Advertisement

ಜೋರಾಯ್ತು ಕೈ-ಕಮಲ ಬಂಡಾಯ

12:31 PM Apr 17, 2018 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಂಗ್ರೆಸ್‌ ಬಂಡಾಯದ ಬಿಸಿ ಜೋರಾಗಿದೆ. ತರೀಕೆರೆ ಕ್ಷೇತ್ರದ ಹಾಲಿ ಶಾಸಕ ಶ್ರೀನಿವಾಸ್‌ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಇತ್ತ ಚಿಕ್ಕಮಗಳೂರಿನಲ್ಲಿ ಗಾಯತ್ರಿ ಶಾಂತೇಗೌಡರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಲ್ಲದೆ, ಕಾಂಗ್ರೆಸ್‌ ಕಚೇರಿಗೆ ನುಗ್ಗಿ ದಾಂಧಲೆ ಮಾಡಿ ಕುರ್ಚಿಗಳನ್ನೆಲ್ಲ ಪುಡಿಗೈದಿದ್ದಾರೆ.

Advertisement

ಭಾನುವಾರ ರಾತ್ರಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಯಾಗುತ್ತಿದ್ದಂತೆಯೇ ತರೀಕೆರೆ ಹಾಗೂ ಚಿಕ್ಕಮಗಳೂರಿನಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು. ನಗರದಲ್ಲಿ ಗಾಯತ್ರಿ ಶಾಂತೇಗೌಡರ ಬೆಂಬಲಿಗರು ಟೈರ್‌ ಗೆ ಬೆಂಕಿ ಹಾಕಿ ಪ್ರತಿಭಟನೆ ನಡೆಸಿದ್ದರು. ತರೀಕೆರೆಯಲ್ಲಿ ಶಾಸಕ ಶ್ರೀನಿವಾಸ್‌ ಅವರ ಮನೆಯಲ್ಲೇ ಸಭೆ ನಡೆಸಿದ ಬೆಂಬಲಿಗರು ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಸೋಮವಾರ ನವದೆಹಲಿ ಯಿಂದ ಪಟ್ಟಣಕ್ಕೆ ವಾಪಸ್ಸಾದ ಶ್ರೀನಿವಾಸ್‌ ಕೂಡಲೆ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿಗೆ ಸೆಡ್ಡು ಹೊಡೆಯಲು ತಯಾರಾಗಿದ್ದಾರೆ. ಇನ್ನೊಂದೆಡೆ ಚಿಕ್ಕಮಗಳೂರು ನಗರದಲ್ಲಿ ಗಾಯತ್ರಿ ಶಾಂತೇಗೌಡರ ಬೆಂಬಲಿಗರು ಆಜಾದ್‌ ಪಾರ್ಕ್‌ ವೃತ್ತದಿಂದ ಕಾಂಗ್ರೆಸ್‌ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

ಕಾಂಗ್ರೆಸ್‌ ಮುಖಂಡರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಕಾಂಗ್ರೆಸ್‌ ವಿರುದ್ಧ ಪ್ರಚಾರ ಮಾಡಲಾಗುವುದು ಎಂದು ಬೆದರಿಕೆ ಹಾಕಿದರು. 

ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪಕ್ಷದ ಜಿಲ್ಲಾಧ್ಯಕ್ಷ ಡಾ|ಡಿ.ಎಲ್‌. ವಿಜಯಕುಮಾರ್‌ ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಕಾರ್ಯಕರ್ತರು ಕಚೇರಿಯೊಳಗಿದ್ದ ಕುರ್ಚಿಗಳನ್ನು ಪುಡಿ ಪುಡಿ ಮಾಡಿದರು. ಗಾಯತ್ರಿ ಶಾಂತೇಗೌಡ ಅವರಿಗೆ ಟಿಕೆಟ್‌ ಕೈ ತಪ್ಪಲು ವಿಜಯಕುಮಾರ್‌ ಅವರೇ ಕಾರಣ ಎಂದು ದೂರಿದ ಕಾರ್ಯಕರ್ತರು, ಅವರ ನಾಮಫಲಕವನ್ನು ರಸ್ತೆಗೆ ಬಿಸಾಡಿ ತುಳಿದು ಆಕ್ರೋಶ ವ್ಯಕ್ತಪಡಿಸಿದರು.
 
ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಕಾರ್ಯಕರ್ತರನ್ನು ಚುದುರಿಸಿ ವಿಜಯಕುಮಾರ್‌ ಅವರನ್ನು
ಸುರಕ್ಷಿತವಾಗಿ ಕಚೇರಿಯಿಂದ ಹೊರಗೆ ಕರೆದುಕೊಂಡು ಹೋದರು. ಜಿಪಂ ಸದಸ್ಯೆ ಪ್ರೇಮಾ ಮಂಜುನಾಥ್‌, ನಗರಸಭಾ ಸದಸ್ಯ ಎಚ್‌.ಎಸ್‌.ಪುಟ್ಟಸ್ವಾಮಿ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 
ಕಡೂರಲ್ಲೂ ಪ್ರತಿಭಟನೆ: ಜಿಲ್ಲೆಯ ಇನ್ನೊಂದು ಕ್ಷೇತ್ರ ಕಡೂರಲ್ಲಿಯೂ ಟಿಕೆಟ್‌ ದೊರೆಯದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಜಿಲ್ಲಾ ಪಂಚಾಯತ್‌ ಸದಸ್ಯ ಶರತ್‌ ಕೃಷ್ಣಮೂರ್ತಿ ಹಾಗೂ ಮುಖಂಡ ರಂಗನಾಥ್‌ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೆ.ಎಂ. ಕೆಂಪರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಮೈಸೂರಿಗೆ ತೆರಳಿದ್ದು, ಅವರು ವಾಪಸ್ಸಾದ ನಂತರ ಮುಂದಿನ ನಡೆಯ ಬಗ್ಗೆ ತೀರ್ಮಾನಿಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. 

ಬಂಡಾಯವಿಲ್ಲ : ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಾಯತ್ರಿ ಶಾಂತೇಗೌಡ, ನಾನು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದೆ. ಕಳೆದ ಬಾರಿ ತಮ್ಮ ಪತಿಗೆ ಪಕ್ಷ ಟಿಕೆಟ್‌ ನೀಡಿತ್ತು. ವಿಧಾನಪರಿಷತ್‌ ಸದಸ್ಯೆಯೂ ಕೂಡ ಆಗಿದ್ದೆ. ಈ ಬಾರಿ ಪಕ್ಷ ಟಿಕೆಟ್‌ ನೀಡದೆ ಇರುವುದು ಕಾರ್ಯಕರ್ತರಿಗೆ ನೋವಾಗಿದೆ ಎಂದರು.

ಪಕ್ಷದ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ. ಸಿದ್ದರಾಮಯ್ಯ ನಮ್ಮ ನಾಯಕರು, ಅವರು ನಮ್ಮ ಮಾರ್ಗದರ್ಶಕರು. ಅವರ ಮೇಲೆ ನನಗೆ ಅಪಾರ ಗೌರವವಿದೆ. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಉತ್ತಮವಾಗಿ ಸಹಕರಿಸಿದ್ದಾರೆ ಎಂದು ಹೇಳಿದರು. 

ನಾನು ಕಾಂಗ್ರೆಸ್‌ ಪಕ್ಷವನ್ನು ಯಾವುದೇ ಕಾರಣಕ್ಕೂ ತೊರೆಯುವುದಿಲ್ಲ. ಇದು, ನಾನು ಬೆಳೆಸಿದ ಪಕ್ಷ. ಕಾರ್ಯಕರ್ತರಿಗೆ ನೋವಾಗಿದೆ. ಅದುದರಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಕಾರ್ಯಕರ್ತರ ಮನವೊಲಿಸಲಾಗುವುದು. ಪಕ್ಷಕ್ಕಾಗಿ ಮುಂದೆಯೂ ದುಡಿಯುತ್ತೇನೆ  
ಎ.ವಿ. ಗಾಯತ್ರಿ ಶಾಂತೇಗೌಡ, ವಿ.ಪ. ಮಾಜಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next