Advertisement

BJP ಅಭ್ಯರ್ಥಿ ಆಯ್ಕೆಗೆ ತಡರಾತ್ರಿವರೆಗೂ ಕಸರತ್ತು: ಪಟ್ಟಿ ಸ್ವತಃ ಪರಿಶೀಲಿಸಿದ ಪ್ರಧಾನಿ

12:47 AM Mar 12, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಈಗಾಗಲೇ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್‌ ಹಾಗೂ ಬಿಜೆಪಿ, ಉಳಿದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗಾಗಿ ಇನ್ನಿಲ್ಲದ ಕಸರತ್ತು ನಡೆಸಿವೆ. ಸೋಮವಾರ ತಡರಾತ್ರಿವರೆಗೆ ದೆಹಲಿಯಲ್ಲಿ ಎರಡೂ ಪಕ್ಷಗಳ ಕೇಂದ್ರ ಚುನಾವಣ ಸಮಿತಿಗಳ ಸಭೆ ನಡೆದಿವೆ. ಆದರೆ, ಪಟ್ಟಿ ಮಾತ್ರ ಬಹಿರಂಗವಾಗಿಲ್ಲ.

Advertisement

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಸಿಇಸಿ ಸಭೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಹರಿಯಾಣದ ಲೋಕಸಭಾ ಕ್ಷೇತ್ರಗಳ ಟಿಕೆಟ್‌ ಕುರಿತು ಸಮಾಲೋಚನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಧಾನಿ ಮೋದಿಯವರೇ ಸ್ವತಃ ಪರಿಶೀಲಿಸಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ಮಹಾರಾಷ್ಟ್ರ, ಒಡಿಶಾ, ಆಂಧ್ರಪ್ರದೇಶ, ಹರ್ಯಾಣ, ಕರ್ನಾಟಕ, ಬಿಹಾರದ ಎನ್‌ಡಿಎ ಮಿತ್ರಪಕ್ಷಗಳ ಪ್ರಮುಖರೂ ಭಾಗಿಯಾಗಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. ಈಗಾಗಲೇ ಬಿಜೆಪಿ 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 195 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಚೌಟಾಲ-ನಡ್ಡಾ ಮಾತುಕತೆ: ಸಭೆಗೂ ಮುನ್ನ ಹರ್ಯಾಣ ಡಿಸಿಎಂ, ಜನನಾಯಕ ಜನತಾ ಪಾರ್ಟಿ ನಾಯಕ ದುಶ್ಯಂತ್‌ ಚೌಟಾಲ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸಿದ್ದಾರೆ. ಹರ್ಯಾಣದಲ್ಲಿ ಬಿಜೆಪಿಯ ಕೆಲವು ನಾಯಕರು ಈ ಮೈತ್ರಿಗೆ ವಿರೋಧಿಸಿದ್ದಾರೆ. ಆದರೆ, ಬಿಜೆಪಿ ಕೇಂದ್ರ ನಾಯಕತ್ವ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 10 ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿತ್ತು.

ಬಿಜೆಪಿ ಜತೆ ಕೈಜೋಡಿಸಿದ ದಿನಕರನ್‌ ಪಕ್ಷ: ತಮಿಳುನಾಡಿನಲ್ಲಿ ಬಿಜೆಪಿ ಜತೆಗೂಡಿ ಲೋಕಸಭೆ ಚುನಾವಣೆ ಎದುರಿಸುವುದಾಗಿ ಅಮ್ಮಾ ಮಕ್ಕಳ್‌ ಮುನ್ನೇತ್ರ ಕಳಗಂ (ಎಎಂಎಂಕೆ) ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್‌ ಸೋಮವಾರ ಘೋಷಿಸಿದ್ದಾರೆ. ಬಿಜೆಪಿ ಮೈತ್ರಿಕೂಟಕ್ಕೆ ನಾವು ಬೇಷರತ್‌ ಬೆಂಬಲ ನೀಡಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.

