Advertisement

ಮತಗಳಿಕೆಯಲ್ಲಿ ದಾಖಲೆ ಮುರಿದ ಬಿಜೆಪಿ

12:40 AM May 25, 2019 | Team Udayavani |

ಕುಂದಾಪುರ: ಕುಂದಾಪುರ ಕ್ಷೇತ್ರ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿ ದಾಖಲೆ ಪ್ರಮಾಣದಲ್ಲಿ ಬಿಜೆಪಿಗೆ ಮತಗಳಿಕೆ ಯಾಗಿದೆ. ಕಳೆದ ಬಾರಿ ಉಡುಪಿಯಲ್ಲಿ ಅಧಿಕ ಮತಗಳಿಕೆ ದಾಖಲೆಯಾಗಿತ್ತು.

Advertisement

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಅವರು 1,12,977 ಮತಗಳನ್ನು ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ 35,780 ಮತಗಳನ್ನು ಪಡೆದಿದ್ದಾರೆ.

ಇಲ್ಲಿ ಚುನಾವಣೆಯಿಂದ ಚುನಾವಣೆಗೆ ವಿಧಾನಸಭೆಗೆ ಬಿಜೆಪಿ ಮತಗಳಿಕೆ ಪ್ರಮಾಣ ಏರುತ್ತಲೇ ಇದೆ. ಆದರೆ ಲೋಕಸಭಾ ಉಪಚುನಾವಣೆ ಮಟ್ಟಿಗೆ ಅದು ಅನ್ವಯ ಆಗಿರಲಿಲ್ಲ. ಮತಗಳಿಕೆ ಅಂತರ ಕೂಡಾ ಭಿನ್ನವೇ ಆಗಿತ್ತು. ಮೈತ್ರಿ ಅಭ್ಯರ್ಥಿಗೆ ಕಾಂಗ್ರೆಸ್‌ ವಿಧಾನಸಭಾ ಚುನಾವಣೆಯಲ್ಲಿ ದೊರೆತಷ್ಟು ಮತಗಳೂ ದೊರೆಯಲಿಲ್ಲ.

ಲೋಕಸಭೆಯಲ್ಲಿ
2009ರ ಚುನಾವಣೆಯಲ್ಲಿ ಬಿಜೆಪಿಯ ಡಿ.ವಿ. ಸದಾನಂದ ಗೌಡರು 60,174, ಕಾಂಗ್ರೆಸ್‌ನ ಕೆ. ಜಯಪ್ರಕಾಶ್‌ ಹೆಗ್ಡೆ ಅವರು 48,511 ಮತಗಳನ್ನು ಪಡೆದು ಬಿಜೆಪಿ 11,633 ಮುನ್ನಡೆಯಲ್ಲಿತ್ತು. ಡಿ.ವಿ. ಅವರು ಮುಖ್ಯಮಂತ್ರಿ ಆಗುವ ಸಲುವಾಗಿ ರಾಜೀನಾಮೆ ನೀಡಿದಾಗ ಇಲ್ಲಿನ ಜಯಪ್ರಕಾಶ್‌ ಹೆಗ್ಡೆ ಅವರ ಕೈ ಹಿಡಿದಿದ್ದರು. 2012ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಯಪ್ರಕಾಶ್‌ ಹೆಗ್ಡೆ ಅವರಿಗೆ 63,550 ಮತಗಳು, ಬಿಜೆಪಿಯ ವಿ. ಸುನಿಲ್‌ ಕುಮಾರ್‌ ಅವರಿಗೆ 54,439 ದೊರೆತು ಕಾಂಗ್ರೆಸ್‌ 9,111 ಮತಗಳ ಮುನ್ನಡೆ ಯಲ್ಲಿತ್ತು.

ಅಂತರ
2014ರ ಚುನಾವಣೆಯಲ್ಲಿ ಮತ್ತೆ ಕ್ಷೇತ್ರ ಬದಲಾಯಿತು. ಶೋಭಾ ಕರಂದ್ಲಾಜೆ ಅವರು 85,110 ಮತಗಳನ್ನು ಪಡೆದು ಜಯಪ್ರಕಾಶ್‌ ಹೆಗ್ಡೆ ಅವರು 53,644 ಮತಗಳನ್ನು ಪಡೆದರು. ಶೋಭಾ 31,466 ಮತಗಳ ಅಂತರದಿಂದ ಗೆದ್ದರು. ಈ ಬಾರಿ ಶೋಭಾ 77.196 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದರೂ ಇಲ್ಲಿನ ಮತದಾರರು ಕಾಂಗ್ರೆಸ್‌ನ ಜಯಪ್ರಕಾಶ್‌ ಹೆಗ್ಡೆ ಅವರ ಕೈ ಬಿಟ್ಟಿರಲಿಲ್ಲ.

