ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಆಲೋಚಿಸುತ್ತಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮೂಲಗಳನ್ನು ಉದ್ದೇಶಿಸಿ ಇಂಡಿಯಾ ಟುಡೇ ವರದಿ ಮಾಡಿದೆ. ಉತ್ತರ ಪ್ರದೇಶ ಮೂಲದವರಾದ ಮೊಹಮ್ಮದ್ ಶಮಿ ಅವರು ಬಂಗಾಳದ ತಂಡದ ಪರ ರಣಜಿ ಟ್ರೋಫಿ ಪಂದ್ಯಗಳನ್ನಾಡಿದ್ದಾರೆ. ಈಗಲೂ ದೇಶಿಯ ಕ್ರಿಕೆಟ್ ನಲ್ಲಿ ಬಂಗಾಳವನ್ನೇ ಶಮಿ ಪ್ರತಿನಿಧಿಸುತ್ತಿದ್ದಾರೆ.
ಕಳೆದ ಏಕದಿನ ವಿಶ್ವಕಪ್ ನಲ್ಲಿ ಅತ್ಯದ್ಭುತ ಬೌಲಿಂಗ್ ನಿಂದ ಕಮಾಲ್ ಮಾಡಿದ್ದ ಶಮಿ ಬಳಿಕ ಗಾಯದ ಕಾರಣದಿಂದ ಯಾವುದೇ ಕ್ರಿಕೆಟ್ ಆಡಿಲ್ಲ. ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಮಿ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.
ವರದಿಯ ಪ್ರಕಾರ, ಬಿಜೆಪಿ ನಾಯಕತ್ವವು ಈಗಾಗಲೇ ಶಮಿ ಅವರನ್ನು ಚುನಾವಣೆ ಸ್ಪರ್ಧೆ ಬಗ್ಗೆ ಸಂಪರ್ಕಿಸಿದೆ. ಆದರೆ ಶಮಿ ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಶಮಿ ಅವರನ್ನು ಅಭ್ಯರ್ಥಿಯಾಗಿ ಪ್ರಸ್ತಾಪಿಸಲಾಗಿದೆ. ಸಕಾರಾತ್ಮಕ ಚರ್ಚೆಗಳು ನಡೆದಿದೆ. ಬಿಜೆಪಿಯೊಳಗಿನ ಆಂತರಿಕ ಚರ್ಚೆಗಳು ಶಮಿಯನ್ನು ಕಣಕ್ಕಿಳಿಸುವುದು ಬಂಗಾಳದ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಗೆಲುವು ಸಾಧಿಸಲು ಸಹಾಯ ಮಾಡುತ್ತದೆ ಎಂದು ಸೂಚಿಸುತ್ತದೆ.
ಬಿಜೆಪಿ ಮೂಲಗಳ ಪ್ರಕಾರ, ಹಿಂಸಾಚಾರಕ್ಕೆ ಸಾಕ್ಷಿಯಾದ ಸಂದೇಶಖಾಲಿ ಗ್ರಾಮವಿರುವ ಬಸಿರ್ಹತ್ ಲೋಕಸಭಾ ಕ್ಷೇತ್ರದಿಂದ ಶಮಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ವಿಶ್ವಕಪ್ ಫೈನಲ್ ಸೋಲಿನ ಬಳಿಕ ಡ್ರೆಸ್ಸಿಂಗ್ ರೂಮ್ ಗೆ ತೆರಳಿದ್ದ ಪ್ರಧಾನಿ ಮೋದಿ ಅವರು ಶಮಿ ಅವರನ್ನು ಹೊಗಳಿದ್ದರು. ಅಲ್ಲದೆ ಅವರನ್ನು ಆಲಂಗಿಸಿದ್ದರು. ಇತ್ತೀಚೆಗೆ ಶಸ್ತ್ರಚಿಕಿತ್ಸೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಶೀಘ್ರ ಚೇತರಿಕೆಗೆ ಪಿಎಂ ಮೋದಿ ಹಾರೈಸಿದ್ದರು.