Advertisement

COVID ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರ ನಡೆಸಿದ ಮಹಿಳೆ: ಯಾರು ಈ ಬಿಜೆಪಿ ನಾಯಕಿ?

09:21 PM Aug 02, 2020 | Hari Prasad |

ಚಾಮರಾಜನಗರ: ಕೋವಿಡ್ 19 ಸೋಂಕಿನ ಕುರಿತಾಗಿ ಈಗಾಗಲೇ ಜನಸಮುದಾಯದಲ್ಲಿ ಹಲವಾರು ತಪ್ಪು ಕಲ್ಪನೆಗಳು ಹಾಗೂ ಅತಿರಂಜಿತ ಮಾಹಿತಿಗಳು ಹರಿದಾಡುತ್ತಿವೆ.

Advertisement

ಅದರಲ್ಲೂ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದವರ ಕುರಿತಾಗಿಯೂ ಜನರಲ್ಲಿ ಹಲವಾರು ತಪ್ಪು ಕಲ್ಪನೆಗಳು ಮತ್ತು ಭೀತಿಯ ವಿಚಾರಗಳು ಮನೆಮಾಡಿದ್ದು. ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯ ಸಂಸ್ಕಾರವನ್ನು ನಡೆಸುವುದೇ ಒಂದು ಸವಾಲಿನ ವಿಚಾರವಾಗಿದೆ.

ಇವೆಲ್ಲದರ ನಡುವೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವೃತ್ತಿಯಲ್ಲಿ ವಕೀಲೆಯೂ ಆಗಿರುವ ನಾಗಶ್ರೀ ಪ್ರತಾಪ್ ಅವರು ನಗರ ಘಟಕದ ಪದಾಧಿಕಾರಿಗಳ ಜೊತೆ ಸೇರಿ, ಕೋವಿಡ್‌ 19 ಸೋಂಕಿನಿಂದ ಮೃತಪಟ್ಟ ಮಹಿಳೆಯೊಬ್ಬರ ಅಂತ್ಯಸಂಸ್ಕಾರವನ್ನು ನಡೆಸಿ ಮಾದರಿಯಾಗಿದ್ದಾರೆ.

ಭಾನುವಾರ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಗುಂಬಳ್ಳಿಯ 55 ವರ್ಷದ ಬೋವಿ ಸಮುದಾಯದ ಮಹಿಳೆ ಮೃತಪಟ್ಟಿದ್ದರು. ಈ ಮಹಿಳೆಯ ಅಂತ್ಯ ಸಂಸ್ಕಾರವನ್ನು ನಡೆಸಲು ಬಿಜೆಪಿ ಪದಾಧಿಕಾರಿಗಳು ಮುಂದೆ ಬಂದರು. ಆರು ಜನರಿದ್ದ ಈ ತಂಡದ ನೇತೃತ್ವವನ್ನು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್ ವಹಿಸಿ, ಅಂತ್ಯಕ್ರಿಯೆಯ ವಿಧಿ ವಿಧಾನವನ್ನು ನೆರವೇರಿಸಿದರು.


ನಗರದ ಎಡಬೆಟ್ಟದ ತಪ್ಪಲಿನಲ್ಲಿ, ಭಾನುವಾರ, ಜಿಲ್ಲಾಡಳಿತ ನಿಗದಿಪಡಿಸಿರುವ ಸ್ಥಳದಲ್ಲಿ, ಸರ್ಕಾರದ ಕೋವಿಡ್ 19 ಅಂತ್ಯಸಂಸ್ಕಾರದ ಶಿಷ್ಟಾಚಾರದಂತೆ, ಬಿಜೆಪಿ ಕಾರ್ಯಕರ್ತರು, ಪಿಪಿಇ ಕಿಟ್ ಧರಿಸಿ ಮಹಿಳೆಯ ಅಂತ್ಯಕ್ರಿಯೆ ನಡೆಸಿದರು. ನಾಗಶ್ರೀ ಅವರು ಮಹಿಳೆಯ ಕುಟುಂಬದವರ ಅಪೇಕ್ಷೆಯಂತೆ ಶವಕ್ಕೆ ಪೂಜೆ ನೆರವೇರಿಸಿ ಅಂತ್ಯ ಸಂಸ್ಕಾರ ಮಾಡಿದರು.

Advertisement

ಅಂತ್ಯಕ್ರಿಯೆ ನಡೆಸಿದ 6 ಜನರ ತಂಡದಲ್ಲಿ ಬಿಜೆಪಿ ನಗರಘಟಕ ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ರಾಜೇಶ್‌ನಾಯಕ್, ಯುವ ಮೋರ್ಚಾ ಉಪಾಧ್ಯಕ್ಷ ಶಿವು, ಓಬಿಸಿ ಮೋರ್ಚಾದ ಮಹೇಶ್, ಅಟ್ಟುಗುಳಿಪುರ ಮಹದೇವಸ್ವಾಮಿ ಇದ್ದರು.

ಮೂರು ದಿನಗಳ ಹಿಂದೆ ಸಂತೆಮರಹಳ್ಳಿಯ ವ್ಯಕ್ತಿಯೊಬ್ಬರು ಕೋವಿಡ್‌ 19 ಸೋಂಕಿನಿಂದ ಗುಣಮುಖರಾದ ಬಳಿಕ ಮೃತಪಟ್ಟಿದ್ದರು. ನೆಗೆಟಿವ್ ಇದ್ದರೂ, ಮೃತರ ಕುಟುಂಬದವರಿಗೆ ಅಂತ್ಯಕ್ರಿಯೆ ನಡೆಸಲು ಅಡಚಣೆ ಎದುರಾಗಿತ್ತು.

ಆ ಸಂದರ್ಭದಲ್ಲಿಯೂ ನಾಗಶ್ರೀ ಪ್ರತಾಪ್ ಅವರು ಸ್ಥಳಕ್ಕೆ ತೆರಳಿ, ಮೃತರ ಕುಟುಂಬದವರಿಗೆ ಧೈರ್ಯ ಹೇಳಿ, ಹಿಂದೂ ಆಜಾದ್ ಸೇನೆಯ ಕಾರ್ಯಕರ್ತರೊಡಗೂಡಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಹೀಗೆ, ಕೋವಿಡ್ 19ನ ಈ ಸಂಕಷ್ಟದ ಸಂದರ್ಭದಲ್ಲಿ ಈ ಸೋಂಕಿಗೆ ಬಲಿಯಾದವರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸುವ ಮೂಲಕ ಮೃತಪಟ್ಟ ವ್ಯಕ್ತಿಯ ಕುಟುಂಬ ಸದಸ್ಯರ ನೋವಿಗೂ ಸ್ಪಂದಿಸುವ ಅಗತ್ಯತೆಯನ್ನು ನಾಗಶ್ರೀ ಪ್ರತಾಪ್ ಮತ್ತು ಅವರ ತಂಡ ತೋರಿಸಿಕೊಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next