Advertisement

BJP;ಯತ್ನಾಳ್ ಸೇರಿ ಯಾರೇ ಆಗಿದ್ದರೂ ಶಿಸ್ತು ಕ್ರಮ ಕೈಗೊಳ್ಳಬೇಕು: ಶಂಕರಗೌಡ

05:16 PM Mar 17, 2024 | Team Udayavani |

ವಿಜಯಪುರ : ಲೋಕಸಭೆ ಚುನಾವಣೆ ಹಂತದಲ್ಲಿ ಪಕ್ಷಕ್ಕೆ ಮುಜುಗುರ ಉಂಟು ಮಾಡುವ ಹೇಳಿಕೆ ನೀಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಯಾರೇ ಆಗಿದ್ದರೂ ಪಕ್ಷದ ರಾಜ್ಯಾಧ್ಯಕ್ಷರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನವದೆಹಲಿಯ ವಿಶೇಷ ಪ್ರತಿನಿಧಿಯಾಗಿದ್ದ ಶಂಕರಗೌಡ ಪಾಟೀಲ ಆಗ್ರಹಿಸಿದ್ದಾರೆ.

Advertisement

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕರ ವಿರುದ್ಧ ಟೀಕಿಸಿದರೆ ಯತ್ನಾಳ ಮಾತ್ರವಲ್ಲ ನಾನೇ ಇದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು. ಪಕ್ಷದ ರಾಜ್ಯಾಧ್ಯಕ್ಷರು, ಶಿಸ್ತು ಮಂಡಳಿ ಅಶಿಸ್ತು ಪ್ರದರ್ಶಿಸುವರರ ವಿಷಯದಲ್ಲಿ ಸೈಲೆಂಟ್ ಆಗದೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಾನು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಲು ಶ್ರಮಿಸುತ್ತೇನೆ ಎನ್ನುವ ಬಸನಗೌಡ ಪಾಟೀಲ ಯತ್ನಾಳ, ಈ ವ್ಯಕ್ತಿಯ ಮುಖ ನೋಡಿದರೆ ಯಾರೂ ಮತ ಹಾಕುವುದಿಲ್ಲ ಎಂದು ಪಕ್ಷದ ನಾಯಕರು, ಅಭ್ಯರ್ಥಿಗಳ ವಿರುದ್ಧವೇ ಮಾತನಾಡುವುದು ಯಾವ ಪಕ್ಷ ನಿಷ್ಠೆ ಎಂದು ವಾಗ್ದಾಳಿ ನಡೆಸಿದರು.

ಪಕ್ಷದಿಂದ ಉಚ್ಛಾಟಿತವಾಗಿದ್ದ ಯತ್ನಾಳ್ ಮರಳಿ ಪಕ್ಷಕ್ಕೆ ಸೇರುವುದಕ್ಕಾಗಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುವುದಕ್ಕಾಗಿ ಗೋಗರೆದಿದ್ದರು. ಅವರ ಶಿಷ್ಯ ಎಂ.ಎಸ್.ರುದ್ರಗೌಡರ ಮೂಲಕ ಪಕ್ಷಕ್ಕೆ ಮರಳುವಾಗ ನಾನೇ ಅವರೊಂದಿಗೆ ಮಾತನಾಡಿದ್ದೆ. ಇದನ್ನೆಲ್ಲ ಯತ್ನಾಳ್ ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ವಿಜಯಪುರ ಜಿಲ್ಲೆಯಲ್ಲ ಮೂಲದವನಾದ ನಾನು ಸಂಘ ಪರಿವಾರ ಹಾಗೂ ಪಕ್ಷದ ಸಂಘಟನೆ ಮೂಲಕ ಪಕ್ಷಕ್ಕೆ ನಮ್ಮನ್ನು ತೊಡಗಿಸಕೊಂಡವನು. ಮನೋಹರ ಪರ್ರಿಕರ್, ಅನಂತಕುಮಾರ ಅವರೊಂದಿಗೆ ಕೆಲಸ ಮಾಡಿದ್ದೆ. ಸದಾನಂದಗೌಡ ಅವರನ್ನು ಪಕ್ಷಕ್ಕೆ ಕರೆ ತಂದುದು ನಾನೇ. ಅವರೆಲ್ಲ ಮುಖ್ಯಮಂತ್ರಿಯಾದರು, ಕೇಂದ್ರದಲ್ಲಿ ಮಂತ್ರಿಯಾದರು. ಆದರೆ ನನಗೆ ಅಧಿಕಾರ ಸಿಗಲಿಲ್ಲ. ಹಾಗಂತ ನಾನು ಯಾರನ್ನಾದರೂ ದೂರಲಾದೀತೆ ಎಂದರು.

