ದಾವಣಗೆರೆ : ರಾಜ್ಯ ಬಿಜೆಪಿ ಸರ್ಕಾರ ಎಲ್ಲಾ ಹಿಂದುಳಿದ ಸಮಾಜಗಳ ಅಭಿವೃದ್ದಿಗೆ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಹರಿಹರ ತಾಲೂಕಿನ ಬೆಳ್ಳೂಡಿ ಸಮೀಪದ ಕಾಗಿನಲೆ ಕನಕ ಗುರು ಶಾಖಾ ಮಠದ 5ನೇ ವಾರ್ಷಿಕೋತ್ಸವ ನಿಮಿತ್ತ ಭಾನುವಾರ ಪೀಠದ ಆವರಣದಲ್ಲಿ ನೂತನ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಎಲ್ಲಾ ಸಮುದಾಯಗಳ ಅಭಿವೃದ್ದಿಗೆ ಸರ್ಕಾರ ಆದ್ಯತೆ ನೀಡಿದ್ದು, ಈ ದಿಸೆಯಲ್ಲಿ ಶೇ.50ರ ಮೀಸಲಾತಿ ಮಿತಿಯನ್ನು ಹೆಚ್ಚಿಸಲು ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ ಎಂದರು.
ಹಾಲುಮತ ಸಮಾಜವನ್ನು ಎಸ್ಟಿ ಮೀಸಲಾತಿ ವರ್ಗಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕುಲಶಾಸ್ತ ಅಧ್ಯಯನ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ. ಶ್ರೀಗಳ, ಸಮಾಜದ ಅಪೇಕ್ಷೆ ಪೂರೈಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ದೇಶದ ಅತಿ ಎತ್ತರದ ಏಕಶಿಲಾ ಪುತ್ಥಳಿಯಾಗಲಿರುವ ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಕನಕದಾಸರ ಪುತ್ಥಳಿ ಪ್ರತಿಷ್ಠಾಪನೆಗೆ 5 ಕೋಟಿ ಮಂಜೂರು ಮಾಡಿರುವುದಾಗಿ ತಿಳಿಸಿದ ಅವರು ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಅನುದಾನದ ಲಭ್ಯತೆ ಆಧರಿಸಿ ಹಂತಹತವಾಗಿ 30 ಕೋಟಿ ಮಂಜೂರು ಮಾಡುವುದಾಗಿ ತಿಳಿಸಿದರು.
ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕನಕದಾಸರು ಸಾಮಾಜಿಕ ಮೌಲ್ಯಗಳನ್ನು ಸರಳ ಭಾಷೆಯಲ್ಲಿ ಪ್ರಚುರಪಡಿಸಿದವರು. ಜಾತ್ಯತೀತ ಬದುಕಿಗೆ ಮಾದರಿಯಾದ ದಾಸ ಶ್ರೇಷ್ಠರ ಉನ್ನತ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು. ಗೃಹ ಸಚಿವ ಬಸರಾಜ್ ಬೊಮ್ಮಾಯಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಇತರರು ಇದ್ದರು.