Advertisement

ಡಿಜಿಪಿ ರವೀಂದ್ರನಾಥ್ ರಾಜಿನಾಮೆ ವಿಚಾರ: ಸರಕಾರದ ನಡತೆ ಅಧಿಕಾರಿಗಳಿಗೆ ದೊಡ್ಡ ಬೆದರಿಕೆ

10:58 AM May 11, 2022 | Team Udayavani |

ಬೆಂಗಳೂರು: ಡಿಜಿಪಿ ರವೀಂದ್ರನಾಥ ಅವರ ರಾಜೀನಾಮೆಗೆ ಈಗ ರಾಜಕೀಯ ಬಣ್ಣ ಲೇಪವಾಗಿದೆ. ಸಿದ್ದರಾಮಯ್ಯ ಆಪ್ತ ಕೆಂಪಯ್ಯ ಅವರಿಗೆ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಅವರನ್ನು ನಾಗರಿಕ ಹಕ್ಕು ನಿರ್ದೇಶನಾಲಯದಿಂದ ಎತ್ತಂಗಡಿ ಮಾಡಲಾಗಿತ್ತು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

Advertisement

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಯಮಬಾಹಿರ ವರ್ಗಾವಣೆ ಮಾಡಿದ್ದರಿಂದ ಬೇಸತ್ತು ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ವಿಭಾಗದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ.ಪಿ.ರವೀಂದ್ರನಾಥ್ ಅವರ ರಾಜೀನಾಮೆಯನ್ನು ರಾಜ್ಯ ಸರಕಾರ ಅಂಗೀಕಾರ ಮಾಡಬಾರದು. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ದಲಿತ, ದಕ್ಷ ಅಧಿಕಾರಿ ರವೀಂದ್ರನಾಥ್ ಅವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ತಿಮಿಂಗಿಲಗಳಿಗೆ ಬಲೆ ಹಾಕಿದ್ದರು. ಹೀಗೆ, ಸರಕಾರ ಮತ್ತು ಸಮಾಜಕ್ಕೆ ವಂಚನೆ ಮಾಡಿದ್ದವರ ಜಾತಕ ಬಿಚ್ಚಿಡಲು ಅವರು ಪ್ರಯತ್ನ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಗಣ್ಯ ವ್ಯಕ್ತಿ, ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕತೆಯ ಪೋಸು ಕೊಟ್ಟು ನಕಲಿ ಜಾತಿ ಪ್ರಮಾಣ ಪತ್ರದ ಮೂಲಕ ಹುದ್ದೆ ಗಿಟ್ಟಿಸಿರುವ ಆರೋಪ ಎದುರಿಸುತ್ತಿರುವ ನಿವೃತ್ತ ಅಧಿಕಾರಿಗೆ ನೋಟೀಸ್ ನೀಡಿದ ಹತ್ತೇ ದಿನದಲ್ಲಿ ಆ ನೋಟೀಸ್ ಕೊಟ್ಟ ಹಿರಿಯ ಅಧಿಕಾರಿಯನ್ನೇ ಎತ್ತಂಗಡಿ ಮಾಡಲಾಗಿದೆ. ಈ ಸರಕಾರ ಯಾರ ಬಾಲಂಗೋಚಿ ಎನ್ನುವುದು ಈ ವರ್ಗಾವಣೆ ಒಂದರಿಂದಲೇ ಅರ್ಥವಾಗುತ್ತದೆ. ಏಕೆಂದರೆ, ಆರೋಪಿತ ನಿವೃತ್ತ ಅಧಿಕಾರಿ ಕಾಂಗ್ರೆಸ್ ಸರಕಾರದಲ್ಲಿ ಗೃಹ ಇಲಾಖೆ ಸಲಹೆಗಾರರಾಗಿದ್ದರು. 5 ವರ್ಷ ರಾಜ್ಯವನ್ನಾಳಿದ ಮುಖ್ಯಮಂತ್ರಿಗೆ ಆಪ್ತರೂ ಆಗಿದ್ದರು. ಅವರಿಗೆ ನೋಟೀಸ್ ನೀಡಿದಾಕ್ಷಣ ಡಾ.ರವೀಂದ್ರನಾಥ್ʼರನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಹಾಗಾದರೆ, ಬಿಜೆಪಿ & ಕಾಂಗ್ರೆಸ್ ನಡುವೆ ಇರುವ ಒಳ ಒಪ್ಪಂದವೇನು? ಒಬ್ಬ ದಲಿತ ಅಧಿಕಾರಿಯನ್ನು ಬಲಿ ಹಾಕಲು ಎರಡೂ ರಾಷ್ಟ್ರೀಯ ಪಕ್ಷಗಳು ನಡೆಸಿದ ಷಡ್ಯಂತ್ರ ಇದು ಎಂಬುದು ನನ್ನ ನೇರ ಆರೋಪ ಎಂದರು.

ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಸಹಕಾರ ನೀಡಿದ ನಾಯಕರ ಆಪ್ತರಾಗಿದ್ದ ನಿವೃತ್ತ ಅಧಿಕಾರಿ ವಿರುದ್ಧ ಕೇಳಿಬಂದಿರುವುದು ಅತಿ ಗಂಭೀರ ಆರೋಪ. ಅಂಥ ವ್ಯಕ್ತಿಯನ್ನು ರಕ್ಷಣೆ ಮಾಡುವ ಅಗತ್ಯ ಬಿಜೆಪಿ ಸರಕಾರಕ್ಕೆ ಏನಿದೆ? ಎಂದು ಪ್ರಶ್ನಿಸಿದ್ದಾರೆ.

Advertisement

ಇದನ್ನೂ ಓದಿ: ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣ; NIA ಕೋರ್ಟ್ ನಲ್ಲಿ ತಪ್ಪೊಪ್ಪಿಕೊಂಡ ಮಲಿಕ್

ಎಲ್ಲಿಂದ, ಯಾರು, ಯಾರ ಮೇಲೆ ಒತ್ತಡ ಹೇರಿದ್ದಾರೆ? ಯಾರು, ಯಾರ ಋಣ ಚುಕ್ತಾ ಮಾಡುತ್ತಿದ್ದಾರೆ ಎನ್ನುವುದು ಜನರಿಗೆ ಗೊತ್ತಾಗಬೇಕಿದೆ. ಡಾ.ರವೀಂದ್ರನಾಥ್ ಅವರ ವಿಷಯದಲ್ಲಿ ರಾಜ್ಯ ಸರಕಾರ ನಡೆದುಕೊಳ್ಳುತ್ತಿರುವ ರೀತಿ ಪ್ರಾಮಾಣಿಕ ಅಧಿಕಾರಿಗಳಿಗೆ ದೊಡ್ಡ ಬೆದರಿಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next