Advertisement

BJP-Congress ದೇಗುಲ ತೆರಿಗೆ ಕಲಹ: ಏನಿದು ವಿವಾದ? ಹಿಂದೆ ಏನಿತ್ತು? ಈಗ ಏನಾಗಿದೆ?

12:15 AM Feb 23, 2024 | Team Udayavani |

ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕರಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆಯನ್ನು ರಾಜಕೀಯ ಕಾರಣಗಳಿಗಾಗಿ ಬಿಜೆಪಿ ತಪ್ಪಾಗಿ ಜನತೆಯ ಮುಂದಿರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Advertisement

ಮಸೂದೆಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತಿತರ ಬಿಜೆಪಿಯ ನಾಯಕರು ಮಾಡಿರುವ ಆರೋಪಗಳಿಗೆ ಪತ್ರಿಕಾ ಪ್ರಕಟನೆಯ ಮೂಲಕ ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ.

“ಹಿಂದೂಯೇತರ ಸಮುದಾಯ ಗಳಿಗೆ ಹಿಂದೂ ದೇವಸ್ಥಾನಗಳ ಹಣವನ್ನು ಬಳಸಲಾಗುತ್ತದೆ ಎನ್ನುವ ಬಿಜೆಪಿ ನಾಯಕರ ಆರೋಪ ಸಂಪೂರ್ಣ ಕಪೋಲಕಲ್ಪಿತ. ಅಮಾಯಕ ಹಿಂದೂಗಳನ್ನು ನಮ್ಮ ಸರಕಾರದ ವಿರುದ್ಧ ಎತ್ತಿಕಟ್ಟುವ ದುರುದ್ದೇಶದಿಂದ ಇಂತಹ ಕ್ಷುಲ್ಲಕ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ದೇವಸ್ಥಾನಗಳ ಹುಂಡಿಗಳಲ್ಲಿ ಸಂಗ್ರಹ ವಾಗುವ ಹಣವನ್ನು ಹಿಂದೂ ಧರ್ಮದ ಧಾರ್ಮಿಕ ಆಚರಣೆಗಳಿಗೆ ಸಂಬಂಧಪಟ್ಟಂತೆ ಮಾತ್ರವೇ ಬಳಸಲಾಗುತ್ತದೆ. ಈ ನಿಧಿಯು 2003ರಲ್ಲಿ ಕಾಯಿದೆಯು ಜಾರಿಗೆ ಬಂದಾಗಿನಿಂದ ಧಾರ್ಮಿಕ ಕಾರ್ಯಗಳಿಗೆ ಮಾತ್ರವೇ ಬಳಕೆ ಯಾಗುತ್ತಿದೆ. ಭವಿಷ್ಯದಲ್ಲಿಯೂ ಅದಕ್ಕೆ ಮಾತ್ರವೇ ಬಳಕೆಯಾಗಲಿದೆ. ಬೇರೆ ಯಾವುದೇ ಧರ್ಮದ ಜನರ ಅನುಕೂಲಕ್ಕಾಗಿ ಈ ಹಣವನ್ನು ಬಳಸಲಾಗುವುದಿಲ್ಲ. ದೇವಸ್ಥಾನಗಳ ಹಣವನ್ನು ಕೇವಲ ಹಿಂದೂ ಸಮುದಾಯದ ಏಳಿಗೆ ಮತ್ತು ಕಲ್ಯಾಣಕ್ಕೆ ಮಾತ್ರವೇ ಬಳಸಬೇಕೆನ್ನುವ ಬಾಧ್ಯತೆಯನ್ನು ಈ ನಿಧಿಯ ನಿಬಂಧನೆಗಳಲ್ಲಿ ಒತ್ತಿ ಹೇಳಲಾಗಿದೆ ಎಂದಿದ್ದಾರೆ.

ಏನಿದು ವಿವಾದ?
ಬಿಜೆಪಿ ಸರಕಾರದ ಅವಧಿಯಲ್ಲಿ ದೇಗುಲದ ಖರ್ಚು ಕಳೆದು ಉಳಿದ ಹಣದಲ್ಲಿ ಸಾಮಾನ್ಯ ಸಂಗ್ರಹ ನಿಧಿಗೆ ಹಣ ನೀಡಲಾಗುತ್ತಿತ್ತು. ಈ ಹಂಚಿಕೆಗೆ ನಿಗದಿತ ಶೇಕಡಾವಾರು ಪ್ರಮಾಣ ಬಳಸಲಾಗುತ್ತಿತ್ತು. ಪ್ರಸ್ತುತ ಕಾಂಗ್ರೆಸ್‌ ಸರಕಾರ ಹಾಗೆ ಮಾಡುತ್ತಿಲ್ಲ: ಬಿಜೆಪಿ ಆರೋಪ.
ರಾಜ್ಯ ಸರಕಾರ ಹಣಕ್ಕಾಗಿ ದೇಗುಲಗಳ ಹುಂಡಿಗೆ ಕೈಹಾಕಿದೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ.
ದೇವಸ್ಥಾನಗಳ ಹುಂಡಿಗಳಲ್ಲಿ ಸಂಗ್ರಹ ವಾಗುವ ಹಣವನ್ನು ಹಿಂದೂ ಧರ್ಮದ ಧಾರ್ಮಿಕ ಆಚರಣೆಗಳಿಗೆ ಮಾತ್ರವೇ ಬಳಸಲಾಗುತ್ತದೆ: ಮುಖ್ಯಮಂತ್ರಿ

