Advertisement
“ಸರ್ಕಾರದ 40 ಪರ್ಸೆಂಟ್ ಕಮಿಷನ್‌ನಿಂದಾಗಿಯೇ ಬೆಂಗಳೂರು ಇಂದು ಈ ಪರಿಸ್ಥಿತಿಗೆ ಬಂದಿದೆ. ನೆರೆಯಿಂದ ಇಡೀ ನಗರ ತುತ್ತಾಗಿದೆ. ಇದಕ್ಕೆ ಸರ್ಕಾರವೇ ಹೊಣೆ’ ಎಂಬ ಪ್ರತಿಪಕ್ಷ ಕಾಂಗ್ರೆಸ್ ನಾಯಕರ ನೇರ ಆರೋಪ ಆಡಳಿತ ಪಕ್ಷವನ್ನು ಕೆರಳಿಸಿತು. ಈ ಆರೋಪಕ್ಕೆ ದಾಖಲೆ ನೀಡುವಂತೆ ಪಟ್ಟುಹಿಡಿಯಿತು. ಇದರಿಂದ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡು ಗದ್ದಲ ಉಂಟಾಯಿತು. ಆಗ ಹತ್ತು ನಿಮಿಷಗಳ ಮಟ್ಟಿಗೆ ಕಲಾಪ ಮುಂದೂಡಲಾಯಿತು. ಬಳಿಕ ಪುನಾರಂಭಗೊಂಡಾಗಲೂ ಅದೇ ಪರಿಸ್ಥಿತಿ ಮುಂದುವರಿಯಿತು. ಆಗ ಸಭಾಪತಿ ರಘುನಾಥ್ ಮಲ್ಕಾಪುರೆ ಸದನವನ್ನು ಮುಂದೂಡಿದರು.
Related Articles
Advertisement
ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯರು, ಕಾಂಗ್ರೆಸ್ ಸರ್ಕಾರ ಶೇ.90 ಭ್ರಷ್ಟಾಚಾರ ಮಾಡಿದೆ. ಹೀಗಿರುವಾಗ ಬಿಜೆಪಿ ವಿರುದ್ಧ ಆರೋಪ ಮಾಡುವ ನೈತಿಕತೆಯೂ ಇಲ್ಲ. ಒಂದು ವೇಳೆ ದಾಖಲೆಗಳಿದ್ದರೆ ನೀಡಲಿ. ಅದುಬಿಟ್ಟು ಹೀಗೆ ಬೇಕಾಬಿಟ್ಟಿ ಆರೋಪ ಮಾಡುವುದು ಸರಿ ಅಲ್ಲ ಎಂದರು.
ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಸದಸ್ಯರು, “ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರ ಎಂದು ಘೋಷಣೆ ಕೂಗಿದರು. ಆಗ ಗದ್ದಲ ಶುರುವಾಯಿತು. ಈ ಮಧ್ಯೆ ಪ್ರತಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು. ಈ ವೇಳೆ ಸಭಾಪತಿಗಳು ಸದನವನ್ನು ಕೆಲಹೊತ್ತು ಮುಂದೂಡಿದರು.
“ದಾಖಲೆ ಇಟ್ಟು ಮಾತನಾಡಿ”
ಸದನ ಪುನಾರಂಭಗೊಳ್ಳುತ್ತಿದ್ದಂತೆ ಮಾತಿಗಿಳಿದ ಬಿ.ಕೆ. ಹರಿಪ್ರಸಾದ್, ರಾಜ್ಯ ಸರ್ಕಾರ 40 ಪರ್ಸೆಂಟ್ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಮತ್ತೆ ಆರೋಪಿಸಿದರು. ಆಗ ಸಚಿವ ಡಾ.ಅಶ್ವತ್ಥ ನಾರಾಯಣ, “ಸಾಕ್ಷಿ ಇಟ್ಟು ಮಾಡನಾಡಿ’ ಎಂದು ಪಟ್ಟುಹಿಡಿದರು. ಹಾಗಿದ್ದರೆ, “ಈ ಹಿಂದೆ ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್ ಕಮಿಷನ್ ಪಡೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು. ಆಗ ಯಾವ ದಾಖಲೆ ನೀಡಿ ಆರೋಪಿಸಿದ್ದರು’ ಎಂದು ಪ್ರಶ್ನಿಸಿದರು. ಮಧ್ಯಪ್ರವೇಶಿಸಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, “ಕಾಂಗ್ರೆಸ್ ಮುಚ್ಚಿದ್ದ ಲೋಕಾಯುಕ್ತವನ್ನು ಬಿಜೆಪಿ ಮತ್ತೆ ಆರಂಭಿಸಿದೆ’ ಎಂದರು. ವಾಗ್ವಾದ ಮುಂದುವರಿದಿದ್ದರಿಂದ ಸಭೆ ಮುಂದೂಡಲ್ಪಟ್ಟಿತು.
ಪರಿಹಾರ ಮೊತ್ತ ಪರಿಷ್ಕರಣೆಗೆ ಆಗ್ರಹ
ಇದಕ್ಕೂ ಮುನ್ನ ಮಾತನಾಡಿದ ಹರಿಪ್ರಸಾದ್, ಮಳೆಯಿಂದಾಗುವ ಅನಾಹುತಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿ (ಎನ್‌ಡಿಆರ್‌ಎಫ್) ನೀಡುವ ಪರಿಹಾರ ಮೊತ್ತ ಹೆಚ್ಚಿಸಬೇಕು. 2015ರ ಮಾದರಿಯಲ್ಲಿಯೇ ಎನ್‌ಡಿಆರ್‌ಎಫ್ ಪರಿಹಾರ ನೀಡಲಾಗುತ್ತಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಪರಿಹಾರ ಮೊತ್ತ ಪರಿಷ್ಕರಿಸಬೇಕು ಎಂಬ ನಿಯಮವಿದ್ದರೂ ಕೇಂದ್ರ ಸರ್ಕಾರ ಕಳೆದ ಎರಡು ವರ್ಷದಿಂದ ಹೆಚ್ಚಿಸಿಲ್ಲ. ಜನರ ತೆರಿಗೆ ಹಣದಿಂದ ಸರ್ಕಾರ ನಡೆಯುತ್ತಿದ್ದು, ಆ ಜನರ ಸಂಕಷ್ಟಕ್ಕೆ ನೀಡುವ ಪರಿಹಾರ ಮೊತ್ತವನ್ನು ಪರಿಹಾರ ಹೆಚ್ಚಿಸಬೇಕು. ಈ ಬಗ್ಗೆ ಸದನ ಒಕ್ಕೊರಲ ನಿರ್ಣಯ ಕೈಗೊಂಡು ಪರಿಷ್ಕರಣೆ ಮಾಡಿ ಕೇಂದ್ರಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು.