Advertisement

‘ರಾಮ’ಕಮಲಕ್ಕೆ ಮುಖಭಂಗ

06:00 AM Nov 02, 2018 | Team Udayavani |

ಬೆಂಗಳೂರು: ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್‌. ಚಂದ್ರಶೇಖರ್‌ ಕಣದಿಂದ ಹಿಂದೆ ಸರಿದಿದ್ದಾರೆ. ಈ ಮೂಲಕ ಬಿಜೆಪಿಗೆ ದೊಡ್ಡ “ಶಾಕ್‌’
ನೀಡಿದ್ದಾರೆ. ರಾಮನಗರದಲ್ಲಿ ತಮ್ಮ ನಿಯಮ ಮೀರಿ ಯಾವುದೂ ನಡೆಯದು ಎನ್ನುವ ಸಂದೇಶವನ್ನು ಡಿಕೆ ಸಹೋದರರು ರವಾನಿಸಿದ್ದಾರೆ.

Advertisement

ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯೊಬ್ಬರು ಚುನಾವಣೆಯಿಂದ ಹಿಂದೆ ಸರಿದು ವಿರೋಧಿ ಪಾಳಯಕ್ಕೆ ಸೇರಿರುವುದು ಉಪ ಚುನಾವಣೆಯ ಲೆಕ್ಕಾಚಾರವನ್ನೇ ಬದಲಾಯಿಸಿದೆ. ಅಷ್ಟೇ ಅಲ್ಲ, ಬಿಜೆಪಿ ತಳಮಳಕ್ಕೂ ಕಾರಣವಾಗಿದೆ. ಮೂಲತಃ ಕಾಂಗ್ರೆಸ್ಸಿಗರಾದ ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪುತ್ರ ಎಲ್‌. ಚಂದ್ರಶೇಖರ್‌ ರಾಮನಗರದಲ್ಲಿ ಜೆಡಿ ಎ ಸ್‌ ಅಭ್ಯರ್ಥಿ ಕಣಕ್ಕಿಳಿಸಿರುವ ಬಗ್ಗೆ ಆಕ್ಷೇಪಿಸಿ ಪಕ್ಷದ ನಾಯಕರ ವಿರುದಟಛಿ ಮುನಿಸಿಕೊಂಡು ಚುನಾವಣೆಗೂ ಮೊದಲು ಬಿಜೆಪಿ ಸೇರಿದ್ದರು. ಅಲ್ಲದೇ, ಬಿಜೆಪಿ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅವರು, ಗುರುವಾರ ಬೆಳಗ್ಗೆ ಸಂಸದ ಡಿ.ಕೆ. ಸುರೇಶ್‌ ಜೊತೆ ಅವರ
ನಿವಾಸದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಿಜೆಪಿಗೆ ದೊಡ್ಡ ಆಘಾತ ಉಂಟು ಮಾಡಿದ್ದಾರೆ.

ಸಂಸದ ಡಿ.ಕೆ.ಸುರೇಶ್‌ ಅವರೊಂದಿಗೆ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಲ್‌. ಚಂದ್ರಶೇಖರ್‌, ಬಿಜೆಪಿಯವರು ಚುನಾವಣೆಗೂ ಮೊದಲು ನನ್ನನ್ನು ಅಭ್ಯರ್ಥಿ ಮಾಡುವುದಾಗಿ ಪಕ್ಷಕ್ಕೆ ಸೇರಿಸಿಕೊಂಡು ಚುನಾವಣೆಯಲ್ಲಿ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಚುನಾವಣೆ ಪ್ರಚಾರ ಆರಂಭವಾದ ಮೇಲೆ ಯಾವ ನಾಯಕರೂ ರಾಮನಗರದ ಕಡೆಗೆ ತಿರುಗಿ ನೋಡಲೇ ಇಲ್ಲ ಎಂದು ಆರೋಪಿಸಿದರು.

ಕಳೆದ ಎರಡು ದಿನದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರಿಗೆ ದೂರವಾಣಿ ಕರೆ ಮಾಡಿದರೂ ಯಾರೂ ಸ್ಪಂದಿಸುತ್ತಿಲ್ಲ. ಬುಧವಾರ ಜಿಲ್ಲಾ ಮುಖಂಡ ರುದ್ರೇಶ್‌ ಅವರ ಮೊಬೈಲ್‌ ಮೂಲಕ ಬಿಎ ಸ್‌ ವೈ ಅವರನ್ನು ಸಂಪರ್ಕಿಸಿ ಮಾತನಾಡಲು ಪ್ರಯತ್ನಿಸಿದೆ. ಆಗ ನನ್ನೊಂದಿಗೆ ಮಾತನಾಡಲೂ ನಿರಾಕರಿಸಿದ ಯಡಿಯೂರಪ್ಪನವರು, ರುದ್ರೇಶ್‌ಗೆ ಮೊಬೈಲ್‌ ಕೊಡುವಂತೆ ಹೇಳಿದರು. ನನ್ನನ್ನು ಬಿಜೆಪಿಗೆ ಸೇರಿಸಿಕೊಂಡು ಬಲಿಪಶು ಮಾಡಿದರು ಎಂದು ಆರೋಪಿಸಿದರು.

ಬಿಜೆಪಿ ನಾಯಕರಲ್ಲಿ ಒಗ್ಗಟ್ಟಿಲ್ಲ. ಯಾವುದೇ ನಾಯಕರೂ ರಾಮನಗರದ ಕಡೆಗೆ ಆಗಮಿಸುತ್ತಿಲ್ಲ. ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಎಲ್ಲೋ ಒಂದು ಕಡೆ ಬಂದು ಮಾಧ್ಯಮಗಳಿಗೆ ಮಾತನಾಡಿ ತೆರಳುತ್ತಿದ್ದರು. ತುಳಸಿ ಮುನಿರಾಜುಗೌಡ ಹಾಗೂ ರುದ್ರೇಶ್‌ ಮಾತ್ರ ನನ್ನ ಜೊತೆಗೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು ಎಂದರು.

Advertisement

ಯೋಗೇಶ್ವರ್‌ ಕಾರಣ: ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್‌ ಚುನಾವಣೆಯಲ್ಲಿ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಹೇಳಿ, ಪ್ರಚಾರದ ಸಂದರ್ಭದಲ್ಲಿ ದೂರ ಉಳಿದರು. ಕಳೆದ ಎರಡು ದಿನಗಳಿಂದ ದೂರವಾಣಿ ಕರೆ ಮಾಡಿದರೂ ನನ್ನ ಕರೆ
ಸ್ವೀಕರಿಸಲಿಲ್ಲ. ಯೋಗೇಶ್ವರ್‌ ಮಾತು ನಂಬಿ ಬಿಜೆಪಿಗೆ ಹೋಗಬೇಡ ಎಂದು ನನ್ನ ತಂದೆ ನನಗೆ ಸಲಹೆ ನೀಡಿದ್ದರು. ತಂದೆ ಮಾತು ಕೇಳದೆ, ನನ್ನ ರಾಜಕೀಯ ಭವಿಷ್ಯ ಗುರುತಿಸಿಕೊಳ್ಳುವುದಾಗಿ ಹೇಳಿದ್ದೆ. ಯೋಗೇಶ್ವರ್‌  ನಂಬಿ ತಪ್ಪು ಮಾಡಿದೆ ಎಂದು ಹೇಳಿದರು.

ಆಸೆ ತೋರಿಸಿದರು: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಕಾಂಗ್ರೆಸ್‌ನ ಹತ್ತು ಹದಿನೈದು ಶಾಸಕರು ನಮ್ಮ ಜೊತೆ ಇದ್ದಾರೆ. ಉಪ ಚುನಾವಣೆ ನಂತರ ಸರ್ಕಾರ ಪತನವಾಗುತ್ತದೆ ಎಂದು ಹೇಳಿದ್ದರು. ಆದರೆ, ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿಕೊಂಡು ಬರುವ ಇಚ್ಛೆ ಅವರಿಗೆ ಇರಲಿಲ್ಲ. ಮಾಜಿ ಉಪ ಮುಖ್ಯಮಂತ್ರಿ ಆರ್‌. ಅಶೋಕ್‌ ಪ್ರತಿ ದಿನ ಮಂಡ್ಯಕ್ಕೆ ತೆರಳುವಾಗಲೂ
ರಾಮನಗರದಲ್ಲಿ ನಿಂತು ಮಾತನಾಡುತ್ತಿರಲಿಲ್ಲ. ಬಿಜೆಪಿ ನಾಯಕರ ನಡವಳಿಕೆ ಬೇಸರ ತಂದಿದೆ. ಹೀಗಾಗಿ ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ. ಅಲ್ಲದೇ ಸಹವಾಸವೇ ಬೇಡ ಎಂದು ನನ್ನ ಮಾತೃಪಕ್ಷಕ್ಕೆ ಹಿಂದಿರುಗಿದ್ದೇನೆ. ನನ್ನ ಆತ್ಮಸ್ಥೈರ್ಯ ಕುಗ್ಗದಂತೆ ನೋಡಿಕೊಂಡ ಕಾಂಗ್ರೆಸ್‌ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗೆ ನನ್ನ ಬೆಂಬಲ ಸೂಚಿಸುತ್ತೇನೆ ಎಂದರು.

ಕ್ಷೇತ್ರದ ಜನತೆಯ ಕ್ಷಮೆ ಕೇಳುವೆ: ಮೂಲತಃ ಕಾಂಗ್ರೆಸ್‌ ವ್ಯಕ್ತಿಯಾಗಿದ್ದರೂ, ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ಧೆ ಮಾಡಿ ಈಗ ಕಣದಿಂದ ಹಿಂದೆ ಸರಿಯುತ್ತಿರುವುದಕ್ಕೆ ಕ್ಷೇತ್ರದ ಜನತೆಯ ಕ್ಷಮೆ ಕೇಳುತ್ತೇನೆ. ನನ್ನ ತಂದೆ ತಾಯಿಯ ಮಾತು ಮೀರಿ ಬಿಜೆಪಿ ಸೇರಿಕೊಂಡಿದ್ದೆ. ಅವರ ಕ್ಷಮೆಯನ್ನೂ ಕೋರುತ್ತೇನೆ ಎಂದು ಹೇಳಿದರು. 

ಮೊದಲೇ ನಿರ್ಧಾರವಾಗಿತ್ತಾ ಮಾಸ್ಟರ್‌ ಪ್ಲಾನ್‌?
ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪುತ್ರ ಎಲ್‌.ಚಂದ್ರಶೇಖರ್‌ ಬಿಜೆಪಿ ಸೇರಿ ಮತ್ತೆ ಕಾಂಗ್ರೆಸ್‌ಗೆ ವಾಪಸ್‌ ಬಂದಿರುವ ಹಿಂದೆ ಡಿಕೆ ಸಹೋದರರ ಮಾಸ್ಟರ್‌ ಪ್ಲಾನ್‌ ಇತ್ತು ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ. ಮೈತ್ರಿ ಪಕ್ಷದ ಅಭ್ಯರ್ಥಿಯನ್ನಾಗಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಿದಾಗ ರಾಮನಗರದಲ್ಲಿ ಕಾಂಗ್ರೆಸ್‌ ಸ್ಥಳೀಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ, ಜೆಡಿಎಸ್‌ ಅಭ್ಯರ್ಥಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ರಾಮನಗರದಲ್ಲಿ ಪ್ರಭಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಅನಿತಾ ಗೆಲುವಿಗೆ ಕಷ್ಟವಾಗಲಿದೆ ಎನ್ನುವ ಕಾರಣಕ್ಕೆ ಡಿ.ಕೆ.ಶಿವಕುಮಾರ್‌ ಅವರು ಚಂದ್ರಶೇಖರ್‌ ಅವರನ್ನು ಬಿಜೆಪಿ ಸೇರುವುದಕ್ಕೆ ಸೂಚನೆ ನೀಡಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.  ಚಂದ್ರಶೇಖರ್‌ ಬಿಜೆಪಿ ಅಭ್ಯರ್ಥಿಯಾದರೆ ಮೈತ್ರಿ ಪಕ್ಷದ ಅಭ್ಯರ್ಥಿಗೆ ಪ್ರಭಲ ಸ್ಪರ್ಧಿ ಇಲ್ಲದಂತಾಗುತ್ತದೆ. ಹಾಗೂ ಕೊನೇ ಕ್ಷಣದಲ್ಲಿ ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರವೂ ಮೊದಲೇ ಆಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.

