ಕುಣಿಗಲ್: ರಾಜ್ಯ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಆಟ ನಡೆಯುವುದಿಲ್ಲ. ರಾಜ್ಯ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಕಾರ್ಯಕರ್ತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಪುರಸಭಾ ಚುನಾವಣೆ ಪ್ರಯುಕ್ತ ಭಾನುವಾರ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಸೇರಿದಂತೆ ಇಡೀ ದೇಶದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ಈ ಸಂಬಂಧ ಎಐಸಿಸಿ ಹಾಗೂ ಕೆಪಿಸಿಸಿಯಲ್ಲಿ ಚರ್ಚೆ ನಡೆಯುತ್ತಿದೆ. 1978ರಲ್ಲಿ ಇದೇ ರೀತಿ ಕಠಿಣ ಪರಿಸ್ಥಿತಿ ಎದುರಾಗಿತ್ತು. ಮತ್ತೆ ಮೂರು ವರ್ಷದಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು, ಹೀಗಾಗಿ ಕಾರ್ಯಕರ್ತರು ನಿರಾಸೆ ಹೊಂದಬಾರದು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದರು.
ಬಿಜೆಪಿಯಿಂದ ಮೈತ್ರಿ ಸರ್ಕಾರ ಬಿಳಿಸುವ ಯತ್ನ:ಮೈತ್ರಿ ಸರ್ಕಾರವನ್ನು ಬಿಜೆಪಿಯವರು ಅಸ್ಥಿರಗೊಳಿಸುವ ಪ್ರಯತ್ನ ಮಾಡಿತ್ತಿದ್ದಾರೆ. ಇದು ಯಾವುದೇ ಕಾರಣಕ್ಕೂ ನಡೆಯುವುದಿಲ್ಲ. ಸರ್ಕಾರ ಬೀಳುವುದೂ ಇಲ್ಲ, ಸುಭದ್ರವಾಗಿದೆ. ರಾಜಕೀಯ ವ್ಯವಸ್ಥೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನಾವು ಕೂಡ ಗಮನಹರಿಸುತ್ತಿದ್ದೇವೆ. ನಾನು ಹಾಗೂ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಹಿರಿಯ ಮುಖಂಡರು ಪ್ರತಿತಂತ್ರ ರೂಪಿಸುವ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.
ಅಭಿವೃದ್ಧಿಗೆ ಕಾಂಗ್ರೆಸ್ ಗೆಲ್ಲಿಸಿ:ಕುಣಿಗಲ್ ಪುರಸಭೆಯ 23 ಸ್ಥಾನಗಳಲ್ಲಿ ಹೆಚ್ಚು ಸ್ಥಾನ ಕಾಂಗ್ರೆಸ್ ಪಡೆಯುವ ವಿಶ್ವಾಸ ಇದೆ. ಕುಣಿಗಲ್ ಪಟ್ಟಣವನ್ನು ಇನ್ನಷ್ಟು ಅಭಿವೃದ್ಧಿಪಡೆಸಲು ಸರ್ಕಾರ ಬದ್ಧವಾಗಿದೆ. ಸಂಸದ ಡಿ.ಕೆ.ಸುರೇಶ್ ಅವರನ್ನು ಕುಣಿಗಲ್ ಜನತೆ ಆಯ್ಕೆ ಮಾಡಿದ್ದಾರೆ. ಶಾಸಕ ಡಾ.ರಂಗನಾಥ್ ಹಾಗೂ ಸಚಿವ ಡಿ.ಕೆ.ಶಿವಕುಮಾರ ಸೇರಿದಂತೆ ನಾನು ಕೂಡ ಕುಣಿಗಲ್ ಅಭಿವೃದ್ಧಿಗೆ ಸಿದ್ಧರಿದ್ದೇವೆ. ಅಭ್ಯರ್ಥಿಗಳು ಮನೆ ಮನೆಗೆ ಹೋಗಿ ಮನವೊಲಿಸುವ ಕೆಲಸ ಮಾಡಿ ಎಂದು ಸೂಚನೆ ನೀಡಿದರು.
ಈ ವೇಳೆ ಶಾಸಕ ಡಾ.ರಂಗನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಧಾಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಮುಖಂಡರಾದ ಕೆಂಪೀರೇಗೌಡ, ಸುಂದರಕುಪ್ಪೆ ಪಾಪ ಣ್ಣ, ಅಭ್ಯರ್ಥಿಗಳಾದ ರಂಗನಾಥಯ್ಯ, ಸಮಿವುಲ್ಲಾ, ಎಸ್.ಕೆ.ನಾಗೇಂದ್ರ, ಉದಯಕುಮಾರ್, ಶಿವಕುಮಾರ್, ಮಂಜುಳ ರಂಗಪ್ಪ, ವಿಜಯಮ್ಮ ಹಾಜರಿದ್ದರು.