ಬೆಂಗಳೂರು: ರಾಜಧಾನಿಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಲಾರಂಭಿಸುತ್ತಿದ್ದಂತೆ ಬಿಜೆಪಿ ಕಾರ್ಪೊರೇಟರ್‌ಗಳು ಸೋಂಕು ನಿಯಂತ್ರಣ ಕಾರ್ಯದಲ್ಲಿ ಇನ್ನಷ್ಟು ಸಕ್ರಿಯಾಗಿ ತೊಡಗಿಸಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ಅವರು ಮೊದಲ ಸುತ್ತಿನಲ್ಲಿ 70 ವಾರ್ಡ್ ಸದಸ್ಯರ ಸಭೆ ನಡೆಸಿದ ಫಲಪ್ರದವಾದಂತಿದ್ದು, ಬಿಜೆಪಿ ಪಾಲಿಕೆ ಸದಸ್ಯರು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಸೋಂಕಿತರ ಪತ್ತೆ, ಚಿಕಿತ್ಸೆ ಹಾಗೂ ಜಾಗೃತಿ ಕಾರ್ಯದಲ್ಲಿ ಇನ್ನಷ್ಟು ಕ್ರಿಯಾಶೀಲರಾಗಿ ಪಾಲ್ಗೊಳ್ಳಲಾರಂಭಿಸಿದ್ದಾರೆ.
ಆ ಹಿನ್ನೆಲೆ ಸರ್ಕಾರ ಕೂಡ ನಗರದಲ್ಲಿ ಪಾಲಿಕೆ ಸದಸ್ಯರನ್ನು ಇನ್ನಷ್ಟು ಹೆಚ್ಚು ತೊಡಗಿಸಿಕೊಳ್ಳಲು ಒತ್ತು ನೀಡಲಾರಂಭಿಸಿದೆ. ನಗರದಲ್ಲಿ ಸಂಸದರು, ಶಾಸಕರು, ಪಾಲಿಕೆ ಸದಸ್ಯರ ಜತೆಗೆ ವಾರ್ಡ್ ಮಟ್ಟದಲ್ಲಿ ಆಯಾ ಪಕ್ಷಗಳ ವಾರ್ಡ್ ಅಧ್ಯಕ್ಷರ ಇತರನ್ನು ತೊಡಗಿಸಿಕೊಳ್ಳುವುದು. ಜತೆಗೆ ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ 15 ಮಂದಿ ಸ್ವಯಂಸೇವಕರ ತಂಡ ರಚಿಸಿ ತೊಡಗಿಸಿಕೊಳ್ಳುವ ಪ್ರಯತ್ನ ನಡೆದಿದೆ. ಈ ತಂಡ ಮತಗಟ್ಟೆ ವ್ಯಾಪ್ತಿಯಲ್ಲಿ ಸೋಂಕಿತರಿಗೆ ಚಿಕಿತ್ಸೆಗೆ ಜತೆಗೆ ಜಾಗೃತಿ ಕಾರ್ಯಕ್ಕೂ ನೆರವಾಗಲಿದೆ.