ಯಡಿಯೂರಪ್ಪನವರು ಕಳೆದೆರಡು ದಿನಗಳಿಂದ ನನ್ನ ಕರೆ ಸ್ವೀಕರಿಸಲಿಲ್ಲ. ಯೋಗೇಶ್ವರ್‌ ಮಾತು ನಂಬಿ ಬಿಜೆಪಿಗೆ ಹೋಗಬೇಡ ಎಂದು ನನ್ನ ತಂದೆ ನನಗೆ ಸಲಹೆ ನೀಡಿದ್ದರು. ತಂದೆ ಮಾತು ಕೇಳದೆ, ನನ್ನ ರಾಜಕೀಯ ಭವಿಷ್ಯ ಗುರುತಿಸಿಕೊಳ್ಳುವುದಾಗಿ ಹೇಳಿದ್ದೆ. ಯೋಗೇಶ್ವರ್‌ ನಂಬಿ ತಪ್ಪು ಮಾಡಿದೆ.
ಎಲ್‌. ಚಂದ್ರಶೇಖರ್‌, ನಿವೃತ್ತ ಅಭ್ಯರ್ಥಿ

ರಾಮನಗರ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಲಿದೆ. ರಾಮನಗರದಲ್ಲಿ ಕುತಂತ್ರದಿಂದ ನಮ್ಮ ಅಭ್ಯರ್ಥಿಯನ್ನು ಸೆಳೆದುಕೊಂಡಿದ್ದಾರೆ. ನಮಗೆ ಯಾವುದೇ ರೀತಿಯ ತೊಂದರೆ ಇಲ್ಲ. ಆದರೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಈ ರೀತಿ ಆಗಬಾರದು.
● ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಬಿಜೆಪಿ ಸೇರಬೇಡ ಎಂದು ನಾನು ಆಗಲೇ ಹೇಳಿದ್ದೆ. ಆದರೆ ನನ್ನ ಮಾತು ಕೇಳಲಿಲ್ಲ. ಈಗಲೂ, ಚುನಾವಣೆ ಬಳಿಕ ಮುಂದಿನ ನಿರ್ಣಯ ಕೈಗೊಳ್ಳಬಹುದಾಗಿತ್ತು. ಮತದಾನಕ್ಕೆ ಇನ್ನೆರಡು ದಿನಗಳಿರುವಾಗ ಈ ರೀತಿ ಹಿಂದೆ ಸರಿಯುವುದು ಹೇಡಿತನದ ಕೆಲಸ. ಹಾಗೆ ಮಾಡಬಾರದಿತ್ತು.
● ಸಿ.ಎಂ.ಲಿಂಗಪ್ಪ, ಚಂದ್ರಶೇಖರ್‌ ತಂದೆ, ವಿಧಾನ ಪರಿಷತ್‌ ಸದಸ್ಯ.

ಚುನಾವಣೆಗೆ ಎರಡು ದಿನವಿರುವಾಗ ಚಂದ್ರಶೇಖರ್‌ ಕಣದಿಂದ ಹಿಂದೆ ಸರಿಯುವ ಮೂಲಕ ಪಕ್ಷದ್ರೋಹವೆಸಗಿದ್ದಾರೆ. ಬಿಜೆಪಿ ನಾಯಕರು ಯಾರೂ ಪ್ರಚಾರಕ್ಕೆ ಬರಲಿಲ್ಲವೆನ್ನುವುದು ಸುಳ್ಳು ಆಪಾದನೆ. ಸಚಿವ ಸದಾನಂದಗೌಡರನ್ನು ರಾಮನಗರ ಜಿಲ್ಲಾ
ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

● ಆರ್‌.ಅಶೋಕ್‌, ಮಾಜಿ ಉಪ ಮುಖ್ಯಮಂತ್ರಿ.

ಬಿಜೆಪಿಯ ತತ್ವಾದರ್ಶ, ನರೇಂದ್ರ ಮೋದಿಯವರನ್ನು ಒಪ್ಪಿ ಪಕ್ಷ ಸೇರಿದ್ದ ಚಂದ್ರಶೇಖರ್‌ ಯಾವುದೋ ಸಣ್ಣ ಪುಟ್ಟ ಆಸೆ,
ಆಕಾಂಕ್ಷೆಗಳಿಗೆ ಬಲಿಯಾಗಿ ದ್ರೋಹ ಮಾಡಿದ್ದಾರೆ. ಇಂತಹ ದ್ರೋಹಿ ಖಂಡಿತವಾಗಿಯೂ ರಾಜಕಾರಣದಲ್ಲಿ ಮುಂದೆ ಬರಲು ಸಾಧ್ಯವಿಲ್ಲ.

● ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next