ ಜನ ಸಂಕಷ್ಟದಲ್ಲಿದ್ದಾರೆ ಎಂದು ದೂರಿರುವ ಬಿಜೆಪಿ, ಬರ ನಿರ್ವಹಣೆ ಸ್ಥಿತಿಗತಿ ತಿಳಿಯಲು ಐದು ತಂಡಗಳನ್ನು ರಚಿಸಿ ಡಿ.3ರಿಂದ 5ರವರೆಗೆ ಅಧ್ಯಯನ ಪ್ರವಾಸ ನಡೆಸಲು ನಿರ್ಧರಿಸಿದೆ. ಅಲ್ಲದೆ, ಪ್ರತಿ ತಂಡಗಳ ಅಧ್ಯಯನ ವರದಿಯನ್ನಾಧರಿಸಿ ಹೋರಾಟ ನಡೆಸಲು ಮುಂದಾಗಿದೆ.

Advertisement

ಬಿಜೆಪಿ ರಾಜ್ಯ ಕಚೇರಿಯಲ್ಲಿ ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆ ಹಾಗೂ ಕೋರ್‌ ಕಮಿಟಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಿದ್ದು, ಅತಿವೃಷ್ಟಿಯಿಂದ ಹಾನಿಗೊಳಗಾದ ಕೊಡಗಿನ ಪ್ರದೇಶಗಳಿಗೂ ಪ್ರತ್ಯೇಕ ತಂಡದಿಂದ ಅಧ್ಯಯನ ಪ್ರವಾಸ ನಡೆಸಿ ವರದಿ ಪಡೆಯಲು ತೀರ್ಮಾನಿಸಿದೆ.

ಸಭೆ ಬಳಿಕ ಪ್ರತಿಕ್ರಿಯಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಜ್ಯದಲ್ಲಿ ಬರ ನಿರ್ವಹಣೆ, ರೈತರ ಸ್ಥಿತಿಗತಿ, ಸಂಕಷ್ಟ ಅರಿಯಲು ಪಕ್ಷದ ವತಿಯಿಂದ ಐದು ತಂಡ ರಚಿಸಲು ನಿರ್ಧರಿಸಲಾಗಿದ್ದು, ಅಧ್ಯಯನ ಪ್ರವಾಸ ಕೈಗೊಳ್ಳಲಿದೆ.

ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಡಿ.10ರಂದು ಬೆಳಗಾವಿಯ ಸುವರ್ಣ ಸೌಧದ ಬಳಿ ಮಧ್ಯಾಹ್ನ 1 ಗಂಟೆಗೆ ಒಂದು ಲಕ್ಷಕ್ಕೂ ಹೆಚ್ಚು ರೈತರನ್ನು ಒಟ್ಟುಗೂಡಿಸಿ ಬೃಹತ್‌ ರ್ಯಾಲಿ ನಡೆಸಲಾಗುವುದು ಎಂದು ಹೇಳಿದರು.
ಸರ್ಕಾರದ ವೈಫ‌ಲ್ಯಗಳ ಬಗ್ಗೆ ಸದನದ ಒಳಗೂ ಹೋರಾಟ ನಡೆಸಲಾಗುವುದು. ರೈತರ ಸಮಸ್ಯೆಗಳ ಬಗ್ಗೆ ಸದನದೊಳಗೆ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಒಟ್ಟಾರೆ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಹಾಗೂ ಸರ್ಕಾರದ ವೈಫ‌ಲ್ಯಗಳ ಬಗ್ಗೆ ಬೆಳಕು ಚೆಲ್ಲಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ಸರ್ಕಾರಕ್ಕೆ ಕಪಾಳಮೋಕ್ಷ:
ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾಮೂರ್ತಿ ಅವರು ಕೊಡಗಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ನೆರವು (25 ಕೋಟಿ ರೂ.) ನೀಡಿದ್ದರು. ಆದರೆ ಸರ್ಕಾರ ಯಾವುದೇ ಪರಿಹಾರ ಚಟುವಟಿಕೆ ಕೈಗೊಳ್ಳದ ಕಾರಣ ಆ ನೆರವಿನ ಮೊತ್ತವನ್ನು ಹಿಂಪಡೆದು ಪ್ರತಿಷ್ಠಾನದ ವತಿಯಿಂದಲೇ ಪರಿಹಾರ ಕಾರ್ಯ ಕೈಗೊಳ್ಳುವುದಾಗಿ ಸುಧಾಮೂರ್ತಿ ಅವರು ಹೇಳಿದ್ದು, ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದಂತಾಗಿದೆ. ಇದು ರಾಜ್ಯ ಸರ್ಕಾರದ ವೈಫ‌ಲ್ಯ ಹಾಗೂ ಆಡಳಿತ ಸಂಪೂರ್ಣ ಕುಸಿದಿರುವುದಕ್ಕೆ ಉದಾಹರಣೆ ಎಂಬಂತಿದೆ ಎಂದು ಆರೋಪಿಸಿದರು.

Advertisement

ಐದು ಅಧ್ಯಯನ ತಂಡ:
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಅರವಿಂದ ಲಿಂಬಾವಳಿ, ಕೇಂದ್ರ ಸಚಿವ ರಮೇಶ್‌ ಜಿಗಜಿಣಗಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ್‌, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದ ಐದು ಪ್ರತ್ಯೇಕ ತಂಡಗಳು ಡಿ.3, 4 ಹಾಗೂ 5ರಂದು ಬರ ಅಧ್ಯಯನ ಪ್ರವಾಸ ನಡೆಸಲಿವೆ ಎಂದು ಯಡಿಯೂರಪ್ಪ ತಿಳಿಸಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದರಾದ ಪ್ರಹ್ಲಾದ್‌ ಜೋಷಿ, ನಳಿನ್‌ ಕುಮಾರ್‌ ಕಟೀಲು ಹಾಗೂ ಪ್ರತಾಪ್‌ ಸಿಂಹ ಅವರನ್ನು ಒಳಗೊಂಡ ತಂಡವು ಕೊಡಗಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳ ಬಗ್ಗೆ ಅಧ್ಯಯನ ನಡೆಸಲಿದೆ. ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ಕೇಂದ್ರ ಸರ್ಕಾರ ನೀಡಿದ ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂಬ ಮಾತಿದೆ. ಈ ಬಗ್ಗೆಯೂ ತಂಡ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next