ತಪ್ಪಿದ  ಟಿಕೆಟ್‌: ಬಿಜೆಪಿ ಸಂಸದ ರಾಹುಲ್‌ ಕಾಂಗ್ರೆಸ್‌ಗೆ ಸೇರ್ಪಡೆ

Advertisement

ಭೋಪಾಲ್‌: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ರಾಜಸ್ಥಾನದ ಚುರು ಕ್ಷೇತ್ರದ ಹಾಲಿ ಬಿಜೆಪಿ ಸಂಸದ ರಾಹುಲ್‌ ಕಸ್ವಾನ್‌ ಸೋಮ ವಾರ ಕಾಂಗ್ರೆಸ್‌ಗೆ ಸೇರ್ಪಡೆ ಗೊಂಡಿದ್ದಾರೆ. 2014ರಿಂದ ಸತತ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಕಸ್ವಾನ್‌ ಬದ ಲಿಗೆ ಬಿಜೆಪಿಯು ಈ ಬಾರಿ ಪ್ಯಾರಾಲಿಂಪಿಯನ್‌ ದೇವೇಂದ್ರರಿಗೆ ಟಿಕೆಟ್‌ ನೀಡಿತ್ತು. 2004 ಮತ್ತು 2009ರಲ್ಲಿ ಕಸ್ವಾನ್‌ ತಂದೆ ರಾಮ್‌ ಸಿಂಗ್‌ ಕಸ್ವಾನ್‌ ಇದೇ ಕ್ಷೇತ್ರದಿಂದ ಸಂಸದರಾಗಿದ್ದು, ಕಳೆದೆರಡು ದಶಕಗಳಿಂದಲೂ ಚುರು ಕ್ಷೇತ್ರ ಕಸ್ವಾನ್‌ ಕುಟುಂಬದ ಹಿಡಿತದಲ್ಲಿದೆ.

ಚುನಾವಣ ಲಾಭಕ್ಕಾಗಿ ಕಾಂಗ್ರೆಸ್‌ ಜತೆ ಆಪ್‌ ಮೈತ್ರಿ: ಸಚಿವ ಅಮಿತ್‌ ಶಾ ಕಿಡಿ

ಹೊಸದಿಲ್ಲಿ: ಕಾಂಗ್ರೆಸ್ಸಿಗರು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಬೊಬ್ಬಿರಿಯುತ್ತಿದ್ದ ಆಪ್‌ ನಾಯಕರು, ಈಗ ಚುನಾವಣ ಲಾಭಕ್ಕಾಗಿ ಕಾಂಗ್ರೆಸ್‌ ಜತೆಗೇ ಕೈ ಜೋಡಿಸಿದ್ದಾರೆ. ಮೈತ್ರಿ ಮಾಡಿಕೊಳ್ಳುವುದನ್ನು ನೀವು ಮುಂದುವರೆಸಿದರೂ, ಪ್ರಧಾನಿ ಮೋದಿ 400ಕ್ಕೂ ಅಧಿಕ ಸ್ಥಾನಗಳೊಂದಿಗೆ ಮರಳಿ ಅಧಿಕಾರ ಹಿಡಿಯುವುದು ಖಚಿತ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೋಮವಾರ ದೆಹಲಿಯಲ್ಲಿ ಹೇಳಿದ್ದಾರೆ. “ರಾಜಕೀಯದಲ್ಲಿ 2 ರೀತಿಯ ನಾಯಕರಿರುತ್ತಾರೆ. 1 ವರ್ಗ ತಾವು ನುಡಿದಂತೆ ನಡೆದುಕೊಂಡರೆ, ಮತ್ತೂಂದು ವರ್ಗ ಇದಕ್ಕೆ ತದ್ವಿರುದ್ಧ. ದೆಹಲಿಯಲ್ಲಿ ಈ ಎರಡೂ ರೀತಿಯ ನಾಯಕರಿದ್ದು, ಮೋದಿ ನುಡಿದಂತೆ ಕೆಲಸ ಮಾಡಿದರೆ ಕೇಜ್ರಿವಾಲ್‌ ಆಡಿದ ಮಾತಿನಂತೆ ನಡೆದುಕೊಳ್ಳುವುದೇ ಇಲ್ಲ’ ಎಂದಿದ್ದಾರೆ.

ತಮಿಳುನಾಡು ಬಿಜೆಪಿ ಸೇರಿದ ಸೂಪರ್‌ ಸ್ಟಾರ್‌ ರಜಿನಿ ಅಭಿಮಾನಿಗಳು

ಚೆನ್ನೈ: ನೆರೆಯ ತಮಿಳುನಾಡಿನಲ್ಲಿ ಲೋಕಸಭೆ ಚುನಾವಣ ಕಣ ದಿನೇ ದಿನೆ ರಂಗೇರುತ್ತಿದ್ದು, ಸೂಪರ್‌ಸ್ಟಾರ್‌ ರಜಿನಿಕಾಂತ್‌ ಅಭಿಮಾನಿಗಳ ಸಂಘದ ಹಲವು ಸದಸ್ಯರು ಸೋಮವಾರ ಬಿಜೆಪಿಗೆ ಸೇರಿದ್ದಾರೆ. ನೂತನವಾಗಿ ಪಕ್ಷ ಸೇರಿದ ನಾಯಕರನ್ನು ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ಹಿರಿಯ ನಾಯಕ ಹೆಚ್‌. ರಾಜಾ ಅವರು ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಅಲ್ಲದೆ, ಲೋಕಸಭಾ ಚುನಾವಣೆಗೆ ಡಿಎಂಕೆ ಮತ್ತು ಎಐಎಡಿಎಂಕೆ ಹೊರತುಪಡಿಸಿ ಇತರ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಉಮೇದಿನಲ್ಲಿರುವ ಬಿಜೆಪಿ, ಸೋಮವಾರ ನಡೆದ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next