ಬೂತ್ ಮಟ್ಟದಲ್ಲಿ ಸೋಂಕಿತರು ಕಂಡುಬಂದರೆ ಕೂಡಲೇ 15 ಸ್ವಯಂ ಸೇವಕರ ಪೈಕಿ ಒಬ್ಬರನ್ನು ಅವರ ನೆರವಿಗೆ ನಿಯೋಜಿಸಲಾಗುತ್ತದೆ. ಅವರು ಸೋಂಕಿತರಿಗೆ ಆ್ಯಂಬುಲೆನ್ಸ್ ಸೇವೆ ಸೇರಿದಂತೆ ಆಸ್ಪತ್ರೆ ಇಲ್ಲವೇ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವವರೆಗೂ ನೆರವಾ ಗುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಇದರಿಂದ ಸೋಂಕಿತರನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವ ಜತೆಗೆ ಇತರರಿಗೆ ಹರಡದಂತೆ ತಡೆಯಲು ಸಾಧ್ಯವಾಗಲಿದೆ. ಹಾಗಾಗಿ ಪಾಲಿಕೆ ಸದಸ್ಯರನ್ನು ಹೆಚ್ಚು ತೊಡಗಿಸಿಕೊಂಡು ಸ್ವಯಂ ಸೇವಕರ ಮೂಲಕ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಕೋವಿಡ್ ನಿಯಂತ್ರಣ ಕ್ರಮಗಳ ಮೂಲಕ ದೇಶದ ಗಮನ ಸೆಳೆದಿದ್ದ ಬೆಂಗಳೂರಿನಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ಸೋಂಕು ವ್ಯಾಪಕವಾಗಿ ಕಾಣಿಸಿಕೊಳ್ಳಲಾರಂಭಿಸಿತು. ಪರಿಸ್ಥಿತಿಯ ತೀವ್ರತೆ ಅರಿತ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರು ಬೆಂಗಳೂರು ಕೋವಿಡ್ ಉಸ್ತುವಾರಿ ಜವಾಬ್ದಾರಿಯನ್ನು ಸಚಿವ ಆರ್.ಅಶೋಕ್ ಅವರಿಗೆ ವಹಿಸಿದ್ದರು. ತಕ್ಷಣವೇ ಸರಣಿ ಸಭೆಗಳನ್ನು ನಡೆಸಿದ ಆರ್. ಅಶೋಕ್ ನಗರದ ಖಾಸಗಿ ಆಸ್ಪತ್ರೆಗಳ ಪ್ರಮುಖರ ಸಭೆ ಕರೆದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ವಿಸ್ತೃತವಾಗಿ ಚರ್ಚಿಸಿದ ಬಳಿಕ ಖಾಸಗಿ ಆಸ್ಪತ್ರೆಗಳ ಪ್ರಮುಖರು ಅಂತಿಮವಾಗಿ ಶೇ. 50 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಕಾಯ್ದಿರಿಸಲು ಒಪ್ಪಿಗೆ ನೀಡಿದರು. ಅಷ್ಟರ ಮಟ್ಟಿಗೆ ಸಭೆ ಯಶಸ್ಸು ಕಂಡಿತು. ಜೂ. 27ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಆರ್.ಅಶೋಕ್ ರೋಗಿಗಳಿಗೆ ನೀಡುವ ಆಹಾರದ ಗುಣಮಟ್ಟ ಪರಿಶೀಲಿಸಿದರು.
ಮರುದಿನ ಇಂದಿರಾನಗರದ ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಗೆಯೇ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಶ್ರೀ ರವಿಶಂಕರ ಗುರೂಜಿ ಅವರನ್ನು ಭೇಟಿಯಾಗಿ ಚಿಕಿತ್ಸೆಗೆ ಸ್ಥಳಾವಕಾಶ ನೀಡುವಂತೆಯೂ ಮನವಿ ಮಾಡಿದ್ದರು. ನಂತರ ಬಿಬಿಎಂಪಿಯ 198 ಪಾಲಿಕೆ ಸದಸ್ಯರ ಪೈಕಿ 1ರಿಂದ 70 ವಾರ್ಡ್‌ಗಳ ಸದಸ್ಯರೊಂದಿಗೆ ಸಭೆ ನಡೆಸಿದ ಆರ್. ಅಶೋಕ್ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.
ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಸಚಿವರ ಸೂಚನೆಯಂತೆ ಬಿಜೆಪಿ ಪಾಲಿಕೆ ಸದಸ್ಯರು ಇನ್ನಷ್ಟು ಪರಿಣಾಮಕಾರಿಯಾಗಿ ಸೋಂಕು ತಡೆ ಕಾರ್ಯದಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಸರ್ಕಾರ ಎಲ್ಲ ಪಾಲಿಕೆ ಸದಸ್ಯರನ್ನೂ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವ ಜತೆಗೆ ಬೂತ್ ಮಟ್ಟದಲ್ಲೂ ಸ್ವಯಂಸೇವಕರನ್ನು ನಿಯೋಜಿಸಿಕೊಂಡು ಕೋವಿಡ್ ನಿಯಂತ್ರಣ ಕಾರ್ಯಕ್ಕೆ ರೂಪುರೇಷೆ ಸಿದ್ಧಪಡಿಸಿದೆ.