Advertisement

ಅನುಕಂಪ ಗಿಟ್ಟಿಸಿಕೊಳ್ಳಲು ನಕಲಿ ಗಾಂಧಿ‌ ಕುಟುಂಬದ ಹೊಸ ನಾಟಕ ಎಂದ ಬಿಜೆಪಿ

12:43 PM Jun 13, 2022 | Team Udayavani |

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ದ ವಿಚಾರಣೆಯಲ್ಲಿ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ಖಂಡಿಸಿರುವ ಬಿಜೆಪಿ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನಕಲಿ ಗಾಂಧಿ‌ ಕುಟುಂಬ ಈಗ “ಅನುಕಂಪ” ಗಿಟ್ಟಿಸುವ ನಾಟಕವಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ.

Advertisement

ನಕಲಿ ಗಾಂಧಿ ಕುಟುಂಬದ ಸದಸ್ಯರಿಗೆ ಇಡಿ ನೋಟಿಸ್ ಜಾರಿಯಾಗುತ್ತಿದ್ದಂತೆ ದೇಶಾದ್ಯಂತ ಅಶಾಂತಿ ಸೃಷ್ಟಿ ಮಾಡಲಾಗುತ್ತಿದೆ. ಇಡಿ ಕಚೇರಿ ಎದುರು ಪ್ರತಿಭಟನೆಯ ಕರೆಯ ಹಿಂದೆ ದೇಶ ವಿರೋಧಿ ಸಂಚು ಅಡಗಿದೆ. ಉತ್ತರದ ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಹೋರಾಟವನ್ನು ಕಾಂಗ್ರೆಸ್ ಕರ್ನಾಟಕಕ್ಕೆ ಆಹ್ವಾನಿಸುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕ ಕೂ ಮಾಡಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನಕಲಿ ಗಾಂಧಿ‌ ಕುಟುಂಬ ಈಗ “ಅನುಕಂಪ” ಗಿಟ್ಟಿಸುವ ನಾಟಕವಾಡುತ್ತಿದೆ. ತಾನು ಕಳ್ಳ ಪರರ ನಂಬೆ ಎಂಬ ಧೋರಣೆಯೇ ಕಾಂಗ್ರೆಸ್ ಅಸ್ಮಿತೆ. ನಕಲಿ ಗಾಂಧಿ ಮನೆತನದಿಂದ, ನಕಲಿ ಗಾಂಧಿ ಮನೆತನಕ್ಕಾಗಿ, ನಕಲಿ ಗಾಂಧಿ ಮನೆತನಕ್ಕೋಸ್ಕರ, ಇದು ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ! ಉಪ್ಪು ತಿಂದ ಮೇಲೆ ನೀರು ಕುಡಿಯ ಬೇಕು, ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಬೇಕು. ರಾಹುಲ್ ಗಾಂಧಿ ನೇತೃತ್ವದ ಯಂಗ್ ಇಂಡಿಯಾ ಸಂಸ್ಥೆ ಅಕ್ರಮ ಹಣ ವರ್ಗಾವಣೆ ಮಾಡಿರುವುದಕ್ಕೆ ಜಾರಿ ನಿರ್ದೇಶನಾಲಯದ ಬಳಿ ಸಾಕಷ್ಟು ಸಾಕ್ಷಿಗಳಿವೆ. ಸತ್ಯ ಅನಾವರಣಗೊಳಿಸುವುದು ಕಾಂಗ್ರೆಸ್ ದೃಷ್ಟಿಯಲ್ಲಿ ಮಾತ್ರ ದ್ವೇಷದ ರಾಜಕಾರಣ ಎಂದು ಬಿಜೆಪಿ ಗುಡುಗಿದೆ.

ಇದನ್ನೂ ಓದಿ:ರಾಹುಲ್ ವಿಚಾರಣೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬ ನಡೆಸಿದ್ದು ಅಕ್ಷರಶಃ ಮನೆಗಳ್ಳತನ! ಕಾಂಗ್ರೆಸ್ ಪಕ್ಷದ 5000 ಸದಸ್ಯರ ಇಡಗಂಟಿನೊಂದಿಗೆ ಆರಂಭವಾದ ಅಸೋಸಿಯೇಟ್ ಜರ್ನಲ್ ಶೇರುಗಳನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಬಳಿಸಲಾಗಿದೆ. ಸ್ವಂತ ಮನೆಗೆ ಕನ್ನ ಹಾಕುವುದೆಂದರೆ ಇದೇ ಅಲ್ಲವೇ? ಮಾತೆತ್ತಿದರೆ ತ್ಯಾಗ-ಬಲಿದಾನದ ಕುಟುಂಬ ಎಂದು ಹೇಳುವ ಕಾಂಗ್ರೆಸ್ ನಾಯಕರೇ, ನಕಲಿ ಗಾಂಧಿಗಳ ವಂಶಸ್ಥರ ಅಕ್ರಮ ಆಸ್ತಿ ದೇಶಸೇವೆಗಾಗಿ ಬರೆದುಕೊಡಲಿ. ಅಕ್ರಮಿಗಳ ಹಣ ದೇಶಸೇವೆಗಾಗಿ ಮೀಸಲಿಟ್ಟಿದ್ದರೆ, ಅಕ್ರಮ ಹಣಗಳಿಕೆಯಲ್ಲಿ ಇಡಿ ಮುಂದೆ ನಿಲ್ಲಬೇಕಾದ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ ಎಂದು ಟೀಕೆ ಮಾಡಿದೆ.

ನಕಲಿ ಗಾಂಧಿ ಕುಟುಂಬದ ಬುಡಕ್ಕೆ ಬೆಂಕಿ ಬಿದ್ದಾಗ ಮಾತ್ರ ಪಾದಯಾತ್ರೆಯ ನೆ‌ನಪಾಗುತ್ತದೆ. ದೇಶದಲ್ಲಿ ಉಗ್ರರ ದಾಳಿಯಾದಾಗ, ರೈತರ ಸರಣಿ ಆತ್ಮಹತ್ಯೆ ನಡೆದಾಗ, ಶಾಂತಿದೂತರು ಕಲ್ಲು ತೂರಾಟ ನಡೆಸಿದಾಗ ಕಾಂಗ್ರೆಸ್ಸಿಗರಿಗೆ ಪಾದಯಾತ್ರೆಯ ‌ನೆನಪಾಗುವುದಿಲ್ಲ. ಜನವಿರೋಧಿ ನಿಲುವು ಏಕೆ? ಬಾಲ‌ ಮುದುರಿಕೊಂಡು ಕುಳಿತಿದ್ದ ನಗರ ನಕ್ಸಲರು, ಶಾಂತಿದೂತರು, ಸಿಎಎ ವಿರೋಧಿ ಹೋರಾಟಗಾರರು ಈಗ ಒಮ್ಮೆಲೇ ಎದ್ದು ನಿಂತಿದ್ದಾರೆ. ಇಡಿ ನೋಟಿಸ್ ಬಳಿಕ ಈ ಘಟನೆ ನಡೆಯುತ್ತಿದೆ. ಹಾಗಾದರೆ ಇದು ಕಾಂಗ್ರೆಸ್ ಪ್ರೇರಿತ ರಾಷ್ಟ್ರ ವಿರೋಧಿ ಸಂಚಲ್ಲವೇ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ತಮ್ಮ ಪ್ರತಿ ಭಾಷಣದಲ್ಲೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ’ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ’ ಎಂಬುದನ್ನು ಪ್ರಸ್ತಾಪಿಸುತ್ತಾರೆ. ಅದೇ ಡಿಕೆಶಿ ಇಂದು ದೇಶದ ಸಾಂವಿಧಾನಿಕ ಮಾನ್ಯತೆ ಇರುವ ಸಂಸ್ಥೆ ನಕಲಿ ಗಾಂಧಿ ಕುಟುಂಬಕ್ಕೆ ನೀಡಿದ ನೋಟಿಸ್‌ ಗೆ ನಕಲಿ ಗಾಂಧಿಗಳ ಜಪ ಮಾಡುತ್ತಿರುವುದು ವಿಪರ್ಯಾಸ ಎಂದು ಬಿಜೆಪಿ ಕೂ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next