Advertisement

ಮತಬೇಟೆಗೆ ಜಾತಿ ಅಸ್ತ್ರ ಬಳಸಿದ ಬಿಜೆಪಿ-ಕಾಂಗ್ರೆಸ್‌

06:53 PM Apr 08, 2021 | Team Udayavani |

ಮಸ್ಕಿ: ಮಸ್ಕಿ ಉಪಚುನಾವಣೆಯ ಮತದಾನ ದಿನಾಂಕ ಸಮೀಪಸುತ್ತಿದ್ದಂತೆಯೇ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ವಿಭಿನ್ನ ಅಸ್ತ್ರ ಪ್ರಯೋಗಿಸುತ್ತಿವೆ. ಜಾತಿವಾರು ಮತಗಳ ಗಳಿಕೆ ಲೆಕ್ಕಚಾರದಲ್ಲಿ ಆಯಾ ಸಮುದಾಯದ ಪ್ರಭಾವಿ ಮುಖಂಡರನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ.

Advertisement

ಕಳೆದ ಒಂದು ವಾರದಿಂದ ಬಹಿರಂಗ ಪ್ರಚಾರ, ಮನೆ-ಮನೆಗೆ ತೆರಳಿ ಪ್ರಚಾರ ನಡೆಸಿರುವ ಎರಡು ರಾಜಕೀಯ ಪಕ್ಷದ ಮುಖಂಡರು ಈಗ ಮತದಾನ ದಿನ ಹತ್ತಿರವಾದಂತೆಲ್ಲ ಮತ್ತೂಂದು ವಿಶಿಷ್ಠ ದಾಳಕ್ಕೆ ಕೈ ಹಾಕಿದ್ದಾರೆ. ಜಾತಿ-ಸಮುದಾಯ ಆಧಾರಿತ ಮತಬೇಟೆ ಈಗ ಶುರುವಾಗಿದೆ. ಹೋಬಳಿ, ಹಳ್ಳಿವಾರು, ವಾರ್ಡ್‌ವಾರು ಆಯ್ಕೆ ಮಾಡಿಕೊಂಡು ಆಯಾ ಜಾತಿಯ ಪ್ರಮುಖ ಮುಖಂಡರ ಮೂಲಕ ವೋಟ್‌ಗಳ ಸಮೀಕರಣ ಮಾಡುವ ಯತ್ನ ನಡೆದಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಎರಡು ಪಕ್ಷದ ಮುಖಂಡರು ಈ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಎಲ್ಲೆಲ್ಲಿ?: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುಪಾಪುರ, ಅರಳಹಳ್ಳಿ, ಗುಂಜಳ್ಳಿ, ಊಮಲೂಟಿ, ಕಲ್ಮಂಗಿ ಭಾಗದಲ್ಲಿ ಮತ ಪ್ರಚಾರ ನಡೆಸಿದರು. ಅಲ್ಲಲ್ಲಿ ಲಿಂಗಾಯತ ಮುಖಂಡರನ್ನು ಕರೆದು ಪ್ರತ್ಯೇಕ ಮಾತುಕತೆಯೂ ನಡೆಸಿದರು. ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಬುಧವಾರ ಇಡೀ ದಿನ ಬಳಗಾನೂರು ಪಟ್ಟಣದಲ್ಲಿಯೇ ಕಳೆದರು. ಪಪಂ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಪ್ರತ್ಯೇಕವಾಗಿ ಸಂಚರಿಸಿ ಮತಯಾಚನೆ ಮಾಡಿದರು. ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌, ಎನ್‌.ರವಿಕುಮಾರ್‌ ಸೇರಿ ಹಲವರು ಸಾಥ್‌ ನೀಡಿದರು. ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಸಿಂಧನೂರು ಬಿಜೆಪಿ
ಮುಖಂಡರ ಕೊಲ್ಲಾ ಶೇಷಗಿರಿರಾವ್‌ ಮಸ್ಕಿ ಕ್ಷೇತ್ರದ ಎಲ್ಲ ಆಂಧ್ರ ಕ್ಯಾಂಪ್‌ಗ್ಳಲ್ಲಿ ಸಂಚರಿಸಿ ಕ್ಯಾಂಪೇನ್‌ ನಡೆಸಿದರು.

ಇನ್ನು ಕಾಂಗ್ರೆಸ್‌ನಲ್ಲಿ ಪಿ.ಟಿ. ಪರಮೇಶ್ವರ ನಾಯಕ, ಭೀಮಾ ನಾಯ್ಕ ಕೇವಲ ತಾಂಡಾಗಳನ್ನು ಗುರಿಯಾಗಿಸಿಕೊಂಡು ಪ್ರಚಾರ ನಡೆಸಿದರು. ಮಸ್ಕಿ ಕ್ಷೇತ್ರದಲ್ಲಿ ಸುಮಾರು 10ಕ್ಕೂ ಹೆಚ್ಚು ತಾಂಡಾಗಳಿದ್ದು, ಎಲ್ಲ ಕಡೆಗೂ ತೆರಳಿದ ಇಬ್ಬರು ಶಾಸಕರು ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಬಸನಗೌಡ ಪರ ಮತಯಾಚನೆ ಮಾಡಿದರು. ಇನ್ನು ಮಾಜಿ ಸಚಿವ ಎಚ್‌.ಆಂಜನೇಯ, ಸಂಸದ ಹನುಮಂತಯ್ಯ ಕುರುಕುಂದಾ, ತಿಡಿಗೋಳ, ವಿರುಪಾಪುರ, ಹಂಪನಾಳ, ನಂಜಲದಿನ್ನಿ, ಗೋನಾಳ, ದೀನಸಮುದ್ರ ಸೇರಿ ಹಲವು ಕಡೆಗಳಲ್ಲಿ ಮತಪ್ರಚಾರ ನಡೆಸಿದರು. ಒಟ್ಟಿನಲ್ಲಿ ಚುನಾವಣೆ ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳ
ನೇತಾರರು ವಿಭಿನ್ನ ಶೈಲಿಯಲ್ಲಿ ಮತದಾರರ ಮನವೊಲಿಕೆ ಕಸರತ್ತು ನಡೆಸಿದ್ದು, ಇದು ಯಾವ ಪ್ರಮಾಣದಲ್ಲಿ ಪರಿಣಾಮ ಬೀರಲಿದೆಯೋ ಕಾದು
ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next