Advertisement

ಈ ಹಿಂದೆ ನನಗೆ ಸಿಕ್ಕಿದ್ದ ರಾಜ್ಯಸಭಾ ಟಿಕೆಟ್‍ನ್ನು ಈರಣ್ಣ ಕಡಾಡಿ ಅವರಿಗೆ ಕೊಡಿಸಿದ್ದೆ. ಬೆಳಗಾವಿಯಲ್ಲಿ ಮೂರು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದ ನನ್ನನ್ನು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರಾಜಕೀಯ ಕಾರ್ಯದರ್ಶಿ, ನವದೆಹಲಿ ವಿಶೇಷ ಪ್ರತಿನಿಧಿ ಮಾಡಿದ್ದರು ಎಂದು ವಿವರಿಸಿದರು.

ಕೆ.ಎಸ್.ಈಶ್ವರಪ್ಪ ಪಕ್ಷದ ಅಧ್ಯಕ್ಷರಾಗಿದ್ದವರು, ಪಕ್ಷದಲ್ಲಿ ಹಿರಿಯರು, ಉನ್ನತ ಸ್ಥಾನದಲ್ಲಿ ಇರುವವರು ಪಕ್ಷಕ್ಕೆ ಧಕ್ಕೆ ಆಗುವಂತೆ ಮಾತನಾಡುವುದು, ನಡೆದುಕೊಳ್ಳುವುದು ಸರಿಯಾದ ಕ್ರಮವಲ್ಲ. ಇಷ್ಟಕ್ಕೂ ಪಕ್ಷಕ್ಕೆ ಯಡಿಯೂರಪ್ಪ ಪಕ್ಷ ಬಿಟ್ಟು ಹೋಗಿದ್ದರು ಎಂದು ಟೀಕಿಸುವ ಮುನ್ನ, ಆಗ ಪಕ್ಷ ನಿಮ್ಮ ಕೈಯಲ್ಲೇ ಇತ್ತು. ನೀವೇನು ಮಾಡಿದಿರಿ ಎಂದು ಪ್ರಶ್ನಿಸಿದರೆ ಆ ಜಾಗದಲ್ಲಿ ಇದ್ದವರು ಅರಿಯಬೇಕು ಎಂದು ಯಡಿಯೂರಪ್ಪ ಟೀಕಾಕಾರರಿಗೆ ಕುಟುಕಿದರು.

ಈಗಲೂ ನಾನು ಬೆಳಗಾವಿ ಲೋಕಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗುವ ಮುನ್ನ ಪ್ರಭಾಕರ ಕೋರೆ, ರಮೇಶ ಕತ್ತಿ, ಕವಟಗಿಮಠ ಇವರ ಮನೆಗೆ ಹೋಗಿ ನೀವೇನಾದರೂ ಸ್ಪರ್ಧಾಕಾಂಕ್ಷಿಗಳಾ, ಈಗಲೇ ಹೇಳಿ ಎಂದು ಕೇಳಿಕೊಂಡು, ಅವರೆಲ್ಲ ಇಲ್ಲವೆಂದಿದ್ದರು. ಅಲ್ಲದೇ ನೀವು ಪ್ರಯತ್ನ ಮಾಡಿ ನಾವು ಸಹಕರಿಸುತ್ತೇವೆ ಎಂದಾಗಲೇ ನಾನು ಸ್ಪರ್ಧೆಗೆ ಗಂಭೀರವಾಗಿಯೇ ಯೋಜನೆ ಮಾಡಿಕೊಂಡಿದ್ದೆ ಎಂದು ವಿವರಿಸಿದರು.

ಇದೀಗ ಜಗದೀಶ ಶೆಟ್ಟರ ಬೆಳಗಾವಿವೆ ಬರುತ್ತಿರುವುದರಿಂದ ಸ್ಪರ್ಧಿಸುವ ಅರ್ಹತೆ ಇದ್ದರೂ ಅವಕಾಶ ವಂಚಿತನಾದೆ. ರಾಷ್ಟ್ರೀಯ ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಾನು ಹೈಕಮಾಂಡ ನಿರ್ಧಾರ ಒಪ್ಪಬೇಕಿದೆ. ಹಾಗಂತ ಎಂಬ ಕಾರಣಕ್ಕೆ ಯಡಿಯೂರಪ್ಪ ಮಾನಸಪುತ್ರ ಎನಿಸಿಕೊಂಡ ನಾನು ಅವರನ್ನು ದೂರಲಾಗಿದೀತೆ ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಆತ್ಮವಂಚನೆ ಮಾಡಿಕೊಂಡಂತೆ. ಆತ್ಮವಂಚನೆ ಮಾಡಿಕೊಂಡರೆ ಸಮಾಜ ಕಲ್ಯಾಣ ಕೆಲಸಗಳು ಆಗಲ್ಲ, ಸತ್ಯವನ್ನು ಮಾತನಾಡಬೇಕು. ರಾಜಕೀಯದಲ್ಲಿ ಇರುವವರು ಮುಂದಿನ ಪೀಳಿಗೆಗೆ ಅನುಕರಣೀಯ ನಡೆ ಅನುಸರಿಸಬೇಕು ಎಂದು ಸಲಹೆ ನೀಡಿದರು.

