Advertisement

ಬಿಜೆಪಿ ಕೋರ್‌ ಕಮಿಟಿ, ಶಾಸಕಾಂಗ ಸಭೆ ನಾಳೆ 

06:00 AM Nov 28, 2018 | Team Udayavani |

ಬೆಂಗಳೂರು: ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು, ಬೆಳಗಾವಿ ಅಧಿವೇಶನದಲ್ಲಿ ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪೂರಕವಾಗಿ ನಡೆಸಬೇಕಾದ ಕ್ರಮ ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು
ಸ್ಥಾನ ಗೆಲ್ಲಲು ಕಾರ್ಯ ಯೋಜನೆ ರೂಪಿಸುವ ನಿಟ್ಟಿನಲ್ಲಿ ಬಿಜೆಪಿ, ಗುರುವಾರ ಕೋರ್‌ ಕಮಿಟಿ ಸಭೆ ಜತೆಗೆ ಶಾಸಕಾಂಗ ಪಕ್ಷದ
ಸಭೆ ಕರೆದಿದೆ. ಗುರುವಾರ ಬೆಳಗ್ಗೆ ಇಲ್ಲವೇ ಮಧ್ಯಾಹ್ನ ರಾಜ್ಯ ಕೋರ್‌ ಕಮಿಟಿ ಸಭೆ ನಡೆಯಲಿದೆ. ಸಂಜೆ ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್‌ ಮೈದಾನದಲ್ಲಿ ಆಯೋಜನೆ ಯಾಗಿರುವ ಕೇಂದ್ರದ ಮಾಜಿ ಸಚಿವ ಅನಂತ ಕುಮಾರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಬಳಿಕ, ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. 

Advertisement

ಸೋಲಿನ ಅವಲೋಕನ: ಕೋರ್‌ ಕಮಿಟಿ ಸಭೆಯಲ್ಲಿ ಬಳ್ಳಾರಿ ಲೋಕಸಭೆ ಹಾಗೂ ಜಮಖಂಡಿ ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲು, ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದವರು ಮತದಾನಕ್ಕೂ ಮೊದಲೇ ಸ್ಪರ್ಧೆಯಿಂದ ನಿವೃತ್ತಿ ಪಡೆದ ಬಗ್ಗೆ ವಿಸ್ತೃತ ಚರ್ಚೆ ನಡೆಯುವ ಸಾಧ್ಯತೆಯಿದೆ. ಸೋಲಿನ ಹೊಣೆ, ಆರೋಪ- ಪ್ರತ್ಯಾರೋಪಗಳ ಬದಲಿಗೆ ಸೋಲಿಗೆ ಕಾರಣವಾದ ಅಂಶಗಳನ್ನು ಗುರುತಿಸಿ ಸರಿಪಡಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹೆಚ್ಚು ಚರ್ಚೆ ನಡೆಸಲು ನಾಯಕರು
ಚಿಂತಿಸಿದಂತಿದೆ. ಆದರೆ, ವಿಸ್ತೃತ ಅವಲೋಕನಕ್ಕೆ ಸುದೀರ್ಘ‌ ಸಮಯ ಹೊಂದಿಸಲು ಹಿರಿಯ ನಾಯಕರು ಲೆಕ್ಕಾಚಾರ ನಡೆಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಸಂಘಟನೆ ದುರ್ಬಲವಾಗಿರುವ ಕಡೆಗಳಲ್ಲಿ ಬಲವರ್ಧನೆಗಾಗಿ ಅನುಸರಿಸಬೇಕಾದ ಕ್ರಮಗಳು ಸೇರಿ ಇತರ ವಿಚಾರಗಳ ಬಗ್ಗೆಯೂ ಮಾತುಕತೆ ನಡೆಯಲಿದೆ. ರಾಜ್ಯದಲ್ಲಿ ಪ್ರಭಾವಿ ಬಿಜೆಪಿ ನಾಯಕರಾಗಿದ್ದ ಅನಂತ ಕುಮಾರ್‌ ಅವರ ಅಕಾಲಿಕ ಮರಣದಿಂದ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕಿರುವ ಅಂಶಗಳ ಬಗ್ಗೆಯೂ ಕೋರ್‌ ಕಮಿಟಿ ಸಭೆಯಲ್ಲಿ ನಾಯಕರು ಚರ್ಚೆ  ನಡೆಸುವ ಸಾಧ್ಯತೆಯಿದೆ. 

ಮೈತ್ರಿ ಸರ್ಕಾರ ಆರು ತಿಂಗಳ ಅಧಿಕಾರಾವಧಿ ಪೂರ್ಣಗೊಳಿಸಿರುವುದು, ರೈತರ ಸಾಲ ಮನ್ನಾ ಸ್ಥಿತಿಗತಿ, ಬರ ನಿರ್ವಹಣೆ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರೈತ ಹೋರಾಟಗಾರರು ಹಾಗೂ ಮಹಿಳಾ ಹೋರಾಟಗಾರ್ತಿ ಬಗ್ಗೆ ನೀಡಿದ
ಹೇಳಿಕೆ, ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಇತರ ವಿಚಾರಗಳನ್ನಿಟ್ಟುಕೊಂಡು ಮೈತ್ರಿ ಸರ್ಕಾರವನ್ನು ಯಾವ ರೀತಿಯಲ್ಲಿ ಇಕ್ಕಟ್ಟಿಗೆ ಸಿಲುಕಿಸಬೇಕೆಂಬ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯುವ ಸಂಭವವಿದೆ. ಅಧಿವೇಶನ ಆರಂಭವಾಗುವ
ಡಿ.10ರಂದು ಬೆಳಗಾವಿಯಲ್ಲಿ ಬೃಹತ್‌ ಹೋರಾಟಕ್ಕೆ ಬಿಜೆಪಿ ಸಜ್ಜಾಗಿದ್ದು, ಆ ಹೋರಾಟದ ರೂಪುರೇಷೆ ಬಗ್ಗೆಯೂ ಚರ್ಚೆ ನಡೆಯಲಿದೆ.

ಫ‌ಲಿತಾಂಶದ ಅವಲೋಕನ
“ಉದಯವಾಣಿ’ ಜತೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ಶಾಸಕ ಸಿ.ಟಿ.ರವಿ, ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಗಳ ಫ‌ಲಿತಾಂಶ ಕುರಿತಂತೆ ಅವಲೋಕನ ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪೂರಕ ಕಾರ್ಯಯೋಜನೆ ರೂಪಿಸುವ ಕುರಿತು ನ.29ರ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅದೇ ದಿನ ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಬೇಕಾದ ಅಂಶಗಳ ಬಗ್ಗೆಯೂ ಚರ್ಚೆ 
ನಡೆಸಲಾಗುವುದು ಎಂದು ತಿಳಿಸಿದರು. 

Advertisement

ಕಬ್ಬು ಬೆಳೆಗಾರರ ಹೋರಾಟಕ್ಕೆ ನಾವೀಗ ಬೆಂಬಲ ಘೋಷಿಸಿದ್ದೇವೆ. ಸಾಲ ಮನ್ನಾ ಘೋಷಣೆ ಮಾಡಿದ್ದರೂ ಅದು ಇಂದಿಗೂ
ರೈತರಿಗೆ ತಲುಪಿಲ್ಲ. ಇದೆಲ್ಲವನ್ನೂ ಸರಿ ಮಾಡುವ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 15 ದಿನಗಳ
ಕಾಲಾವಕಾಶ ಪಡೆದಿದ್ದಾರೆ. ಹೀಗಾಗಿ, ಕಾದು ನೋಡೋಣ. ಆದರೆ, ಅವರ ಮೇಲೆ ನನಗೆ ನಂಬಿಕೆ ಇಲ್ಲ. ಶುಗರ್ ಕಂಪನಿಗಳ ವಿರುದ್ಧ  ಕಾನೂ ನು ಕ್ರಮ ಕೈಗೊಂಡು ರೈತರ ಹಿತ ಕಾಪಾಡದೆ ಹೋದರೆ ಚಳಿಗಾಲ ಅಧಿವೇಶನದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ.

● ಜಗದೀಶ ಶೆಟ್ಟರ್‌, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next