ಕುಂದಗೋಳ: ಮೇ 5ರಂದು ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದೊಂದಿಗೆ ಉಪಚುನಾವಣೆ ಪ್ರಚಾರ ಆರಂಭಿಸಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸುದ್ದಿಗೊಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸ್ ಪ್ರತಿ ಜಿಪಂ ವ್ಯಾಪ್ತಿಯಲ್ಲಿ ಸಚಿವ-ಶಾಸಕರನ್ನು ಪ್ರಚಾರಕ್ಕೆ ನೇಮಿಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ರಾಜ್ಯದಲ್ಲಿ ಸರ್ಕಾರ ಇದೆಯೇ ಎಂಬ ಸಂಶಯ ವ್ಯಕ್ತವಾಗುತ್ತಿದ್ದು, ಇನ್ನು ಸಚಿವರಾರೆಂಬುದು ಜನತೆಗೆ ಗೊತ್ತಿಲ್ಲ. ಅಲ್ಲದೆ ಶಿಕ್ಷಣ ಮಂತ್ರಿ ಹುದ್ದೆ ಖಾಲಿ ಇದೆ ಎಂದು ವ್ಯಂಗ್ಯವಾಡಿದರು.
ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ 104 ಸ್ಥಾನ ಲಭಿಸಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿಯಿಂದ ಸರ್ಕಾರ ರಚಿಸಿ, ಇದೀಗ ಅವರಲ್ಲಿ ಅಪನಂಬಿಕೆ ಯಿಂದ ಒಬ್ಬರಿಗೊಬ್ಬರು ಬೆನ್ನಿಗೆ ಚೂರಿ ಹಾಕುವ ಕಾರ್ಯ ನಡೆದಿದೆ. ರಾಜ್ಯದಲ್ಲಿ ಯಾವ ಅಭಿವೃದ್ಧಿಗಳು ಆರಂಭವಾಗಿಲ್ಲ. ಹೆಸರಿಗೆ ಮಾತ್ರ ಸಚಿವರಾಗಿದ್ದಾರೆ ಎಂದು ಲೇವಡಿ ಮಾಡಿದರು.
ಆಪರೇಷನ್ ಕಮಲದಡಿ ಪೌರಾಡಳಿತ ಸಚಿವರಾಗಿದ್ದ ಶಿವಳ್ಳಿ ಅವರಿಗೆ 5 ಕೋಟಿ ಆಪರ್ ಸತ್ಯವೇ ಎಂದಾಗ, ಸಿದ್ದರಾಮಯ್ಯ ಸುಳ್ಳು ಹೇಳುವಲ್ಲಿ ನಿಸ್ಸೀಮರು. ಇದಕ್ಕೆ ತಕ್ಕಂತೆ ಒಂದು ಸಾಕ್ಷಿಯನ್ನಾದರೂ ತೋರಿಸಲಿ ಎಂದು ಸವಾಲು ಹಾಕಿದರು.
Advertisement
ಕೇಂದ್ರ ಸರ್ಕಾರ ಕೈಗೊಂಡ ಅಭಿವೃದ್ಧಿ ಯೋಜನೆಗಳು, ಶಾಸಕರಾಗಿದ್ದಾಗ ಚಿಕ್ಕನಗೌಡ್ರ ಸಾಧನೆ ಈ ಬಾರಿ ಗೆಲುವಿಗೆ ಕಾರಣವಾಗಲಿದೆ. ಕುಂದಗೋಳ- ಚಿಂಚೋಳಿ ಉಪಚುನಾವಣೆ ನಂತರ ರಾಜ್ಯದ ರಾಜಕೀಯದಲ್ಲಿ ಧ್ರುವೀಕರಣ ನಡೆಯಲಿದ್ದು, ಕೇಂದ್ರದಲ್ಲಿ ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದರು.
Related Articles
Advertisement
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ, ಮೋಹನ ಲಿಂಬಿಕಾಯಿ, ಎಂ.ಆರ್. ಪಾಟೀಲ, ಈರಣ್ಣ ಜಡಿ, ಮಹೇಶ ಟೆಂಗಿನಕಾಯಿ, ರಮೇಶ ಕೊಪ್ಪದ, ಬಸವರಾಜ ಕುಂದಗೋಳಮಠ, ಸಿ.ಎಂ. ಕಾಳೆ, ಪೃಥ್ವಿ ಕಾಳೆ, ನೇಮಚಂದ್ರ ಬಸಾಪುರ, ನಾಗರಾಜ ಸುಬರಗಟ್ಟಿ, ಗುರು ಪಾಟಿಲ ಇದ್ದರು.