ಬಾಗಲಕೋಟೆ: ದೆಹಲಿ ಒಂದು ಮಹಾನಗರ ಪಾಲಿಕೆ ಇದ್ದಂತೆ. ದೆಹಲಿ ಒಂದು ಊರಿಗೆ ಸೀಮಿತವಾದ ಆಡಳಿತ ನಡೆಸಿದಂತೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಮಂಗಳವಾರ ದೆಹಲಿ ವಿಧಾನಸಭಾ ಚುನಾವಣೆಯ ಮತಎಣಿಕೆ ನಡೆಯುತ್ತಿದ್ದು ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೊಡ್ಡ ಆಡಳಿತ ಮಾಡ್ತಿದ್ದರೆ. ಲೋಕಸಭೆ ಚುನಾವಣೆಯಲ್ಲಿ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ದೆಹಲಿ ಫಲಿತಾಂಶದಿಂದ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿಲ್ಲ. ಅದೊಂದು ಮಹಾನಗರ ಪಾಲಿಕೆ ಫಲಿತಾಂಶ ಇದ್ದಂತೆ ಎಂದು ಕಾರಜೋಳ ಹೇಳಿದರು.
70 ವಿಧಾನಸಭಾ ಸದಸ್ಯ ಬಲದ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ 50ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿದೆ. ಬಿಜೆಪಿ 14 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
2015ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 67 ಸ್ಥಾನ ಪಡೆದಿದ್ದು, ಭಾರತೀಯ ಜನತಾ ಪಕ್ಷ ಕೇವಲ ಮೂರು ಹಾಗೂ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು!