Advertisement

ಈ ಬಾರಿ ಯಾರಿಗೆ ಗೆಲುವು ಮೀಸಲು?

07:15 AM May 01, 2018 | Team Udayavani |

ರಾಜಕೀಯ ಧ್ರುವೀಕರಣಕ್ಕೆ ಹೆಸರಾದ ಲಿಂಗಸುಗೂರು ಕ್ಷೇತ್ರ ಈ ಬಾರಿಯೂ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ. ಪûಾಂತರ ಪರ್ವ, ರಾಜಕೀಯ ಪಟ್ಟುತನಗಳಿಂದ ಗಮನ ಸೆಳೆದ ಇಲ್ಲಿನ ನಾಯಕರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

Advertisement

ಘಟಾನುಘಟಿ ನಾಯಕರ ಉಗಮಕ್ಕೆ ಕಾರಣವಾದ ಲಿಂಗಸುಗೂರು ಮೀಸಲು ಕ್ಷೇತ್ರ ನಾನಾ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. 2 ಬಾರಿ ಗೆಲ್ಲುವ ಮೂಲಕ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಂಡ ಮಾನಪ್ಪ ವಜ್ಜಲ್‌ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಚುನಾ ವಣೆಗೆ 3ತಿಂಗಳಿರುವಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಜೆಡಿಎಸ್‌ಗೆ ಗುಡ್‌ ಬೈ ಹೇಳಿ, ಮಾತೃಪಕ್ಷ ಬಿಜೆಪಿಗೆ ಸೇರಿದ್ದು, ಈ ಬಾರಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗೂ ಎಲ್ಲಿಲ್ಲದ ಕಸರತ್ತು ನಡೆದಿತ್ತು. 

ಮೊದಲ ಬಾರಿಗೆ ಬಿಜೆಪಿಯಿಂದ ಗೆದ್ದು ಬೀಗಿದ್ದ ಮಾನಪ್ಪ ವಜ್ಜಲ್‌, ನಂತರ ಜೆಡಿಎಸ್‌ ಸೇರಿ ಅಲ್ಲೂ ಗೆಲುವಿನ ನಗೆ ಬೀರಿದ್ದರು. ಈ ಬಾರಿ ಪುನಃ ಬಿಜೆಪಿ ಸಖ್ಯ ಬೆಳೆಸಿದ್ದಾರೆ. ಬಿಜೆಪಿ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದ ಸಿದ್ದು ಬಂಡಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ. ಇದರಿಂದ ಅಸಮಾಧಾನಗೊಂಡ ಮಾಜಿ ಸಚಿವ ಹನು ಮಂತಪ್ಪ ಆಲ್ಕೋಡ್‌ ಜೆಡಿಎಸ್‌ ತೊರೆದು ಪುನಃ ಕಾಂಗ್ರೆಸ್‌ ಸೇರಿದರು. ಹೀಗೆ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ನಡೆದು ರಾಜಕೀಯ ಲೆಕ್ಕಾಚಾರ ತಲೆಕೆಳಗೆ ಮಾಡಿದೆ. ಕಾಂಗ್ರೆಸ್‌ನಿಂದ ಡಿ.ಎಸ್‌. ಹೂಲಗೇರಿ ಕಣಕ್ಕಿಳಿದಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಎರಡು ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿಗತ ವರ್ಚಸ್ಸಿಗೆ ಇಲ್ಲಿನ ಮತ ದಾರ ಮಣೆ ಹಾಕಿದ್ದಾನೆ. ಈ ಬಾರಿಯೂ ವ್ಯಕ್ತಿಗತ ವರ್ಚಸ್ಸಿಗೆ  ಒತ್ತು ನೀಡುವ ಸಾಧ್ಯತೆಗಳಿವೆ.

ಅಖಾಡದಲ್ಲಿ ಸಿಪಿಎಂ ರೆಡ್‌ ಸ್ಟಾರ್‌: ಹೋರಾಟದಿಂದಲೇ ಗುರುತಿಸಿಕೊಂಡ ಆರ್‌.ಮಾನಸಯ್ಯ ಈ ಬಾರಿ ಸಿಪಿಎಂ ರೆಡ್‌ ಸ್ಟಾರ್‌ ಪಕ್ಷದಿಂದ ಕಣದಲ್ಲಿದ್ದಾರೆ. ಹಿಂದುಳಿದ, ದಲಿತ ಪರ ಹೋರಾಟ ಕೈಗೊಂಡ ಅವರ ಬಗ್ಗೆ ಕ್ಷೇತ್ರ ದಲ್ಲಿ ಉತ್ತಮ ಅಭಿಪ್ರಾಯವಿದೆ.  ಜನ ಸಂಗ್ರಾಮ ಪರಿಷತ್‌, ಜನಾಂದೋಲನಾ ಮಹಾಮೈತ್ರಿ ಸಂಘಟನೆ ಗಳ ಬೆಂಬಲದಿಂದ ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಗೆಲುವಲ್ಲ ದಿದ್ದರೂ ಗಣನೀಯ ಪ್ರಮಾಣದ ಮತ ಪಡೆದಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ತೊಂದರೆಯಾಗಬಹುದು.

