Advertisement

ಬಿಜೆಪಿಯವರು ಬಿಪಿಎಲ್‌ ಕಾರ್ಡ್‌ ಇಟ್ಕೊಂಡಿದ್ದಾರಾ?

03:45 AM Feb 15, 2017 | Harsha Rao |

ವಿಧಾನಸಭೆ:ಕಾಂಗ್ರೆಸ್‌ನವರು ಮಾತ್ರ ಕೋಟ್ಯಾಧೀಶರು, ಬಿಜೆಪಿಯವರೇನು ಬಿಪಿಎಲ್‌ ಕಾರ್ಡ್‌ ಹೋಲ್ಡರಾ? ಆದಾಯ ತೆರಿಗೆ ಇಲಾಖೆ ದಾಳಿ ಕಾಂಗ್ರೆಸ್‌ ಸರ್ಕಾರ ಅಸ್ಥಿರಗೊಳಿಸುವ ಷಡ್ಯಂತ್ರ, ನಿಮ್ಮ ರಾಜಕೀಯ ಕುತಂತ್ರ ಹಾಗೂ ಬಂಡವಾಳ ಏನು ಅಂತ ಸೀಡಿಯಲ್ಲಿ ಬಯಲಾಗಿದೆ ಹೋಗ್ರಿ ಇದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಪ್ರತಿಪಕ್ಷ ಬಿಜೆಪಿ ವಿರುದ್ಧ ಆಕ್ರೋಶ ಹಾಗೂ ಆವೇಶಭರಿತರಾಗಿ ಮುಗಿಬಿದ್ದ ಪರಿ. 

Advertisement

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಐಟಿ ದಾಳಿ ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ಸಚಿವರು, ಶಾಸಕರನ್ನೇ ಟಾರ್ಗೆಟ್‌ ಮಾಡಿ ಆದಾಯ ತೆರಿಗೆ ದಾಳಿ ನಡೆಯುತ್ತಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 168 ಪ್ರಕಾರ ಮಾಹಿತಿ ಕೊಡುವಂತಿಲ್ಲ. ಆದರೂ ಕೋಟ್ಯಂತರ ರೂ. ದುಡ್ಡು, ಚಿನ್ನ ಸಿಕು¤ ಎಂಬ ಸುಳ್ಳು ಸುದ್ದಿ ಹರಡುತ್ತಿದ್ದೀರಿ. ಸಚಿವ ರಮೇಶ್‌ ಜಾರಕಿಹೊಳಿ ರಾಜೀನಾಮೆ ಕೇಳಲು ನಿಮಗೇನಿದೆ ನೈತಿಕ ಹಕ್ಕು. ನಿಮ್ಮಿಂದ ನೈತಿಕತೆ ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.

ಒಂದು ಸಾವಿರ ಕೋಟಿ ರೂ. ಹೈಕಮಾಂಡ್‌ಗೆ ನೀಡಿದ್ದೇನೆ ಎಂಬುದನ್ನು ಸಾಬೀತುಪಡಿಸಿದರೆ ಒಂದು ಕ್ಷಣ ನಾನು  ಈ ಸ್ಥಾನದಲ್ಲಿ ಇರುವುದಿಲ್ಲ. ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆಗೆ ಯತ್ನಿಸುತ್ತಿದ್ದೀರಿ. ನನ್ನ ಮೇಲೆ ಆರೋಪ ಮಾಡಿದವರ (ಬಿ.ಎಸ್‌.ಯಡಿಯೂರಪ್ಪ) ಮೇಲೆ ಪ್ರಕರಣಗಳಿವೆ, ಜೈಲಿಗೆ ಹೋಗಿ ಬಂದವರು. ನನ್ನ ಮೇಲೆ ಒಂದೇ ಒಂದು ಕೇಸ್‌ ಇದ್ದರೆ ಹೇಳಿ, ಮಾನ ಮರ್ಯಾದೆ, ನಾಚಿಗೆ ಇಲ್ಲದವರು ನೀವು. ಕಾಂಗ್ರೆಸ್‌ ಸರ್ಕಾರ ಒಳ್ಳೆ ಕೆಲಸ ಮಾಡುತ್ತಿರುವುದು ನಿಮಗೆ ಸಹಿಸಲು ಆಗುತ್ತಿಲ್ಲ. ಯಡಿಯೂರಪ್ಪ-ಅನಂತಕುಮಾರ್‌ ಮಾತನಾಡಿರುವ ಸೀಡಿ ನೋಡಿದರೆ ನಿಮ್ಮ ಬಂಡವಾಳ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.  

ಯಾರು ಏನೇ ಮಾಡಿದರೂ ನಮ್ಮ  ಸರ್ಕಾರ ಗಟ್ಟಿಯಾಗಿದ್ದು ಮುಂದಿನ ಚುನಾವಣೆಯಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ. ನಿಮ್ಮ ಆಟ ನಡೆಯುವುದಿಲ್ಲ, ನಿಮ್ಮ ಆಡಳಿತ ಏನು ಎಂಬುದು ಜನರಿಗೂ ಗೊತ್ತಿದೆ ಎಂದು ಹೇಳಿದರು.
ಬೋಗಸ್‌ ಸೀಡಿ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ನೀವು ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್‌ಗೆ ದುಡ್ಡು ಕೊಟ್ಟಿರುವುದು ಹೌದು. ಡೈರಿಯಲ್ಲಿ ಎಲ್ಲವೂ ದಾಖಲಾಗಿದೆ. ಐಟಿ ದಾಳಿಯಲ್ಲಿ ಸಚಿವ ರಮೇಶ್‌ ಜಾರಕಿಹೊಳಿ ಮನೆಯಲ್ಲಿ 150 ಕೋಟಿ ರೂ., ಶಾಸಕ ಎಂ.ಟಿ.ಬಿ.ನಾಗರಾಜ್‌ ಮನೆಯಲ್ಲಿ 10 ಕೋಟಿ ರೂ. ನಗದು, ಕೆಜಿಗಟ್ಟಲೆ ಚಿನ್ನ ಹೇಗೆ ಸಿಕ್ಕಿತು ಜನರಿಗೆ ಉತ್ತರ ಕೊಡಿ. ನೀವು ಬಿಡುಗಡೆ ಮಾಡಿರುವ ಸೀಡಿ ಬೋಗಸ್‌ ಎಂದು ದೂರಿದರು.

