ಮಡಿಕೇರಿ: ಕಲಾವಿದರನ್ನು ರಾಜಕೀಯವಾಗಿ ಗುರುತಿಸುವ ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠವನ್ನು ರಚಿಸಲಾಗಿದ್ದು, ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಭಾರತೀ ರಮೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪ್ರಿಲ್ 11ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಉದ್ಘಾಟನೆ ಹಾಗೂ ಸಾಂಸ್ಕೃತಿಕ ದಿನಾಚರಣೆಯನ್ನು ಆಯೋಜಿಸಿರುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ ಸಿಂಹ, ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಬಿ.ಬಿ. ಭಾರತೀಶ್ ಪಾಲ್ಗೊಳ್ಳಲಿದ್ದಾರೆ ಎಂದರು.
ಸಾಂಸ್ಕೃತಿಕ ರಾಷ್ಟ್ರವಾದದ ಮಂಡನೆ ಹಾಗೂ ಮೂರು ತಾಲೂಕುಗಳಲ್ಲಿ ಸಾಧನೆ ಮಾಡಿರುವ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಕಲಾವಿದರುಗಳಿಗೆ ಸಮ್ಮಾನ ಕಾರ್ಯ ಕ್ರಮ ನಡೆಯಲಿದೆ ಎಂದು ಭಾರತೀ ರಮೇಶ್ ಮಾಹಿತಿ ನೀಡಿದರು.
ಕಲಾವಿದರ ಸಂಘಟನೆ ಸಾಧನೆ ಮಾಡಿದ ಕಲಾವಿದರನ್ನು ಪ್ರೋತ್ಸಾಹಿಸುವುದು, ಸಮಸ್ಯೆಗಳಿಗೆ ಸ್ಪಂದಿಸುವುದು, ಶಾಲಾ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ ರೂಪಿಸುವುದು, ಚುನಾವಣೆ ಸಂದರ್ಭ ಕಲಾವಿದರು ಸಕ್ರಿಯವಾಗಿ ಭಾಗವಹಿಸುವಂತೆ ನೋಡಿಕೊಳ್ಳುವುದು ಪ್ರಕೋಷ್ಠದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಪ್ರಕೋಷ್ಠದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಸಹ ಸಂಚಾಲಕರಾಗಿ ಕಡಗದಾಳುವಿನ ಮಿಟ್ಟು ಪೂಣಚ್ಚ, ಕುಶಾಲನಗರದ ರಾಜು ಆಯ್ಕೆಯಾಗಿದ್ದಾರೆ. ಸೋಮವಾರಪೇಟೆ ಮಂಡಲಕ್ಕೆ ಕಲಾವಿದ ಬಿ.ಸಿ. ಶಂಕರಯ್ಯ, ವೀರಾಜಪೇಟೆಗೆ ಕುಂಞೀರ ಸನ್ನಿ, ಮಡಿಕೇರಿ ತಾಲ್ಲೂಕಿಗೆ ವಸಂತ, ನಗರಕ್ಕೆ ಸಂತೋಷ್ ಅವರನ್ನು ನೇಮಕ ಮಾಡಲಾಗಿದೆ ಎಂದು ಭಾರತೀ ರಮೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಕೋಷ್ಠದ ಪದಾಧಿಕಾರಿಗಳಾದ ಸಂತೋಷ್, ರವಿ, ವಸಂತ, ಸವಿತಾ ರಾಕೇಶ್ ಹಾಗೂ ಪ್ರಫುಲ್ಲ ಉಪಸ್ಥಿತರಿದ್ದರು.