Advertisement

2008ರಲ್ಲಿ ಬಿಜೆಪಿಗೆ ವಿಧಾನಸಭೆಯಲ್ಲಿ 25,083 ಮತಗಳ ಲೀಡ್‌, 2009ರಲ್ಲಿ ಲೋಕಸಭೆಯಲ್ಲಿ ಬಿಜೆಪಿಗೆ 11,633 ಮತಗಳ ಲೀಡ್‌. 2012ರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ 9,111 ಮತಗಳ ಲೀಡ್‌, 2013ರ ರಾಜ್ಯ ಚುನಾವಣೆ ಯಲ್ಲಿ ಬಿಜೆಪಿಗೆ 40,611 ಲೀಡ್‌ ಇತ್ತು. 2014ರಲ್ಲಿ ಸಂಸತ್‌ಗೆ 31,466 ಲೀಡ್‌ ಇದ್ದರೆ ಕಳೆದ ವರ್ಷ ಶಾಸಕರಿಗೆ 56,405 ಲೀಡ್‌ ಇತ್ತು. ಈ ಬಾರಿ ಲೀಡ್‌ ಪ್ರಮಾಣ ಸಂಸತ್‌ ಚುನಾವಣೆಗೆ ಹೆಚ್ಚಾಗಿದೆ.

ನಮೋ ಅಲೆ
ಕಳೆದ ಬಾರಿ ನಮೋ ಅಲೆ ಇದ್ದರೆ ಈ ಬಾರಿ ಅದರ ಮುಪ್ಪಟ್ಟು ನಮೋ ಅಲೆ ಇತ್ತು. ಆದ್ದರಿಂದ ಕಾಂಗ್ರೆಸ್‌ ಆಟ ನಡೆಯುವುದಿಲ್ಲ ಎನ್ನುವುದು ಮೊದಲೇ ನಿಶ್ಚಿತವಾಗಿತ್ತು. ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರರ ಪ್ರಚಾರ ಕೂಡಾ ಇಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನಡೆಯಲಿಲ್ಲ. ಗೋ ಬ್ಯಾಕ್‌ ಶೋಭಾ ಎನ್ನುವ ಹ್ಯಾಶ್‌ಟ್ಯಾಗ್‌ ಭಾರೀ ಪ್ರಮಾಣದಲ್ಲಿ ಕೆಲಸ ಮಾಡದಿದ್ದರೂ ಇಲ್ಲಿ ಬಿದ್ದ ನೋಟಾ ಮತಗಳ ಸಂಖ್ಯೆ (1,258) ದೊಡ್ಡದೇ ಇದೆ. ಇತರ ಎಲ್ಲ ಕ್ಷೇತ್ರಗಳಿಗಿಂತ ಇದು ಹೆಚ್ಚಾಗಿದ್ದರೆ ಅಭ್ಯರ್ಥಿ ಕುರಿತಾಗಿದ್ದ ಅಸಮಾಧಾನ ಕೂಡಾ ಇದರ ಹಿಂದಿದೆ ಎಂಬ ವಿಶ್ಲೇಷಣೆಯಿದೆ.

ಜನ ಮತ ನೀಡಿದ್ದಾರೆ
ಜನರ ಬಳಿ ಮತ ಕೇಳಿದ್ದೇವೆ, ಜನ ಮತ ನೀಡಿದ್ದಾರೆ. ದೇಶದ ಭದ್ರತೆ, ನಿರುದ್ಯೋಗ ಸಮಸ್ಯೆ ನಿವಾರಣೆ, ರಸ್ತೆ ಅಭಿವೃದ್ಧಿ, ಆರೋಗ್ಯ ಕ್ಷೇತ್ರ ಸೇರಿದಂತೆ ದೇಶದ ಸವಾಂìಗೀಣ ಅಭಿವೃದ್ಧಿಗಾಗಿ ಮೋದಿಯವರಿಗೆ ಜನ ನೀಡಿದ ಅಭೂತಪೂರ್ವ ಬೆಂಬಲ ಇದು. ಮೊದಲ ಬಾರಿ ಗೆದ್ದಾಗ ಜನ ತೆಂಗಿನ ಗಿಡ ನೆಟ್ಟಿದ್ದಾರೆ. ಅದು ಬೆಳೆದು ಈಗಷ್ಟೇ ಎಳೆ ಕಾಯಿ ಬಿಡಲಾರಂಭಿಸಿದೆ. ಜಾತಿ ಆಧಾರಿತ ಮತಯಾಚನೆ ಇಲ್ಲಿ ನಡೆಯುವುದಿಲ್ಲ ಎನ್ನುವುದು ಸಾಬೀತಾಗಿದೆ.
-ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕರು, ಕುಂದಾಪುರ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next