Advertisement

ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿ ವಿನಾಕಾರಣ ಅಪಪ್ರಚಾರ: ರಾಮಲಿಂಗಾರೆಡ್ಡಿ

07:27 PM Nov 06, 2021 | Team Udayavani |

ಬೆಂಗಳೂರು: ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ಬಗ್ಗೆ ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ವಿಚಾರ ತಿರುಚುವುದರಲ್ಲಿ ನಿಪುಣರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅಧಿಕಾರಕ್ಕಾಗಿ ಕೆಲವರು ಬಿಜೆಪಿ ಹೋಗಿದ್ದಾರೆ ಎಂದು ಹೇಳಿದ್ದಾರೆಯೇ ಹೊರತು ಹೊಟ್ಟೆ ಪಾಡಿಗೆ ಹೋಗಿದ್ದಾರೆ ಎಂದು ಹೇಳಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸದ ಬಿಜೆಪಿಯವರು ಟೀಕೆಗೆ ಇಳಿದಿದ್ದಾರೆ. ವಿಷಯಾಂತರ ಮಾಡುವುದು ಬಿಜೆಪಿ ಹುಟ್ಟುಗುಣ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು 2013 ರಿಂದ 18 ರವೆಗೆ ಐದು ವರ್ಷ ದಲಿತರ ಅಭಿವೃದ್ಧಿಗೆ ಮಾಡಿರುವ ಕೆಲಸ ಹಾಗೂ ರೂಪಿಸಿದ ಯೋಜನೆಗಳು ಹಾಗೂ ಬಿಜೆಪಿ 2008 ರಿಂದ 13 ರವರೆಗೆ ಮಾಡಿದ ಕಾರ್ಯಕ್ರಮಗಳು ಹೋಲಿಕೆ ಮಾಡಿದರೆ ಯಾರಿಗೆ ದಲಿತರ ಬಗ್ಗೆ ಕಾಳಜಿ ಇದೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಪಾಲಿಗೆ ಐತಿಹಾಸಿಕ ಕಾನೂನು ತಂದು ಜನಸಂಖ್ಯೆ ಅನುಗುಣವಾಗಿ ಬಜೆಟ್‌ ನಲ್ಲಿ ಅನುದಾನ ನೀಡಿತು.

Advertisement

ದಲಿತರ ಕಲ್ಯಾಣಕ್ಕೆ ಬಿಜೆಪಿ ಸರ್ಕಾರ 5 ವರ್ಷದಲ್ಲಿ 22,261 ಕೋಟಿ ರೂ. ಕೊಟ್ಟರೆ, ಕಾಂಗ್ರೆಸ್‌ ಸರ್ಕಾರ ಅವರಿಗಿಂತ ನಾಲ್ಕು ಪಟ್ಟು ಹೆಚ್ಚು 88,395 ಕೋಟಿ ರೂ. ನೀಡಿದೆ ಎಂದು ವಿವರಿಸಿದರು.

ಸಮಾಜ ಕಲ್ಯಾಣ ಇಲಾಖೆಗೆ ಬಿಜೆಪಿ 9542 ಕೋಟಿ ರೂ. ಕೊಟ್ಟರೆ, ಕಾಂಗ್ರೆಸ್‌ ಸರ್ಕಾರ 23,798 ಕೋಟಿ ರೂ. ಒದಗಿಸಿತು. ಬಿಜೆಪಿ ಕೇವಲ 196 ವಸತಿ ಶಾಲೆಗಳನ್ನು ನಿರ್ಮಾಣ ಮಾಡಿದರೆ ಕಾಂಗ್ರೆಸ್‌ ಸರ್ಕಾರ ಪ್ರತಿ ಹೊಬಳಿಗೆ ಒಂದು ವಸತಿ ಶಾಲೆಯಂತೆ 270 ವಸತಿಶಾಲೆಗಳು, ಮೆಟ್ರಿಕ್‌ ನಂತರದ 200 ವಿದ್ಯಾರ್ಥಿ ನಿಲಯಗಳು ಪ್ರಾರಂಭಿಸಿ 24,300 ವಿದ್ಯಾರ್ಥಿಗಳಿಗೆ ನೆರವಾಯಿತು ಎಂದು ಅಂಕಿ-ಅಂಶ ಬಿಡುಗಡೆ ಮಾಡಿದರು.

ಇದನ್ನೂ ಓದಿ:ಅಪ್ಪು ಸಾವಿಗೆ ಜಿಮ್ ಕಾರಣವಲ್ಲ: ನೆನಪಿರಲಿ ಪ್ರೇಮ್

ಕಾಂಗ್ರೆಸ್‌ ಸರ್ಕಾರವು ವಿವಿಧ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳು ಪಡೆದ 581 ಕೋಟಿ ರೂ. ಸಾಲವನ್ನು ಮನ್ನಾ ಮಾಡಿ, 2.23 ಲಕ್ಷ ಫಲಾನುಭವಿಗಳನ್ನು ಋಣಮುಕ್ತರನ್ನಾಗಿ ಮಾಡಿತು. ಇದರ ಬಗ್ಗೆ ಬಿಜೆಪಿಯವರು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಪ್ರತಿ ವಿಚಾರದಲ್ಲೂ ಕಾಂಗ್ರೆಸ್‌ ಸರ್ಕಾರ ದಲಿತರ ಕಲ್ಯಾಣಕ್ಕಾಗಿ ಬಿಜೆಪಿಗಿಂತ ನಾಲ್ಕು ಪಟ್ಟು ಹೆಚ್ಚಿನ ಕೊಡುಗೆ ನೀಡಿದೆ. ಬಿಜೆಪಿ ರಾಜಕೀಯ ಕಾರಣಗಳಿಂದಾಗಿ ಸಿದ್ದರಾಮಯ್ಯನವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. 100 ಬಾರಿ ಸುಳ್ಳು ಹೇಳಿ ಅದನ್ನೇ ನಿಜ ಮಾಡುವುದು ಬಿಜೆಪಿ ಕೆಲಸ. ಬಿಜೆಪಿ ಅವರಿಗೆ ದಲಿತರ ಮೇಲೆ ನಿಜಕ್ಕೂ ಕಾಳಜಿ ಇರುವುದಾದರೆ ಮೋದಿ ಅವರಿಗೆ ಹೇಳಿ ಜನಸಂಖ್ಯೆ ಆಧಾರದ ಮೇಲೆ ಬಜೆಟ್‌ ನಲ್ಲಿ ಹಣ ಮೀಸಲಿಡುವ ಕಾನೂನನ್ನು ದೇಶದಾದ್ಯಂತ ಮಾಡಲಿ ನೋಡೋಣ ಎಂದು ಪ್ರಶ್ನಿಸಿದರು.

ಯೋಗ್ಯತೆ ಇಲ್ಲ
ಮಾಜಿ ಸಚಿವ ಆರ್‌.ಬಿ.ತಿಮ್ಮಾಪುರ್‌ ಮಾತನಾಡಿ, ಬಿಜೆಪಿಯವರಿಗೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಹೇಳಿದರು.

