ಪಾಟ್ನಾ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಯು ಪಕ್ಷಗಳಿಗೆ ಬಿಹಾರದಲ್ಲಿ ಸೀಟು ಹಂಚಿಕೆಯೇ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಪ್ರಮುಖ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಯು ಅಗತ್ಯ ತಯಾರಿ ನಡೆಸಿಕೊಂಡಿವೆ. ಆದರೆ ಒಟ್ಟು 40 ಸೀಟುಗಳಿಗಾಗಿ ಮೈತ್ರಿ ಉಳಿಸಿಕೊಳ್ಳುತ್ತಾರಾ? ಕಡಿದುಕೊಳ್ಳುತ್ತಾರಾ ಎನ್ನುವ ಕುತೂಹಲ ಹೆಚ್ಚಿದೆ.
ನಿತೀಶ್ ನೇತೃತ್ವದಲ್ಲೇ ಎನ್‌ಡಿಎ ಮುಂದಿನ ಲೋಕಸಭೆ ಚುನಾವಣೆಯನ್ನು ಎದುರಿಸಬೇಕು ಎಂದು ಜೆಡಿಯು ನಾಯಕರು ಒತ್ತಾಯಿಸಿದ್ದಾರೆ. ಜತೆಗೆ ಸಿಎಂ ನಿತೀಶ್ ಕುಮಾರ್, ಈಗಾಗಲೇ ತಮ್ಮ ಬೇಡಿಕೆಗಳನ್ನು ಬಿಜೆಪಿ ಮುಂದಿಟ್ಟಿದ್ದಾರೆ. ಆದರೆ, ಬಿಜೆಪಿ ಏಕಾಏಕಿ ಇದಕ್ಕೆ ಒಪ್ಪಿಕೊಳ್ಳಲಾಗದ ಸಂಕಷ್ಟದಲ್ಲಿದೆ. ಕಾರಣ
ಕಳೆದ ಚುನಾವಣೆಯಲ್ಲಿ ತಾನು ಗೆಲುವು ಕಂಡುಕೊಂಡಿರುವ 22 ಕ್ಷೇತ್ರಗಳಲ್ಲಿ ಯಾವುದನ್ನೂ ಕಳೆದುಕೊಳ್ಳಲು ಬಿಜೆಪಿ ಸಿದ್ಧವಿಲ್ಲ. ಜೆಡಿಯು ಕೂಡ ಈ ಪೈಕಿ ಕೆಲವು ಕ್ಷೇತ್ರಗಳನ್ನು ಬಿಟ್ಟುಕೊಡುವ ಸಾಧ್ಯತೆಗಳು ಕ್ಷೀಣ ಎಂದೇ ಹೇಳಲಾಗಿದೆ. ಪ್ರಧಾನಿ ಮೋದಿ ಅವರು ಒಂದು ಹಂತದಲ್ಲಿ ನಿತೀಶ್‌ರನ್ನು ಒಪ್ಪಿಸುವಲ್ಲಿ ಯಶಸ್ವಿಯಾ ಗುತ್ತಾರೆ ಎಂಬ ವಿಶ್ವಾಸವನ್ನು ಸೋಮವಾರ ಬಿಜೆಪಿ ವ್ಯಕ್ತಪಡಿಸಿದೆ.
ಈಗಾಗಲೇ ಮಹಾಘಟಬಂಧನ್ ಮೂಲಕ ಬಿಜೆಪಿಗೆ ಸೆಡ್ಡು ಹೊಡೆಯುವ ಸಿದ್ಧತೆಯಲ್ಲಿರುವ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು, ಬಿಜೆಪಿ ಹೇಗೆ ಜೆಡಿಯು ಜತೆಗಿನ ಮೈತ್ರಿ ಉಳಿಸಿಕೊಂಡು ಹೋಗಲಿದೆ ಎನ್ನುವುದರ ಮೇಲೆ ಕಣ್ಣಿಟ್ಟಿವೆ. 2009ರಲ್ಲಿ ಜೆಡಿಯು ತಾನು ಸ್ಪರ್ಧಿಸಿದ್ದ 25 ಕ್ಷೇತ್ರಗಳ ಪೈಕಿ 22ರಲ್ಲಿ ಗೆಲುವು ಕಂಡುಕೊಂಡಿತ್ತು. ಬಿಜೆಪಿ 15ರ ಪೈಕಿ 12 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.