ಜಾತಿ ಲೆಕ್ಕಾಚಾರ ಹೇಗಿದೆ?: ಮೀಸಲು ಕ್ಷೇತ್ರ ವಾದ ಇಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಪ್ರಾಬಲ್ಯವಿದೆ. 60 ಸಾವಿರಕ್ಕೂ ಅ ಧಿಕ ಪರಿಶಿಷ್ಟ ಜಾತಿ ಜನಸಂಖ್ಯೆಯಿದೆ. ಅದರಲ್ಲಿ 40 ಸಾವಿರ ಮಾದಿಗರಿದ್ದಾರೆ. ಅದು ಬಿಟ್ಟರೆ ಪರಿಶಿಷ್ಟ ವರ್ಗ ಜನಸಂಖ್ಯೆ ಗಣನೀಯವಾ ಗಿದ್ದು, 40 ಸಾವಿರಕ್ಕೂ ಅ ಧಿಕ ಜನಸಂಖ್ಯೆ ಹೊಂದಿದೆ. 28 ಸಾವಿರ ಕುರುಬ ಸಮುದಾ ಯ ವಿದ್ದರೆ, 22 ಸಾವಿರ ಲಿಂಗಾಯತರಿದ್ದಾರೆ. ಮುಸ್ಲಿಮರು 20 ಸಾವಿರ ಸಂಖ್ಯೆ ಯಲ್ಲಿದ್ದರೆ, 18 ಸಾವಿರ ಲಂಬಾಣಿ ಜನಾಂಗದ ವರಿದ್ದಾರೆ. ಹೀಗಾಗಿ ಇಲ್ಲಿ ಪರಿಶಿಷ್ಟ ಜಾತಿಯೇ ನಿರ್ಣಾಯಕವಾಗಿದೆ. 

Advertisement

ನಿರ್ಣಾಯಕ ಅಂಶವೇನು?
ಇದು ಪರಿಶಿಷ್ಟ ಜಾತಿಗೆ ಮೀಸಲಾದ ಜಿಲ್ಲೆಯ ಏಕೈಕ ಕ್ಷೇತ್ರ. ಎಲ್ಲ ಪಕ್ಷಗಳು ದಲಿತರಾದ ಸ್ಪೃಶ್ಯ ಸಮಾಜದ ಮುಖಂಡರಿಗೆ ಟಿಕೆಟ್‌ ನೀಡುತ್ತಿದ್ದು, ಅಸ್ಪೃಶ್ಯರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಅದರಲ್ಲೂ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಅಸ್ಪೃಶ್ಯರಿಗೇ ನೀಡಬೇಕು ಎಂಬ ಬಲವಾದ ಒತ್ತಾಯವಿತ್ತು. ಆದರೂ ಹೈಕಮಾಂಡ್‌ ಮಣೆ ಹಾಕಿಲ್ಲ. ಅಸ್ಪೃಶ್ಯ ಸಮಾಜದವರು ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಈ ಅಂಶವೇ ದೊಡ್ಡ ತಿರುವು ತಂದು ಕೊಡಬಹುದು ಎನ್ನಲಾಗುತ್ತಿದೆ.  

10 ವರ್ಷಗಳಲ್ಲಿ ಕ್ಷೇತ್ರದ ಶಾಸಕರ ಸಾಧನೆ ಶೂನ್ಯ. ಶಾಸಕರ ಆಡಳಿತ ವೈಫಲ್ಯ, ರಾಜ್ಯ ಸರಕಾರದ ಸಾಧನೆಗಳನ್ನು ಜನರ ಮುಂದಿಟ್ಟು ಮತ ಯಾಚಿಸುತ್ತಿದ್ದೇವೆ. ಈ ಬಾರಿ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಟಿಕೆಟ್‌ಗಾಗಿ ಪೈಪೋಟಿ ಇದ್ದಿದ್ದು ನಿಜ. 
– ಡಿ.ಎಸ್‌. ಹೂಲಗೇರಿ, ಕಾಂಗ್ರೆಸ್‌ ಅಭ್ಯರ್ಥಿ

ಕಾಂಗ್ರೆಸ್‌ ಸರಕಾರದ ವೈಫಲ್ಯ, ಬಿಜೆಪಿ ನೇತೃತ್ವದ ಕೇಂದ್ರದ ಸಾಧನೆಗಳೇ ನಮ್ಮ ಗೆಲುವಿಗೆ ಪೂರಕ. 2 ಬಾರಿ ಶಾಸಕನಾಗಿ ಜನರ ವಿಶ್ವಾಸ ಸಂಪಾದಿಸಿದ್ದೇನೆ. ಪಕ್ಷಾಂತರ ಮಾಡಿದರೂ ಕಾರ್ಯಕರ್ತರ, ಕ್ಷೇತ್ರದ ಜನರ ಅಭಿಪ್ರಾಯ ಪಡೆದೇ ಮಾಡಿದ್ದೇನೆ. 
– ಮಾನಪ್ಪ ವಜ್ಜಲ್‌, ಬಿಜೆಪಿ ಅಭ್ಯರ್ಥಿ

– ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next