ಬೆಂಗಳೂರು: ಸರ್ ಸಿ.ವಿ.ರಾಮನ್‌ನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ರಘು ಗುರುವಾರ ಕ್ಷೇತ್ರದ ವಿವಿಧೆಡೆ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.
ನೂರಾರು ಕಾರ್ಯಕರ್ತರೊಂದಿಗೆ ಕ್ಷೇತ್ರದ ಬೆನ್ನಿಗಾನಹಳ್ಳಿ, ಸಿ.ವಿ.ರಾಮನ್‌ನಗರ, ಹೊಸ ತಿಪ್ಪಸಂದ್ರ, ಸರ್ವಜ್ಞನಗರ, ಹೊಯ್ಸಳ ನಗರ, ಜೀವನ್ ಭಿಮಾನಗರ, ಕೋನೇನ ಅಗ್ರಹಾರ ವಾರ್ಡ್ ವ್ಯಾಪ್ತಿಯ ಹಲವು ಬಡಾವಣೆಗಳಿಗೆ ತೆರಳಿ ಮತಯಾಚಿಸಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರದಲ್ಲಿನ ದೇವಾಲಯ, ಮಸೀದಿ ಹಾಗೂ ಚರ್ಚ್‌ಗಳಿಗೆ ಭೇಟಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ಧಾರ್ಮಿಕ ಮುಖಂಡರ ಆಶೀರ್ವಾದ ಪಡೆದ ರಘು, ನಂತರ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಮತ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎರಡು ಅವಧಿಗೆ ಕ್ಷೇತ್ರದ ಶಾಸಕನಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ನಿತ್ಯ 24 ಗಂಟೆಗಳ ಕಾಲ ಜನರ ಸಂಪರ್ಕದಲ್ಲಿದ್ದು ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ಸಮಸ್ಯೆ ನಿವಾರಿಸಿದ್ದೇನೆ.
ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಿ ಆಸ್ಪತ್ರೆ, ಶಾಲೆ, ವಿದ್ಯುತ್ ದೀಪ, ಉದ್ಯಾನ ಅಭಿವೃದ್ಧಿ, ಪಾದಚಾರಿ ಮಾರ್ಗ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ. ಹಿರಿಯ ನಾಯಕರು, ಮಹಿಳೆಯರು, ಮಕ್ಕಳಿಗಾಗಿ ಸರ್ಕಾರ ರೂಪಿಸಿದ ಯೋಜನೆಗಳನ್ನು ಅರ್ಹರಿಗೆ ತಲುಪಿಸಿದ್ದೇನೆ ಎಂದು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಜನರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅನಿಲ ಭಾಗ್ಯ, ಬೇಟಿ ಪಡಾವೋ, ಬೇಟಿ ಬಚಾವೋ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಬಡವರಿಗೆ ತಲುಪಿಸಿದ್ದೇನೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳು ನನಗೆ ತೃಪ್ತಿ ತಂದಿದ್ದು ನನ್ನ ಕ್ಷೇತ್ರದ ಮತದಾರರು ಈ ಬಾರಿಯೂ ಬೆಂಬಲಿಸಲಿದ್ದಾರೆ. ಅವರ ಸೇವೆ ಮಾಡುವ ಮತ್ತೂಂದು ಅವಕಾಶ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.