ಸಿಂದಗಿಯಲ್ಲಿ ನಮ್ಮ ಸಮಾಜದ ಸಮಾವೇಶ ಮಾಡಿದಾಗ ಅಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿ, ಬಿಜೆಪಿಯಲ್ಲಿರುವ ದಲಿತ ಮುಖಂಡರು ದಲಿತರಿಗೆ ಅನ್ಯಾಯವಾಗುವ ಪಕ್ಷದಲ್ಲಿದ್ದಾರೆ ಎಂದರೇ ಹೊರತು. ದಲಿತರು ಹೊಟ್ಟೆಪಾಡಿಗೆ ಬಿಜೆಪಿ ಸೇರಿದ್ದಾರೆ ಎಂದು ಹೇಳಿಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ದಲಿತರ ಕಲ್ಯಾಣಕ್ಕೆ ಸಾಕಷ್ಟು ಯೋಜನೆ ಕೊಟ್ಟಿದ್ದಾರೆ. ಸಾಲ ಸೌಲಭ್ಯ, ಎಸ್ಸಿ, ಎಸ್ಟಿ ಸಮುದಾಯದವರಿಗೆ ಮುಂಬಡ್ತಿ, ಗುತ್ತಿಗೆದಾರರಿಗೆ 1 ಕೋಟಿವರೆಗೂ ಮೀಸಲಾತಿ. ಸ್ಕಾಲರ್‌ ಶಿಪ್‌ ಕೊಟ್ಟರು. ಆದರೆ ಬಿಜೆಪಿ ಏನು ಮಾಡಿದೆ, ಗುತ್ತಿಗೆದಾರರಿಗೆ ನೀಡಲಾಗಿದ್ದ ಮೀಸಲಾತಿ ಕಿತ್ತುಹಾಕಿದ್ದಾರೆ. ಕಾರಜೋಳ ಸಾಹೇಬರೇ ನೀವು ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ದಲಿತರು ಎಂದು ಹೇಳಿಕೊಂಡು ಓಡಾಡುವ ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರೇ ನೀವು ವಿದ್ಯಾರ್ಥಿಗಳಿಗೆ ಕಳೆದ 6 ತಿಂಗಳಿಂದ ಸ್ಕಾಲರ್‌ ಶಿಪ್‌ ಯಾಕೆ ಕೊಟ್ಟಿಲ್ಲ. ದಲಿತರ ಮೇಲೆ ಕಾಳಜಿ ಇರುವವರು ಯಾಕೆ ಅದನ್ನು ಕೇಳುತ್ತಿಲ್ಲ. 781 ಕೋಟಿ ಕೊಡಬೇಕು, ಆದರೂ ಒಂದು ರೂ. ಸಹ ಬಿಡುಗಡೆಯಾಗಿಲ್ಲ. ನೀವು ಕೇಂದ್ರ ಸರ್ಕಾರದಲ್ಲಿದ್ದು ನೀವು ದಲಿತರ ಪರವಾಗಿ ಏನು ಮಾಡಿದ್ದೀರಿ ಎಂದು ಕೇಳಿದರು.

ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ಜಿ ಕೃಷ್ಣಪ್ಪ, ಮಾಜಿ ಮಹಾಪೌರರಾದ ಎಂ ರಾಮಚಂದ್ರಪ್ಪ, ಜೆ ಹುಚ್ಚಪ್ಪ ಉಪಸ್ಥಿತರಿದ್ದರು.

ಬಿಟ್‌ ಕಾಯಿನ್‌ ಹಗರಣ ಕಾವು ಪಡೆದುಕೊಳ್ಳುತ್ತಿದ್ದಂತೆ ಜನರ ಗಮನ ಬೇರೆಡೆ ಸೆಳಎಯಲು ಸಿದ್ದರಾಮಯ್ಯ ಅವರ ವಿರುದ್ಧ ಅಪಪ್ರಚಾರ ನಡೆಸುತ್ತಿದೆ. ಬಿಟ್‌ ಕಾಯಿನ್‌ ಹಗರಣದಲ್ಲಿ ಹ್ಯಾಕ್‌ ಮಾಡಿರುವ ವ್ಯಕ್ತಿಗೆ ಪ್ರಭಾವಿ ನಾಯಕರ ಸಂಪರ್ಕವಿದೆ. ಆಡಳಿತ ಪಕ್ಷದಲ್ಲಿರುವವರು ಪ್ರಭಾವಿನಾಯಕರಾಗಿರುತ್ತಾರೆಯೇ ಹೊರತು ವಿರೋಧ ಪಕ್ಷದವರು ಪ್ರಭಾವಿ ನಾಯಕರಾಗಿರುವುದಿಲ್ಲ. ಇದರಲ್ಲಿ ಪ್ರಭಾವಿ ನಾಯಕರ ಮಗ, ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಊಹಾಪೋಹವಿದೆ. ಪ್ರಕರಣದ ತನಿಖೆ ಸಿಬಿಐಗೆ ವಹಿಸಿದ್ದರೆ ಗೆಜೆಟ್‌ ಆಗಿರಬೇಕಲ್ಲವೇ,
-ರಾಮಲಿಂಗಾರೆಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next