ಜಮ್ಮು : ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಜತೆಗೆ ಅನಗತ್ಯವಾಗಿ ವಿವಾದಾತ್ಮಕ ವಾಕ್ ಸಮರ ನಡೆಸಬೇಡಿ’ ಎಂದು ಬಿಜೆಪಿ ಇಂದು ಜಮ್ಮು ಕಾಶ್ಮೀರದ ಶಿಕ್ಷಣ ಸಚಿವ ಅಲ್‌ತಾಫ್ ಅಹ್ಮದ್ ಬುಖಾರಿ ಅವರಿಗೆ ಕಿವಿಮಾತು ಹೇಳಿದೆ.
ಜನರಲ್ ರಾವತ್ ಅವರು ಕಳೆದ ಶುಕ್ರವಾರ ಸಾಮಾಜಿಕ ಜಾಲ ತಾಣದಲ್ಲಿ, “ಜಮ್ಮು ಕಾಶ್ಮೀರದಲ್ಲಿನ ಸರಕಾರಿ ಶಾಲೆಗಳು ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಿರುವುದರ ಪರಿಣಾಮವಾಗಿ ಉಗ್ರರಿಂದ ವಿದ್ಯಾರ್ಥಿಗಳ ಬುದ್ಧಿಪಲ್ಲಟ ಅಭಿಯಾನ ಎಗ್ಗಿಲ್ಲದೆ ಸಾಗುವಂತಾಗಿದೆ’ ಎಂದು ಟೀಕಿಸಿದ್ದರು.
ಮಾತ್ರವಲ್ಲದೆ ರಾಜ್ಯದಲ್ಲಿನ ಮಸೀದಿಗಳು ಮತ್ತು ಮದ್ರಸಗಳನ್ನು ನಿಯಂತ್ರಿಸುವುದು ಒಳ್ಳೆಯದು ಎಂದಿದ್ದರಲ್ಲದೆ ರಾಜ್ಯದಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಸುಧಾರಣೆಯನ್ನು ತರುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದರು.
ಇದಕ್ಕೆ ಉತ್ತರವಾಗಿ ಶಿಕ್ಷಣ ಸಚಿವ ಬುಖಾರಿ ಅವರು, “ಜನರಲ್ ರಾವತ್ ಗಡಿ ರಕ್ಷಣೆ ಕೆಲಸವನ್ನು ನಿಭಾಯಿಸಿಕೊಂಡಿರುವುದು ಒಳ್ಳೆಯದು; ರಾಜ್ಯ ಸರಕಾರದ ವ್ಯವಹಾರಗಳಲ್ಲಿ ಅವರು ಮೂಗು ತೂರಿಸಕೂಡದು’ ಎಂದು ಖಡಕ್ ಆಗಿ ಹೇಳಿದ್ದರು.
ಬಿಜೆಪಿ ಜಮ್ಮು ಕಾಶ್ಮೀರ ವಕ್ತಾರ ಬ್ರಿಗೇಡಿಯರ್ ಅನಿಲ್ ಗುಪ್ತಾ (ನಿವೃತ್ತ) ಅವರು ಹೇಳಿಕೆಯೊಂದನ್ನು ನೀಡಿ, “ರಾಜ್ಯದ ಶಿಕ್ಷಣ ಸಚಿವರು ಪ್ರಗತಿಪರರಾಗಿರಬೇಕು; ವಸ್ತುಸ್ಥಿತಿಯನ್ನು ಸ್ವೀಕರಿಸಬೇಕ; ಅದು ಬಿಟ್ಟು ಸೇನಾ ಮುಖ್ಯಸ್ಥರೊಂದಿಗೆ ವಾಕ್ ಸಮರಕ್ಕೆ ಇಳಿಯುವುದು ಸರಿಯಲ್ಲ’ ಎಂದು ಹೇಳಿದರು.
ಜನರಲ್ ರಾವತ್ ಅವರ ಅಭಿಪ್ರಾಯಗಳನ್ನು ಧನಾತ್ಮಕವಾಗಿ ಕಾಣಬೇಕೇ ಹೊರತು ಅದನ್ನೊಂದು ರಾಜಕೀಯ ವಿವಾದದ ವಿಷಯವನ್ನಾಗಿ ಕಾಣಬಾರದು’ ಎಂದು ಗುಪ್ತಾ ಹೇಳಿದರು.