ಮೈಸೂರು: ನನ್ನ ರಾಜಕೀಯ ತೆರೆದ ಪುಸ್ತಕ. ನಾನು ಏನು? ರಾಜಕಾರಣದಲ್ಲಿ ಹೇಗೆ ಬದುಕುತ್ತಿದ್ದೇನೆ? ನನ್ನ ಹಿನ್ನೆಲೆ ಏನು ಎಂಬುದು ಜನತೆಗೆ ಗೊತ್ತಿದೆ. ಹೀಗಾಗಿ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ನಾಯಕರು ನನ್ನ ಬಗ್ಗೆ ಮಾಡುವ ಅಪಪ್ರಚಾರವನ್ನು ಜನ ನಂಬುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡಲು ಏನೂ ಇಲ್ಲದ್ದಕ್ಕೆ ಸಿದ್ದರಾಮಯ್ಯದು ತುಘಲಕ್ ದರ್ಬಾರ್, ದುರಹಂಕಾರ ಅನ್ನುತ್ತಾರೆ. ನಾನು ಸ್ವಾಭಿಮಾನದಿಂದ ಇರುವುದೇ ಅವರಿಗೆ ದುರಹಂಕಾರವಾಗಿ ಕಾಣುತ್ತದೆ. ಸಿದ್ದರಾಮಯ್ಯನನ್ನು ಟೀಕೆ ಮಾಡಿ, ಬೈದುಕೊಂಡು ಅಧಿಕಾರಕ್ಕೆ ಬರಬೇಕು ಅಂತಿದ್ದರೆ ನಿಮ್ಮಂತ ಮೂರ್ಖರು ಬೇರಿಲ್ಲ. ಜನ ದಡ್ಡರಲ್ಲ, ಅವರಿಗೆ ಎಲ್ಲವೂ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಜನರನ್ನು ಪದೇ ಪದೆ ಯಾಮಾರಿಸಲು ಆಗಲ್ಲ. ಅಧಿಕಾರಕ್ಕೆ ಬರುವ ಮುಂಚೆ ಹೇಗಿಧ್ದೋ, ಈಗ ಹೇಗಿದ್ದೇವೆ ಎಂದು ಲೂಟಿ ಹೊಡೆದವರು ಆತ್ಮಾವಲೋಕನ ಮಾಡಿಕೊಳ್ಳಲಿ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಇಟ್ಟುಕೊಂಡು, ಇನ್ನೊಬ್ಬರ ತಟ್ಟೆಯಲ್ಲಿ ನೊಣ ಹುಡುಕಲು ಹೋಗಬಾರದು ಎಂದರು.
ಸಿದ್ದರಾಮಯ್ಯ ಏನು ಎಂಬುದು ಮೈಸೂರು ಜಿಲ್ಲೆಯವರು ಸೇರಿದಂತೆ ರಾಜ್ಯದ ಜನತೆಗೆ ಗೊತ್ತಿದೆ. ನಾನು ನಿನ್ನೆ, ಮೊನ್ನೆ ರಾಜಕಾರಣಕ್ಕೆ ಬಂದವನಲ್ಲ, 1994ರಿಂದ ಈವರೆಗಿನ ಎಲ್ಲಾ ಚುನಾವಣಾ ಪ್ರಚಾರ ಮಾಡಿದ ಕೆಲವೇ ಕೆಲವು ನಾಯಕರಲ್ಲಿ ನಾನೂ ಒಬ್ಬ. ನನಗೂ ರಾಜ್ಯದ ಜನರ ನಾಡಿಮಿಡಿತ ಗೊತ್ತಿದೆ. ರಾಜ್ಯದ ಜನತೆ ನನ್ನನ್ನು ಗಮನಿಸುತ್ತಿದ್ದಾರೆ. ಪರಿವರ್ತನಾ ಯಾತ್ರೆ ಹೆಸರಲ್ಲಿ ಇಲ್ಲಿಗೆ ಬಂದು ನನ್ನ ಬಗ್ಗೆ ಸುಳ್ಳಿ ಹೇಳಿದರೆ ಜನ ನಂಬುತ್ತಾರಾ? ಪರಿವರ್ತನೆ ಆಗಬೇಕಿರುವುದು ಜನರಲ್ಲ, ನೀವು ಎಂದರು.
ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಹಾಸನ, ಕೋಲಾರ ಜಿಲ್ಲೆಗಳಲ್ಲಿ ಬಿಜೆಪಿ ಎಲ್ಲಿದೆ? ಈ ಜಿಲ್ಲೆಗಳಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಇಲ್ಲ. ಹೀಗಾಗಿ ಪರಿವರ್ತನಾ ಯಾತ್ರೆಯಲ್ಲಿ ಸುಮ್ಮನೆ ತಮಟೆ ಬಾರಿಸಿ, ಪುಂಗಿ ಊದಿಕೊಂಡು ಓಡಾಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಜೈಲಿಗೆ ಹೋಗಿ ಬಂದಿದ್ದೇ ಸಾಧನೆ ಎಂದು ಜರಿದರು.
ನಾವು ಇನ್ನೊಬ್ಬರನ್ನು ಟೀಕೆ ಮಾಡುವಾಗ ನಮ್ಮ ಸಾರ್ವಜನಿಕ ಜೀವನ ಹೇಗಿದೆ ಎಂಬುದನ್ನು ನೋಡಿಕೊಂಡು ಮಾತನಾಡಬೇಕು ಎಂದರು.
ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದಿರುವ ಪ್ರಕಾಶ್ ಜಾವಡೇಕರ್ ಅವರಿಗೆ ಜ್ಯೋತಿಷ್ಯ ಏನಾದರೂ ಗೊತ್ತಾ? ಕರ್ನಾಟಕದ ಬಗ್ಗೆ ಅವರಿಗೇನು ಗೊತ್ತು? ಯಡಿಯೂರಪ್ಪ ಅವರಿಗೇ ಕರ್ನಾಟಕ ಗೊತ್ತಿಲ್ಲ ಎಂದು ಟೀಕಿಸಿದರು.
ನರೇಂದ್ರಮೋದಿ, ಅಮಿತ್ ಶಾ, ಪ್ರಕಾಶ್ ಜಾವಡೇಕರ್ ಮಾತ್ರವಲ್ಲ, ಯಾರು ಎಷ್ಟು ಬಾರಿ ಬೇಕಾದರೂ ರಾಜ್ಯಕ್ಕೆ ಬಂದು ಸುಳ್ಳು ಹೇಳಿಕೊಂಡು ತಿರುಗಿದರು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಹೇಳಿದರು.