Advertisement
ಮುಖ್ಯಮಂತ್ರಿಗಳು ಇದೇ ಧೋರಣೆ ಮುಂದುವರಿಸಿದರೆ ರಾಜ್ಯಾದ್ಯಂತ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ತಮ್ಮ ಅಹವಾಲು ಹೇಳಿಕೊಳ್ಳಲು ಬಂದ ವೈಟಿಪಿಎಸ್ ಸಿಬ್ಬಂದಿಯೊಂದಿಗೆ ಮುಖ್ಯಮಂತ್ರಿಯವರು ಉದ್ಧಟತನದಿಂದ ವರ್ತಿಸಿದ್ದಾರೆ.
Related Articles
Advertisement
ಇದು ಎರಡನೇ ನಾಟಕ: ಮುಖ್ಯಮಂತ್ರಿಗಳದ್ದು ಗ್ರಾಮ ವಾಸ್ತವ್ಯವಲ್ಲ, ಬದಲಿಗೆ ನಾಟಕ. 13 ವರ್ಷಗಳ ಹಿಂದೆ 42 ಹಳ್ಳಿಗಳಲ್ಲಿ ವಾಸ್ತವ್ಯ ನಡೆಸಿದರೂ ಏನೂ ಸಾಧನೆಯಾಗಿಲ್ಲ. ಇದೀಗ ಎರಡನೇ ನಾಟಕ ಶುರು ಮಾಡಿದ್ದಾರೆ.
ಮುಖ್ಯಮಂತ್ರಿಗಳು ಕೂಡಲೇ ರಾಜ್ಯದ ಜನ ಅದರಲ್ಲೂ ಉತ್ತರ ಕರ್ನಾಟಕದವರ ಕ್ಷಮೆ ಯಾಚಿಸಬೇಕು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. “ಉತ್ತರ ಕರ್ನಾಟಕದವರು ತಮಗೆ ಮತ ಹಾಕಿದ್ದಾರಾ’ ಎಂದು ಪದೇ ಪದೇ ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿಗಳು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ಪ್ರವಾಸದಲ್ಲಿ ಕಾಂಗ್ರೆಸ್‌ನ ಪಾಲು ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ವೈಟಿಪಿಎಸ್ ಸಿಬ್ಬಂದಿ ಮೇಲೆ ಮುಖ್ಯಮಂತ್ರಿಗಳು ದರ್ಪ ತೋರಿರುವುದರಲ್ಲೂ ಕಾಂಗ್ರೆಸ್‌ನ ಸಮಪಾಲು ಇದೆ.
ಮುಖ್ಯಮಂತ್ರಿಗಳ ದುರಹಂಕಾರದ ವರ್ತನೆ ಬಗ್ಗೆ ಪರಮೇಶ್ವರ್, ಸಿದ್ದರಾಮಯ್ಯ, ಈಶ್ವರ್ ಖಂಡ್ರೆ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಸ್ವಾಮಿ ಕಾರ್ಯ, ಸ್ವಕಾರ್ಯ: ಮುಖ್ಯಮಂತ್ರಿಗಳ ಪ್ರವಾಸದ ಉದ್ದೇಶ ಜನರ ಸಮಸ್ಯೆ ಆಲಿಸುವುದಲ್ಲ, ಬದಲಿಗೆ ಪಕ್ಷ ಸಂಘಟನೆ.
ಹಾಗಾಗಿ, ಜೆಡಿಎಸ್ ಶಾಸಕರಿರುವ ಗುರುಮಿಠ್ಕಲ್, ಮಾನ್ವಿಯಲ್ಲಿ ವಾಸ್ತವ್ಯ ಹೂಡಿದ್ದು, ಗುರುವಾರ ಸಹ ಬೀದರ್‌ನಲ್ಲಿ ಜೆಡಿಎಸ್ ಶಾಸಕರ ಕ್ಷೇತ್ರದಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಅಫಲ್‌ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿರುವ ಕಾರಣ ಅಲ್ಲಿ ವಾಸ್ತವ್ಯ ಹೂಡಿಲ್ಲ.