ರಾಜಕೀಯದಲ್ಲಿ ನಮ್ಮೊಂದಿಗೆ ಇದ್ದ ಧೃವನಾರಾಯಣ ಒಂದು ಓಟಿನಿಂದ ಶಾಸಕನಾದ, ನಾನು ಅಲ್ಪ ಮತಗಳಿಂದ ಮೂರು ಬಾರಿ ಸೋತೆ. ರಾಜಕೀಯದಲ್ಲಿ ಅದೃಷ್ಟವೂ ಇರಬೇಕು. ಯಡಿಯೂರಪ್ಪ, ಅವರ ಮಕ್ಕಳನ್ನು ಗುರಿ ಮಾಡಿಕೊಂಡು ಹಗುರವಾಗಿ ಮಾತನಾಡುವುದು ಸರಿಯಲ್ಲ. ಈಗ ಮಾಧ್ಯಮಗಳ ಮೂಲಕ ಮಾತನಾಡುವ ಪರಿಸ್ಥಿತಿ ಬಂದಿದೆ ಎಂದರು.

ಈಶ್ವರಪ್ಪ, ಜಗದೀಶ ಶೆಟ್ಟರ್ ನಾವೆಲ್ಲ ಒಂದೇ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದವರು. ಹಾಗಾದರೆ ನಾನು ಪಕ್ಷದಲ್ಲಿ ಸೀನಿಯರ್ ಅಲ್ಲದೇ, ನನಗೆ ಮಾತನಾಡಲು ಬರುವುದಿಲ್ಲವೇ. ಮಾತಿನಿಂದ ಏನೂ ಆಗಲ್ಲ, ಪಕ್ಷಕ್ಕೆ ಒಳಿತಾಗುವ ಕೆಲಸವಾಗಬೇಕು. ಆ ನಿಟ್ಟಿನಲ್ಲಿ ಹಿರಿಯರಾದವರು ಕಿರಿಯರಿಗೆ ಮಾರ್ಗದರ್ಶಿಗಳಂತೆ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಸ್ತುತ ಸಂದರ್ಭದ ರಾಜಕೀಯ ಪರಿಸ್ಥಿತಿಯನ್ನು ಅರಿತುಕೊಂಡು ಯಡಿಯೂರಪ್ಪ ಟೀಕಾಕಾರರು ಅರ್ಥೈಸಿಕೊಳ್ಳಬೇಕು. ಕೆಲವು ಕಡೆಗಳಲ್ಲಿ ಹಲವು ಆಕಾಂಕ್ಷಿಳಿರುತ್ತಾರೆ, ಅವಕಾಶ ಒಬ್ಬರಿಗೆ ಮಾತ್ರ ಕೊಡಲು ಸಾಧ್ಯ. ಹಾಗಂತ ಇತರರನ್ನು ವಿರೋಧಿಸಿದರು, ಕಡೆಗಣಿಸಿದರು ಎಂದು ಯಡಿಯೂರಪ್ಪ ಅವರನ್ನು ಟೀಕಿಸುವುದು ಅರ್ಥಹೀನ ಎಂದರು.

ಯಡಿಯೂರಪ್ಪ ಪಕ್ಷ ಕಟ್ಟಲು ಶ್ರಮಿಸದಿದ್ದರೆ ನೀವೇನಾದರೂ ಅಧಿಕಾರ ಪಡೆಯಲು ಸಾಧ್ಯವಿತ್ತೆ. ಶಿಸ್ತಿನ ಪಕ್ಷದಲ್ಲಿ ಶಿಸ್ತು ತಪ್ಪುತ್ತಿದೆ. ಬಿ.ಕೆ.ಹರಿಪ್ರಸಾದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ಟೀಕೆ ಮಾಡುತ್ತಲೇ ಕಾಂಗ್ರೆಸ್ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಬಿಜೆಪಿ ಪಕ್ಷದಲ್ಲಿ ಈ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

ವಿಜುಗೌಡ ಪಾಟೀಲ, ಮಂಜುನಾಥ ವಂದಾಲ, ಗುರುಶಾಂತ ನಿಡೋಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next