ಶಿವಮೊಗ್ಗ: ಮೂರು ಬಾರಿ ಸಂಸದರಾದ ಅವಧಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೆ, ರನ್‌ವೇ ಹಾಗೂ ಹೈವೇ ಮೂರು ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಈ ಬಾರಿಯೂ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ನನಗೆ ಹೆಚ್ಚಿನ ಬೆಂಬಲ ನೀಡಬೇಕೆಂದು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.
ಭಾನುವಾರ ಬೆಳಗ್ಗೆ ತಾಳಗುಪ್ಪದಿಂದ ಬೆಂಗಳೂರಿಗೆ ಹೋಗುವ ಇಂಟರ್‌ಸಿಟಿ ರೈಲಿನಲ್ಲಿ ಪ್ರಯಾಣಿಕರನ್ನು ಭೇಟಿ ಮಾಡಿ ತಮ್ಮ ಸಾಧನೆಯ ಸಮಗ್ರ ಪ್ರತಿಯನ್ನು ಪ್ರಯಾಣಿಕರಿಗೆ ನೀಡುವ ಮೂಲಕ ಮತ ಯಾಚಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ತರುವ ಗುರಿ ಹೊಂದಿದ್ದೇನೆ. ಇದು ಕೇವಲ ಟ್ರೈಲರ್ ಮಾತ್ರ. ಇನ್ನೂ ಪಿಕ್ಚರ್ ಬಾಕಿಯಿದೆ. ಅದನ್ನು ನಿಮ್ಮೆಲ್ಲರ ಆಶೀರ್ವಾದದಿಂದ ಪೂರೈಸುತ್ತೇನೆ ಎಂಬ ವಿಶ್ವಾಸವಿದೆ ಎಂದರು.
ನಾನು ಸಂಸದನಾಗುವ ಮೊದಲು ಕೇವಲ ಬೆರಳೆಣಿಕೆಯಷ್ಟು ರೈಲುಗಳು ಶಿವಮೊಗ್ಗ ನಗರಕ್ಕೆ ಬರುತ್ತಿದ್ದವು. ಈಗ ಮಹಾನಗರಗಳೂ ಸೇರಿದಂತೆ ಹಲವು ನಗರ ಹಾಗೂ ಜಿಲ್ಲೆಗಳಿಗೆ ಶಿವಮೊಗ್ಗ ನಗರದಿಂದ ರೈಲ್ವೆ ಸಂಪರ್ಕವನ್ನು ಕಲ್ಪಿಸಲಾಗಿದೆ. ಇದು ರೈಲ್ವೆ ಕ್ಷೇತ್ರದಲ್ಲಿ ಅಲ್ಪಾವ ಧಿಯಲ್ಲಿ ಮಾಡಿದ ಸಾಧನೆಯಾಗಿದೆ ಎಂದು ಹೇಳಿದರು.
ನಂತರ ಬಿ.ವೈ.ರಾಘವೇಂದ್ರ ಅವರು ಭದ್ರಾವತಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ವಿಶ್ವೇಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಲ್ಲಿ ನೆರೆದಿದ್ದ ಮತದಾರರನ್ನು ಸಂಪರ್ಕಿಸಿ ಮತ ನೀಡುವಂತೆ ಮನವಿ ಮಾಡಿದರು.
ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ, ಪ್ರಶಾಂತ್ ಕುಕ್ಕೆ, ಭದ್ರಾವತಿ ಬಿಜೆಪಿ ಮುಖಂಡ ಧರ್ಮಪ್ರಸಾದ್, ಮಂಗೋಟೆ ರುದ್ರೇಶ್ ಇತರರಿದ್ದರು.