ಅವರ ಪ್ರವಾಸಕ್ಕೆ ಕಾಂಗ್ರೆಸ್‌ನ ಬೆಂಬಲವಿಲ್ಲ ಎಂಬುದು ಸ್ಪಷ್ಟ. ಮುಖ್ಯಮಂತ್ರಿಗಳ ಪ್ರವಾಸದಿಂದ ಒಂದಷ್ಟು ಕೆಲಸ ಕಾರ್ಯದ ಹೆಸರಿನಲ್ಲಿ ಅಧಿಕಾರಿಗಳು ಹಾಗೂ ಅವರಿಗೆ ಒಂದಿಷ್ಟು ಹಣ ಸಿಗಬಹುದು. ಹಾಗಾಗಿ, ಇದು ಸ್ವಾಮಿ ಕಾರ್ಯ, ಸ್ವಕಾರ್ಯದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡರು ಹೇಳಿದ್ದು 100ರಷ್ಟು ಸತ್ಯ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಳೆಯ ರಾಜಕಾರಣಿ. ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯಕ್ಕೆ ಕೆಲ ಶಕ್ತಿಗಳು ಅಡ್ಡಿಪಡಿಸುತ್ತಿವೆ ಎಂದು ಹೇಳಿರುವುದು 100ಕ್ಕೆ 100ರಷ್ಟು ಸತ್ಯ. ಮುಖ್ಯಮಂತ್ರಿಗಳ ವಾಸ್ತವ್ಯದ ವಿರುದ್ಧ ಬಿಜೆಪಿ ಶಾಸಕರು ಹೋರಾಟ ನಡೆಸಿದ್ದಾರೆ.
ನಾಟಕ ಮಾಡಲು ಬಿಡುವುದಿಲ್ಲ. ಹಗಲು ನಾಟಕ ಕೈಬಿಡಿ ಎಂದು ಒತ್ತಾಯಿಸಿದ್ದೇವೆ. ಈ ಹಿಂದೆ ಕುಮಾರಸ್ವಾಮಿಯವರು ವಾಸ್ತವ್ಯ ಹೂಡಿದ್ದ 42 ಗ್ರಾಮಗಳ ಪೈಕಿ ತಮ್ಮದೇ ಕ್ಷೇತ್ರದ ಜಟ್ಟಿದೊಡ್ಡಿಯಲ್ಲಿ ಇಡಲಾಗಿದ್ದ ಕುರ್ಚಿ, ಮೇಜು, ಯಾವ ವಸ್ತುವನ್ನೂ ನೆನಪಿಗೂ ಉಳಿಸದೆ ತೆಗೆದುಕೊಂಡು ಹೋಗಿದ್ದಾರೆ.
ಒಂದು ಬೇಡಿಕೆಯನ್ನೂ ಈಡೇರಿಸಿಲ್ಲ. ಕೇವಲ ಪ್ರಚಾರಕ್ಕಾಗಿ ವಾಸ್ತವ್ಯ ಮಾಡುತ್ತಿದ್ದಾರೆ. ಅವರ ಪ್ರವಾಸದಿಂದ ಉತ್ತರ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ, ಬಿಜೆಪಿ ಯಾವುದೇ ಕೈವಾಡ ನಡೆಸಿಲ್ಲ. ನೇರವಾಗಿಯೇ ವಿರೋಧಿಸಿದ್ದೇವೆ ಎಂದು ತಿರುಗೇಟು ನೀಡಿದರು. ಮುಖಂಡರಾದ ಚಲವಾದಿ ನಾರಾಯಣಸ್ವಾಮಿ ಇತರರು ಉಪಸ್ಥಿತರಿದ್ದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಜಾಸತ್ತಾತ್ಮಕವಾಗಿ, ನ್ಯಾಯಯುತವಾಗಿ ಹೇಳಿಕೆ ನೀಡುವುದನ್ನು ಮರೆತು ಬಿಟ್ಟಿದ್ದಾರೆ. ಅವರಿಗೆ ಪುತ್ರ ವ್ಯಾಮೋಹದ ಅಮಲು ಜಾಸ್ತಿಯಾಗಿದೆ. ಅವರು ರಾಜ್ಯದ ಅಭಿವೃದ್ಧಿ ಬಯಸಿದ್ದರೆ ಪುತ್ರನಿಗೆ ಬುದ್ದಿ ಹೇಳಬೇಕಿತ್ತು. ಇನ್ನಾದರೂ ಪುತ್ರ ವ್ಯಾಮೋಹ ಬಿಡಲಿ.-ಎನ್.ರವಿಕುಮಾರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