ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ, ಸುಧಾರಣಾ ಅಜೆಂಡಾ ಹಾಗೂ ನೋಟು ಅಪನಗದೀಕರಣ ಘೋಷಣೆಗೆ ಜನಾಭಿಪ್ರಾಯ ಎಂದೇ ಬಿಂಬಿತವಾಗಿದ್ದ ಪಂಚರಾಜ್ಯಗಳ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಎಲ್ಲಾ ಸಮೀಕ್ಷೆಗಳ ಲೆಕ್ಕಚಾರ ತಲೆಕೆಳಗಾಗಿದ್ದಲ್ಲದೆ, ಜಾತಿ ಹಾಗೂ ಕುಟುಂಬ ರಾಜಕಾರಣವನ್ನು ತಿರಸ್ಕರಿಸಿದ ಮತದಾರನ ತೀರ್ಪಿನಿಂದಾಗಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಉತ್ತರಾಖಂಡ್ ನಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಪಂಜಾಬ್ ಕೈವಶವಾಗಿದ್ದರೆ, ಮಣಿಪುರ, ಗೋವಾದಲ್ಲಿ ಅತಂತ್ರ ವಿಧಾನಸಭೆಯಾಗಿದೆ. 403 ಸದಸ್ಯ ಬಲದ ಉತ್ತರಪ್ರದೇಶ ವಿಧಾನಸಭೆಯಲ್ಲಿ ಪ್ರಧಾನಿ ಮೋದಿ ಬಿರುಗಾಳಿಗೆ ಸಮಾಜವಾದಿ ಪಕ್ಷ, ಕಾಂಗ್ರೆಸ್ ಹಾಗೂ ಮಾಯಾವತಿಯ ಬಹುಜನ ಸಮಾಜಪಕ್ಷ ಧೂಳೀಪಟವಾಗಿ ಹೋಗಿದ್ದು, ಬಿಜೆಪಿ 325 ಸ್ಥಾನ ಗಳಿಸುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದೆ. ಜೊತೆಗೆ 15 ವರ್ಷಗಳ ಬಳಿಕ ಯುಪಿಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿದಂತಾಗಿದೆ. ಉತ್ತರಪ್ರದೇಶದ 105 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷ ಕೇವಲ 7ಸ್ಥಾನಗಳಲ್ಲಷ್ಟೇ ಜಯ ಸಾಧಿಸುವ ಮೂಲಕ ಹೀನಾಯ ಸೋಲನ್ನು ಅನುಭವಿಸಿದೆ. ಯುಪಿಯಲ್ಲಿ ಬಿಜೆಪಿ ಮೈತ್ರಿಕೂಟವಾದ ಅನುಪಮಾ ಪಟೇಲ್ ನೇತೃತ್ವದ ಅಪ್ನಾ ದಳ್ 11 ಕ್ಷೇತ್ರದಲ್ಲಿ ಸ್ಪರ್ಧಿಸಿ 9ರಲ್ಲಿ ವಿಜಯ ಸಾಧಿಸಿದೆ. 117 ಸದಸ್ಯಬಲದ ಪಂಜಾಬ್ ವಿಧಾನಸಭೆಯಲ್ಲಿ ಕಾಂಗ್ರೆಸ್ 77 ಸ್ಥಾನ ಪಡೆದು ಜಯಭೇರಿ ಬಾರಿಸಿದ್ದರೆ, ಆಡಳಿತಾರೂಢ ಎಸ್ ಎಡಿ, ಬಿಜೆಪಿ ಮೈತ್ರಿಕೂಟ ಕೇವಲ 18 ಸ್ಥಾನ ಪಡೆದು ಮುಖಭಂಗ ಅನುಭವಿಸಿದ್ದರೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ 20 ಸ್ಥಾನ ಗಳಿಸಿ ದ್ವಿತೀಯ ಸ್ಥಾನ ಪಡೆದಿದೆ. ಉತ್ತರಾಖಂಡ್ ನಲ್ಲಿ ಬಿಜೆಪಿ 57 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರೆ, ಕಾಂಗ್ರೆಸ್ 11 ಸ್ಥಾನ ಪಡೆದು ಹೀನಾಯ ಸೋಲನ್ನನುಭವಿಸಿದೆ. ಗೋವಾದಲ್ಲಿ ಆಡಳಿತಾರೂಢ ಬಿಜೆಪಿ 13 ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸಿದ್ದು, ಕಾಂಗ್ರೆಸ್ 17 ಸ್ಥಾನ ಪಡೆದಿದ್ದು, ಪಕ್ಷೇತರರು 10 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಮಣಿಪುರದಲ್ಲಿ ಕಾಂಗ್ರೆಸ್ 28 ಸ್ಥಾನಗಳಲ್ಲಿ ಗೆಲುವಿನ ನಗು ಬೀರಿದ್ದು, ಬಿಜೆಪಿ 21 ಸ್ಥಾನ ಪಡೆದಿದೆ.