Advertisement

ಬಿಜೆಪಿ-ಕಾಂಗ್ರೆಸ್‌ ಕಿತ್ತಾಟದಿಂದ ಅಭಿವೃದ್ಧಿಗೆ ಹಿನ್ನಡೆ

03:09 PM Jun 20, 2017 | |

ಧಾರವಾಡ: ಗಂಡ-ಹೆಂಡ್ತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೇ ಕಾಂಗ್ರೆಸ್‌ ಮತ್ತು ಬಿಜೆಪಿ ಜಟಾಪಟಿಯ ಈ ತಿಕ್ಕಾಟದಲ್ಲಿ ಅವಳಿ ನಗರಗಳ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ ಎಂದು ಜೆಡಿಎಸ್‌ ಪಕ್ಷದ ಮುಖಂಡ ಗುರುರಾಜ ಹುಣಸಿಮರದ ಹೇಳಿದರು. ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Advertisement

ಶನಿವಾರ ನಡೆದ ರಸ್ತೆ ಕಾಮಗಾರಿಗೆ ಹಣ ತಂದಿದ್ದು ಸ್ವಾಗತಾರ್ಹ. ಆದರೆ ಸರ್ಕಾರಿ ಅಧಿಕಾರಿಗಳಿಂದ ನಡೆಯಬೇಕಿದ್ದ ಕಾರ್ಯಕ್ರಮವನ್ನು ಹೈಜಾಕ್‌ ಮಾಡಿದ ಬಿಜೆಪಿ, ರಸ್ತೆಯಲ್ಲೇ ವೇದಿಕೆ ನಿರ್ಮಿಸುವ ಮೂಲಕ ಜನರಿಗೆ ತೊಂದರೆ ನೀಡಿದ್ದು ಖಂಡನೀಯ.

ಇನ್ನು ಕಾಂಗ್ರೆಸ್‌ ಹಾಗೂ ಬಿಜೆಪಿ ಜಗಳದಿಂದ ಅವಳಿನಗರದ ಅಭಿವೃದ್ಧಿ ಮರೀಚಿಕೆಯಾಗಿದ್ದರೆ ಇವರ ಬ್ಯಾನರ್‌ ರಾಜಕಾರಣದಿಂದ ಅಭಿವೃದ್ಧಿ ಯೋಜನೆಗಳಿಗೆ ಹಿನ್ನಡೆಯಾಗಿದೆ ಎಂದು ದೂರಿದರು. ಕೇಂದ್ರ ಅಥವಾ ರಾಜ್ಯ ಸರಕಾರದ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಸಭೆ ಸಮಾರಂಭಗಳು ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳ ಮೂಲಕ ನಡೆಯಬೇಕು ಎಂಬ ನಿಯಮವಿದೆ.

ಆದರೆ ಶನಿವಾರ ಹುಬ್ಬಳ್ಳಿ- ಧಾರವಾಡದಲ್ಲಿ ನಡೆದ ರಸ್ತೆ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮಗಳು ಸಂಪೂರ್ಣ ಬಿಜೆಪಿ ಪಕ್ಷದ ಕಾರ್ಯಕ್ರಮದಂತೆಯೇ ಇದ್ದವು ಎಂದರು. ಸಾರ್ವಜನಿಕರ ಹಣವನ್ನೇ ಸರ್ಕಾರಗಳು ಅಭಿವೃದ್ಧಿ ಕಾರ್ಯಗಳಿಗೆ ನೀಡುತ್ತವೆ. ಆದರೆ ಇವರು ತಮ್ಮ ಪ್ರತಿಷ್ಠೆಗಾಗಿ ನಾವು ತಂದಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ.

ಶಾಸಕ ಬೆಲ್ಲದ ಅವರು ಆಯ್ಕೆಯಾದ ಮೇಲೆ ತಮ್ಮ ಕ್ಷೇತ್ರದಲ್ಲಿರುವ ಸ್ಲಂ ಹಾಗೂ ಹಳ್ಳಿಗಳಿಗೆ ಒಂದು ದಿನವೂ ಭೇಟಿ ನೀಡಿಲ್ಲ. ಇವುಗಳನ್ನು ಅಭಿವೃದ್ಧಿ ಮಾಡುವುದನ್ನು ಬಿಟ್ಟು ಕೇವಲ 7 ಕಿಮೀ. ರಸ್ತೆ ಕಾಮಗಾರಿ ಚಾಲನೆಗೆ ಇಷ್ಟೊಂದು ಪ್ರಚಾರ ಪಡೆಯುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದರು. 

Advertisement

ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಭಿವೃದ್ಧಿಗೆ ನೀಡುವ ಅನುದಾನಗಳು ಕಾಂಗ್ರೆಸ್‌, ಬಿಜೆಪಿ ಪಕ್ಷದ ಯಾವುದೇ ರಾಜಕಾರಣಿಯ ಮನೆಯ ಸ್ವತ್ತಲ್ಲ. ಅದು ರಾಜ್ಯದ ಜನತೆಯ ತೆರಿಗೆ ಹಣದಿಂದ ಸಂಗ್ರಹಿಸಿದ್ದಾಗಿದೆ. ಅದನ್ನು ಎರಡೂ ಪಕ್ಷಗಳ ಸಚಿವ-ಶಾಸಕರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. 

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆ ಸಹ ಸಾರ್ವಜನಿಕರನ್ನು ಸಾಲಕ್ಕೆ ಸಿಲುಕಿಸುವ ಯೋಜನೆಯಾಗಿದೆ. ಶನಿವಾರ ನಡೆದ  ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಸಭ್ಯವಾಗಿ ನಡೆದುಕೊಂಡ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಒಂದು ವೇಳೆ ಅವರು ಆ ರೀತಿ ನಡೆದುಕೊಂಡಿದ್ದರೆ ತಪ್ಪು.

ಜಿಲ್ಲೆ ಜನರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಉಣಕಲ್‌ ಹಾಗೂ ನವಲೂರು ಕೆರೆಯನ್ನು ಸಂಪೂರ್ಣ ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದ್ದ ಶಾಸಕ ಅರವಿಂದ ಬೆಲ್ಲದ ಇಲ್ಲಿಯವರೆಗೂ ಅದನ್ನು ಮಾಡಿಲ್ಲ.

ಅವಳಿ ನಗರದ 48 ಸ್ಲಂಗಳಲ್ಲಿ ಇಂದಿಗೂ ಮೂಲ ಸೌಕರ್ಯದ ಕೊರತೆ ಇದೆ. ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಇಂದಿಗೂ ಶೌಚಾಲಯಗಳು ಇಲ್ಲ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಬೇಡಿಕೆ ಹಲವಾರು ವರ್ಷಗಳಿಂದ ಹಾಗೆಯೇ ಇದೆ ಎಂದರು. ಜೆಡಿಎಸ್‌ ಮುಖಂಡರಾದ ಶಾಂತವೀರ ಬೆಟಗೇರಿ, ಬಸವರಾಜ ಭಜಂತ್ರಿ, ಎಂ.ಎಫ್. ಹಿರೇಮಠ, ಮನೋಜ್‌ ಬಡಿಗೇರ ಪತ್ರಿಕಾಗೋಷ್ಠಿಯಲ್ಲಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next