ಇದಕ್ಕೆ ಮತ್ತೆ ಕುಪಿತರಾದ ಸಿದ್ದರಾಮಯ್ಯ, ರೀ ಆ ಸೀಡಿ ಕೊಟ್ಟೋರೇ ಬಿಜೆಪಿಯವರು ಕಣ್ರೀ. ನಿಮ್ಮ ಷಡ್ಯಂತ್ರ ಏನು ಎಂಬುದು ಅದರಿಂದಲೇ ಗೊತ್ತಾಗುತ್ತದೆ. 150 ಕೋಟಿ ರೂ. ರಮೇಶ್‌ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದು ನಿಮಗೆ ಗೊತ್ತೇನ್ರಿ. ನಾನು ಮುಖ್ಯ ಕಾರ್ಯದರ್ಶಿ ಮೂಲಕ ಆದಾಯ ತೆರಿಗೆ ಇಲಾಖೆ ಆಯುಕ್ತರಿಗೆ ಪತ್ರ ಬರೆಸಿ ಕೇಳಿದ್ದೇನೆ. ಅವರು ತನಿಖೆ ನಡೆಯುತ್ತಿದೆ. ಯಾವುದೇ ಮಾಹಿತಿ ಕೊಡಲಾಗಲ್ಲ ಎಂದು ಬರವಣಿಗೆಯಲ್ಲಿ ತಿಳಿಸಿದ್ದಾರೆ. ನಿಮಗೆ ಮಾತ್ರ ಮಾಹಿತಿ ಕೊಡ್ತಾರಾ? ಎಂದು ಪ್ರಶ್ನಿಸಿದರು.

Advertisement

ಗದ್ದಲ, ಕೋಲಾಹಲ
ಈ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಆಡಳಿತಾರೂಢ ಸಚಿವರು ಹಾಗೂ ಶಾಸಕರು ನಿಂತರೆ, ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಪರ ಬಿಜೆಪಿ ಸದಸ್ಯರು ನಿಂತರು. ಪರಸ್ಪರ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ, ಕಾಂಗ್ರೆಸ್‌ನವರಿಂದ ಬಿಜೆಪಿ ಶೇಮ್‌ ಶೇಮ್‌ ಘೋಷಣೆ, ಬಿಜೆಪಿಯವರಿಂದ ಕಾಂಗ್ರೆಸ್‌ ಡೌನ್‌ ಡೌನ್‌ ಘೋಷಣೆಯಿಂದ ಸದನದಲ್ಲಿ ಗದ್ದಲ ಕೋಲಾಹಲ ವಾತಾವರಣ ನಿರ್ಮಾಣವಾಗಿ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ಗೊತ್ತಾಗದ ಸನ್ನಿವೇಶ ನಿರ್ಮಾಣವಾಯಿತು. ಸದನದ ಮೈಕ್‌ ವ್ಯವಸ್ಥೆ ಸಹ ಕೈ ಕೊಟ್ಟಿತು. ಜೋರಿನ ಧ್ವನಿಯಲ್ಲಿ ಮಾತನಾಡಿ ಸಿದ್ದರಾಮಯ್ಯ ಹಾಗೂ ಶೆಟ್ಟರ್‌ ಗಂಟಲು ಧ್ವನಿ ಸಹ ಕ್ಷೀಣಿಸಿತು.

ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಸರ್ಕಾರದ ಉತ್ತರ ನಮಗೆ ತೃಪ್ತಿ ತಂದಿಲ್ಲ, ಮುಖ್ಯಮಂತ್ರಿಯವರು ಅನಗತ್ಯ ವಿಚಾರ ಪ್ರಸ್ತಾಪ ಮಾಡಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಸಭಾತ್ಯಾಗ ಮಾಡಿದರು. ಜೆಡಿಎಸ್‌ ಉಪಸ್ಥಿತಿಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಯಿತು. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಮಾತಿನ ಸಮರ ನಡೆಯುತ್ತಿದ್ದಾಗ ಜೆಡಿಎಸ್‌ ಮೌನಕ್ಕೆ ಶರಣಾಗಿತ್ತು. ಸರ್ಕಾರದ ಉತ್ತರ ವಿರೋಧಿಸಿ ಬಿಜೆಪಿ ಸಭಾತ್ಯಾಗ ಮಾಡಿದರೂ ಜೆಡಿಎಸ್‌ ಜತೆಗೂಡಲಿಲ್ಲ.

– ಆದಾಯ ತೆರಿಗೆ ದಾಳಿ, ಕೋಟಿ ರೂ.ಕಪ್ಪ ಆರೋಪ  
– ಬಿಜೆಪಿ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿ ಸಿದ್ದರಾಮಯ್ಯ
– ಕಾಂಗ್ರೆಸ್‌ ನಾಯಕರ ಮೇಲೆ ಐಟಿ ದಾಳಿಗೆ ಮುಖ್ಯಮಂತ್ರಿ ತಿರುಗೇಟು

Advertisement

Udayavani is now on Telegram. Click here to join our channel and stay updated with the latest news.

Next