ಕೊಪ್ಪಳ: ಬಿಜೆಪಿ ಐದು ವರ್ಷಗಳಿಂದಲೂ ಬರಿ ಸುಳ್ಳು ಹೇಳಿಕೊಂಡೇ ಬಂದಿದೆ. ಖಾತೆಗೆ 15 ಲಕ್ಷ ಹಣ ಹಾಕ್ತಿವಿ ಅಂದ್ರು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂದ್ರು, ರೈತರ ಆದಾಯ ದ್ವಿಗುಣ ಮಾಡುತ್ತೇವೆ ಅಂದ್ರು ಈ ಮೂರು ಪ್ರಶ್ನೆಗಳ ಬಗ್ಗೆ ಮೊದಲು ಉತ್ತರಿಸಲಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಬಿಜೆಪಿ ನಾಯಕರಿಗೆ ಸವಾಲ್ ಹಾಕಿದ್ದಾರೆ.
ಶನಿವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಗಂಗಾವತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿ ಬರಿ ಭಾಷಣ ಮಾಡಿದರು. ಮೋದಿ ಸೇರಿ ಬಿಜೆಪಿ ನಾಯಕರಿಗೆ ನಾವು ಮೂರು ಪ್ರಶ್ನೆ ಹಾಕಿದ್ದೆವು. ಇದಕ್ಕೆ ಮೋದಿ ಸೇರಿ ಬಿಜೆಪಿ ಅಭ್ಯರ್ಥಿಗಳು ಉತ್ತರಿಸಲಿ ಎಂದಿದ್ದೆ. ಯಾರೂ ಉತ್ತರಿಸಿಲ್ಲ. ಬರಿ ಮೋದಿ.. ಮೋದಿ.. ಎಂದು ಯುವಕರು ಕೂಗೂವ ಉದ್ಯೋಗ ಸೃಷ್ಟಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರಲ್ಲದೇ, ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ಬಿಜೆಪಿ ಹೇಳಿಕೊಂಡಿತ್ತು. ಎಲ್ಲಿ ರೈತರಿಗೆ ಆದಾಯ ದ್ವಿಗುಣಗೊಳಿಸಿದ ಕುರಿತು ತೋರಿಸಿ ಎನ್ನುವ ಮಾತನ್ನಾಡಿದರು.
ಮೋದಿ ಬರಿ ಭಾಷಣಕ್ಕೆ ಮತ್ತು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಈ ಮೂರು ಪ್ರಶ್ನೆಗೆ ಬಿಜೆಪಿ ನಾಯಕರು ಉತ್ತರ ಕೊಡಲಿ ಎಂದರಲ್ಲದೇ, ಸಂಗಣ್ಣ ಕರಡಿ ಅವರನ್ನು ಸೋಲಿಸಲು ಗಂಗಾವತಿಗೆ ಮೋದಿ ಬಂದಿದ್ದಾರೆ. ಅವರಿಂದ ಅಭಿವೃದ್ಧಿ ಏನೂ ಆಗಿಲ್ಲ. ಮೋದಿ ಭಾಷಣದಲ್ಲಿ ಅಭಿವೃದ್ಧಿಯ ಬಗ್ಗೆ ಏನೂ ಮಾತನಾಡಲಿಲ್ಲ. ನಾವು ಸಿದ್ದರಾಮಯ್ಯ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿದ್ದರು. ದಾಖಲೆಗಳೇ ಹೇಳುತ್ತವೆ. ಅವರು ದಾಖಲೆ ತೋರಿಸಲಿ ಇಲ್ಲವೇ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಾದರೂ ಹೇಳಲಿ ಎಂದರು. ಗಂಗಾವತಿಯಲ್ಲಿ ಮೋದಿ ಮೈತ್ರಿ ಸರ್ಕಾರವನ್ನು 20 ಪರ್ಸೆಂಟೇಜ್ ಸರ್ಕಾರ ಎಂದು ಜರಿದಿದ್ದಾರೆ. ಭವಿಷ್ಯ ಗಂಗಾವತಿ ಮತ್ತು ಕನಕಗಿರಿ ತಾಲೂಕಿನ ಬಿಜೆಪಿ ಶಾಸಕರು ಸೇರಿ 20 ಪರ್ಸೆಂಟ್ ಇರಬೇಕೆಂದು ಲೇವಡಿ ಮಾಡಿದರು.
ಸಂಗಣ್ಣ ಕರಡಿ ಐದು ವರ್ಷ ಸಂಸದರಾಗಿ ಕೆಲಸ ಮಾಡಿದ್ದಾರೆ. ನಮ್ಮಲ್ಲಿನ ರೈಸ್ ಪಾರ್ಕ್‌ಗೆ ಹಣ ತಂದಿದ್ದಾರಾ? ರೈತರ ಖಾತೆಗೆ 6 ಸಾವಿರ ಹಣ ಹಾಕುತ್ತೇವೆ ಎಂದಿದ್ದರು. ಈವರೆಗೂ ರೈತರಿಗೆ ಹಣ ಹಾಕಿದ್ದಾರಾ? ಎಂದು ಪ್ರಶ್ನಿಸಿದರು. ಕನಕಗಿರಿ ಭಾಗದಲ್ಲಿ ಸಿಂಗಪೂರು ಸೇತುವೆ ನಿರ್ಮಾಣದ ಬಗ್ಗೆ ಕರಡಿ ಮಾತನಾಡುತ್ತಿದ್ದಾರೆ. ಎಲ್ಲಿ ಕೆಲಸವಾಗಿದೆ ಎಂದು ನಮಗೆ ತಿಳಿಯುತ್ತಿಲ್ಲ. ಯಾವ ಸೇತುವೆ ಎಂದೂ ಕಾಣುತ್ತಿಲ್ಲ. ಯಾವ ಅನುದಾನ ಯಾವ ಖಾತೆಯಿಂದ ಬಂದಿದೆ ಎನ್ನುವ ಮಾಹಿತಿ, ಆದೇಶ ಪ್ರತಿಯನ್ನಾದರೂ ಕೊಡಲಿ ನೋಡೋಣ ಎಂದರು.
ಸಿಎಂ ಹೇಳಿಕೆ ತರವಲ್ಲ: ದೇಶದ ಸೈನಿಕರ ಬಗ್ಗೆ ಸಿಎಂ ಕುಮಾರಸ್ವಾಮಿ ಸೇರಿದಂತೆ ಯಾರೂ ಸಹಿತ ಹಗುರವಾಗಿ
ಮಾತನಾಡುವುದು ತರವಲ್ಲ. ಯಾರೇ ಮಾತನಾಡಿದರೂ ಅದು ತಪ್ಪು. ಸೈನಿಕರು ದೇಶದ ಗಡಿ ಕಾಯ್ತಾರೆ.
ಅವರನ್ನು ಮುಂದಿಟ್ಟು ರಾಜಕಾರಣ ಮಾಡುವುದು ತರವಲ್ಲ ಎಂದರಲ್ಲದೇ, ಮೋದಿ ಸರ್ಜಿಕಲ್ ಸ್ಟ್ರೈಕ್‌ನ್ನು ಚುನಾವಣೆಗೆ ಬಳಕೆ ಮಾಡುತ್ತಿದ್ದಾರೆ. ಯೋಧರ ಮೇಲೆ ಭಯೋತ್ಪಾದಕರು ದಾಳಿ ಮಾಡುವ ಮುನ್ನ ಕೇಂದ್ರದ ಗುಪ್ತಚರಕ್ಕೆ ಮಾಹಿತಿ ಗೊತ್ತಾಗಲಿಲ್ಲವೇ? ಹಾಗಾದರೆ ಗುಪ್ತದಳ ಏನು ಕೆಲಸ ಮಾಡುತ್ತಿತ್ತು? ಕೇಂದ್ರಕ್ಕೆ ಇದರ ಬಗ್ಗೆ ಜವಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದರಲ್ಲದೇ, ಮೋದಿ ಗೆಲ್ಲಬೇಕು ಅಂತಾರೆ ಆದರೆ ಮೋದಿ ಏನು ಸಾಧನೆ ಮಾಡಿದ್ದಾರೆ ತೋರಿಸಲಿ. ಏ. 19ಕ್ಕೆ ಸಿಂಧನೂರು, ಸಿರಗುಪ್ಪಾ, ಕನಕಗಿರಿ ಭಾಗಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುವ ನಿರೀಕ್ಷೆಯಿದೆ. ದಿನಾಂಕ ನಿದಗಿಯಾಗಿಲ್ಲ ಎಂದರು. ಸುದ್ದಿಗೋಷ್ಟಿಯಲ್ಲಿ ಕೃಷ್ಣಾ ಇಟ್ಟಂಗಿ, ಮುತ್ತು ಕುಷ್ಟಗಿ ಇತರರು ಉಪಸ್ಥಿತರಿದ್ದರು.