Advertisement

ಹಿಂದೆ ಏನಿತ್ತು?
1. ನಿವ್ವಳ ಆದಾಯ 10 ಲಕ್ಷ ರೂ. ಮೀರಿದ ದೇವಸ್ಥಾನಗಳ ಒಟ್ಟು ವಾರ್ಷಿಕ ಆದಾಯದಿಂದ ಶೇ. 10ರಷ್ಟನ್ನು ಸಾಮಾನ್ಯ ಸಂಗ್ರಹಣ ನಿಧಿಗೆ ಸಮರ್ಪಿಸುವುದು.
2. ಐದರಿಂದ ಹತ್ತು ಲಕ್ಷ ರೂ.ವರೆಗೆ ವಾರ್ಷಿಕ ಆದಾಯ ಬರುವ ದೇವಸ್ಥಾನದ ವಾರ್ಷಿಕ ಆದಾಯದಿಂದ ಶೇ.5ರಷ್ಟನ್ನು ಸಾಮಾನ್ಯ ಸಂಗ್ರಹಣ ನಿಧಿಗೆ ಸಮರ್ಪಿಸುವುದು.
3. ಒಂದು ದೇವಸ್ಥಾನವಾದರೆ ಪ್ರಧಾನ ಅರ್ಚಕ, ಓರ್ವ ಎಸ್‌ಸಿ ಅಥವಾ ಎಸ್‌ಟಿ ಪ್ರತಿನಿಧಿ, ಇಬ್ಬರು ಮಹಿಳೆಯರು ಮತ್ತು ಸ್ಥಳೀಯರೊಬ್ಬರಿಗೆ ವ್ಯವಸ್ಥಾಪನ ಸಮಿತಿಯಲ್ಲಿ ಸದಸ್ಯತ್ವ ನೀಡುವುದು.
4. ಸಂಯೋಜಿತ ಸಂಸ್ಥೆಗಳಿದ್ದರೆ (ಚಿಕ್ಕಮಗಳೂರಿನ ಶ್ರೀಗುರುದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಶ್ರೀಭೂತರಾಜ ಚೌಡೇಶ್ವರಿ ಮತ್ತು ಸಾದತ್‌ ಆಲಿ ದರ್ಗಾ) ಅಂತಹವುಗಳ ವ್ಯವಸ್ಥಾಪನ ಸಮಿತಿಯಲ್ಲಿ ಹಿಂದುಯೇತರರಿಗೆ ಸದಸ್ಯತ್ವ ನೀಡುವುದು.

ಈಗ ಏನಾಗಿದೆ?
1. ಒಂದು ಕೋಟಿ ರೂ. ನಿವ್ವಳ ಆದಾಯ ಮೀರುವ ದೇವಸ್ಥಾನಗಳ ಒಟ್ಟು ವಾರ್ಷಿಕ ಆದಾಯದಿಂದ ಶೇ.10ರಷ್ಟನ್ನು ಸಾಮಾನ್ಯ ಸಂಗ್ರಹ ನಿಧಿಗೆ ಸಮರ್ಪಿಸುವುದು.
2. ಹತ್ತು ಲಕ್ಷ ರೂ. ನಿವ್ವಳ ಆದಾಯಕ್ಕಿಂತ ಹೆಚ್ಚಿದ್ದು ರೂ. 1 ಕೋಟಿ ಮೀರದ ಸಂಸ್ಥೆಗಳಿಂದ ಶೇ.5ರಷ್ಟನ್ನು ಸಾಮಾನ್ಯ ಸಂಗ್ರಹ ನಿಧಿಗೆ ಸಮರ್ಪಿಸುವುದು.
3. ಒಂದು ದೇವಸ್ಥಾನವಾದರೆ ಪ್ರಧಾನ ಅರ್ಚಕ, ಓರ್ವ ಎಸ್‌ಸಿ ಅಥವಾ ಎಸ್‌ಟಿ ಪ್ರತಿನಿಧಿ, ಇಬ್ಬರು ಮಹಿಳೆಯರು ಮತ್ತು ಸ್ಥಳೀಯರ ಜತೆಗೆ ಹಿಂದೂ ದೇವಸ್ಥಾನಗಳ ವಾಸ್ತುಶಿಲ್ಪ ಮತ್ತು ಶಿಲ್ಪಶಾಸ್ತ್ರದಲ್ಲಿ ಕೌಶಲವುಳ್ಳ ವಿಶ್ವಕರ್ಮ ಸಮುದಾಯದ ವ್ಯಕ್ತಿಗೆ ವ್ಯವಸ್ಥಾಪನ ಸಮಿತಿಯಲ್ಲಿ ಸದಸ್ಯತ್ವ ನೀಡುವುದು.
4. ಸಂಯೋಜಿತ ಸಂಸ್ಥೆಗಳಿದ್ದರೆ (ಚಿಕ್ಕಮಗಳೂರಿನ ಶ್ರೀಗುರುದತ್ತಾತ್ರೇಯ ಬಾಬ ಬುಡನ್‌ ಸ್ವಾಮಿ ದರ್ಗಾ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಶ್ರೀಭೂತರಾಜ ಚೌಡೇಶ್ವರಿ ಮತ್ತು ಸಾದತ್‌ ಆಲಿ ದರ್ಗ) ಅಂತಹವುಗಳ ವ್ಯವಸ್ಥಾಪನ ಸಮಿತಿಯಲ್ಲಿ ಹಿಂದುಯೇತರರಿಗೆ ಸದಸ್ಯತ್ವ ನೀಡುವುದು.

Advertisement

Udayavani is now on Telegram. Click here to join our channel and stay updated with the latest news.

Next