Advertisement

BJP; ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಕೊಕ್

11:22 AM Mar 03, 2024 | |

ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಗೆ ಶನಿವಾರ ಬಿಡುಗಡೆ ಮಾಡಿದ 195 ಅಭ್ಯರ್ಥಿಗಳ ಬಿಜೆಪಿ ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಕೊಕ್ ನೀಡಿದ್ದು ಹೊಸ ಮುಖಗಳಿಗೆ ಮಣೆ ಹಾಕಿದೆ.

Advertisement

ದೆಹಲಿಯ ಲೋಕಸಭಾ ಸ್ಥಾನಗಳಿಗೆ ಬಿಜೆಪಿ ಐದು ಅಭ್ಯರ್ಥಿಗಳನ್ನು ಹೆಸರಿಸಿದ್ದು, ಅವರಲ್ಲಿ ನಾಲ್ವರು ಹಾಲಿ ಸಂಸದರನ್ನು ಕೈಬಿಡಲಾಗಿದೆ. ಎರಡು ಬಾರಿಯ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಹರ್ಷವರ್ಧನ್ ಅವರನ್ನು ಕೈಬಿಟ್ಟು ಚಾಂದನಿ ಚೌಕ್ ಲೋಕಸಭಾ ಕ್ಷೇತ್ರದಿಂದ ಪ್ರವೀಣ್ ಖಂಡೇಲ್ವಾಲ್ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಪಶ್ಚಿಮ ದೆಹಲಿ ಸ್ಥಾನಕ್ಕೆ ಎರಡು ಅವಧಿಯ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮ ಬದಲಿಗೆ ಕಮಲಜೀತ್ ಸೆಹ್ರಾವತ್ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರನ್ನು ನವದೆಹಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಹೆಸರಿಸಿದ್ದು, ಪ್ರಸ್ತುತ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ಪ್ರತಿನಿಧಿಸುತ್ತಿದ್ದರು. ದಕ್ಷಿಣ ದೆಹಲಿಯಿಂದ ಅಭ್ಯರ್ಥಿಯಾಗಿ ರಾಮವೀರ್ ಸಿಂಗ್ ಬಿಧುರಿ ಅವರನ್ನು ಹೆಸರಿಸಿದ್ದು, ರಮೇಶ್ ಬಿಧುರಿ ಅವರನ್ನು ಕೈಬಿಟ್ಟಿದೆ.

ಪ್ರಧಾನಿ ಮೋದಿ ಅವರ ತವರು ಗುಜರಾತ್‌ನ 15 ಲೋಕಸಭಾ ಸ್ಥಾನಗಳ ಪೈಕಿ ಐದು ಹಾಲಿ ಸಂಸದರನ್ನು ಕೈಬಿಟ್ಟಿದೆ.ರಾಜ್‌ಕೋಟ್ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ ಪರಶೋತ್ತಮ್ ರೂಪಾಲಾ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಿದ್ದು, ಹಾಲಿ ಸಂಸದ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ ಅವರನ್ನು ಕೈಬಿಟ್ಟಿದೆ. ಸಂಸದ ರಮೇಶ್‌ಭಾಯ್ ಲಾವ್‌ಜಿಭಾಯಿ ಧದುಕ್ ಪ್ರತಿನಿಧಿಸುತ್ತಿರುವ ಪೋರಬಂದರ್ ನಿಂದ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಹೆಸರಿಸಿದೆ.

ಅಸ್ಸಾಂನ 11 ಲೋಕಸಭಾ ಸ್ಥಾನಗಳಲ್ಲಿ ಆರು ಅಭ್ಯರ್ಥಿಗಳು ಹಾಲಿ ಸಂಸದರಾಗಿದ್ದರೆ ಉಳಿದ ಐವರು ಹೊಸ ಮುಖಗಳು.ದಿಬ್ರುಗಢ ಕ್ಷೇತ್ರದಿಂದ ಹಾಲಿ ಸಂಸದ ರಾಮೇಶ್ವರ್ ತೇಲಿ ಅವರನ್ನು ಕೈಬಿಟ್ಟು ಕೇಂದ್ರ ಸಚಿವ ಸರ್ಬಾನಂದ್ ಸೋನೊವಾಲ್ ಅವರನ್ನು ಅಭ್ಯರ್ಥಿಯನ್ನಾಗಿಸಿದೆ.
ಛತ್ತೀಸ್‌ಗಢದ 11 ಸ್ಥಾನಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ನಾಲ್ಕು ಮುಖಗಳು ಹೊಸದಾಗಿವೆ.

ಜಾರ್ಖಂಡ್‌ನಲ್ಲಿ, ಬಿಜೆಪಿಯು ಮನೀಶ್ ಜೈಸ್ವಾಲ್ ಅವರನ್ನು ಹಜಾರಿಬಾಗ್ ಕ್ಷೇತ್ರದಿಂದ ಕಣಕ್ಕಿಳಿಸಿದೆ, ಪ್ರಸ್ತುತ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಅವರ ಪುತ್ರ ಜಯಂತ್ ಸಿನ್ಹಾ ಪ್ರತಿನಿಧಿಸುತ್ತಿದ್ದರು.

Advertisement

ಮಧ್ಯಪ್ರದೇಶದ ಪಟ್ಟಿಯಲ್ಲಿ ಬಿಜೆಪಿ ಏಳು ಹಾಲಿ ಸಂಸದರನ್ನು ಹೊಸ ಮುಖಗಳೊಂದಿಗೆ ಬದಲಿಸಿದೆ. ವಿದಿಶಾ ಸಂಸದ ರಮಾಕಾಂತ್ ಭಾರ್ಗವ ಅವರನ್ನು ಕೈಬಿಟ್ಟು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಹೆಸರಿಸಿದೆ.ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಕಣಕ್ಕಿಳಿಸಲು ಗುನಾದಿಂದ ಹಾಲಿ ಸಂಸದ ಕೃಷ್ಣಪಾಲ್ ಸಿಂಗ್ ಯಾದವ್ ಅವರನ್ನು ಕೈಬಿಟ್ಟಿದೆ. ಪ್ರಸ್ತುತ ಸಾಧ್ವಿ ಪ್ರಜ್ಞಾ ಸಿಂಗ್ ಪ್ರತಿನಿಧಿಸುತ್ತಿದ್ದ ಭೋಪಾಲ್ ಕ್ಷೇತ್ರದಿಂದ ಅಲೋಕ್ ಶರ್ಮ ಅಭ್ಯರ್ಥಿಯಾಗಲಿದ್ದಾರೆ.

ರಾಜಸ್ಥಾನದ 15 ಲೋಕಸಭಾ ಸ್ಥಾನಗಳ ಪೈಕಿ ಚುರು, ಭರತ್‌ಪುರ್, ಜಲೋರ್, ಉದಯಪುರ ಮತ್ತು ಬನ್ಸ್ವಾರಾ ದಿಂದ ಹೊಸ ಮುಖಗಳೊಂದಿಗೆ ಐದು ಹಾಲಿ ಸಂಸದರನ್ನು ಬದಲಿಸಿ ಅಭ್ಯರ್ಥಿಗಳನ್ನು ಘೋಷಿಸಿದೆ.

ತ್ರಿಪುರಾ ಪಶ್ಚಿಮ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಿದೆ, ಪ್ರಸ್ತುತ ಪಕ್ಷದ ಸಂಸದೆ ಪ್ರತಿಮಾ ಭೂಮಿಕ್ ಪ್ರತಿನಿಧಿಸುತ್ತಿದ್ದರು.

ಬಿಜೆಪಿಯ ಲೆಕ್ಕಾಚಾರಗಳನ್ನು ನೋಡಿದರೆ ಕರ್ನಾಟಕದಲ್ಲೂ ಕೇಂದ್ರ ಸಚಿವರೂ ಸೇರಿ 10 ಕ್ಕೂ ಹೆಚ್ಚು ಸಂಸದರಿಗೆ ವಿವಿಧ ಲೆಕ್ಕಾಚಾರದಿಂದ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂದು ಲೆಕ್ಕಾಚಾರ ಹಾಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next