ಬೆಂಗಳೂರು: ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯ ಗಂಟೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮೋದಿ ಮೇಲಿನ ಜನರ ವಿಶ್ವಾಸ ಕಡಿಮೆಯಾಗುತ್ತಿದೆ. ಎಲ್ಲ ಸಮೀಕ್ಷೆಗಳು ಎರಡೂ ರಾಜ್ಯಗಳಲ್ಲಿ ಬಿಜೆಪಿ ಬಹುಮತ ಗಳಿಸುತ್ತದೆ ಎಂದು ಹೇಳಿದ್ದವು ಎಲ್ಲ ಸಮೀಕ್ಷೆಗಳು ಸುಳ್ಳಾಗಿವೆ.
ಕಳೆದ ಬಾರಿ ಮಹಾರಾಷ್ಟ್ರದಲ್ಲಿ ಬಿಜೆಪಿ 122 ಗೆದ್ದಿತ್ತು ಈ ಬಾರಿ ಕಡಿಮೆಯಾಗಿದೆ. ಹರಿಯಾಣದಲ್ಲಿ ಕಳೆದ ಬಾರಿ 47 ಗೆದ್ದಿದ್ದರು. ಈ ಬಾರಿ 40 ಸ್ಥಾನ ಪಡೆದುಕೊಂಡಿದ್ದಾರೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ನಡೆಸುವ ಶಕ್ತಿ ಪಡೆದಿಲ್ಲ. ಮಹಾರಾಷ್ಟ್ರದಲ್ಲಿ ಶಿವಸೇನೆ ಅವರ ಜೊತೆ ಹೋಗದಿದ್ದರೆ ಬಿಜೆಪಿ ಸರ್ಕಾರ ರಚಿಸಲು ಆಗುವುದಿಲ್ಲ ಎಂದು ಹೇಳಿದರು.
ಹರಿಯಾಣದಲ್ಲಿ ಕಾಂಗ್ರೆಸ್ ಕೇವಲ 12 ಸ್ಥಾನ ಬರುತ್ತದೆ ಎಂದು ಹೇಳಿದ್ದರು. ನಾವು 30 ಸ್ಥಾನಗಳನ್ನು ದಾಟಿದ್ದೇವೆ. ಈ ಬಾರಿ ನಮಗೆ ಸಂಪನ್ಮೂಲ ಕೊರತೆ ಇತ್ತು. ಪ್ರತಿಪಕ್ಷದ ನಾಯಕರೆ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಎರಡೂ ರಾಜ್ಯಗಳಲ್ಲಿ ಬಿಜೆಪಿ ಐದು ವರ್ಷ ಅಧಿಕಾರ ನಡೆಸಿ ಸಾಧನೆಗಳನ್ನು ಹೇಳಲೇ ಇಲ್ಲ. ಕೇವಲ ಪಾಕಿಸ್ತಾನ, ಕಾಶ್ಮೀರದಂತಹ ಭಾವನಾತ್ಮಕ ವಿಷಯ ಪ್ರಸ್ತಾಪ ಮಾಡಿದ್ದರು. ಅವರ ಮಾತಿಗೆ ಜನರು ಮರಳಾಗಿಲ್ಲ ಎಂದು ಹೇಳಿದರು.
ಎರಡೂ ರಾಜ್ಯಗಳಲ್ಲಿ ಕಳೆದ ಬಾರಿಗಿಂತ ಈ ಬಾರಿ ಕಾಂಗ್ರೆಸ್ ಬಲ ಹೆಚ್ಚಾಗಿದೆ. ನಮ್ಮ ಸಂಪನ್ಮೂಲ, ಪಕ್ಷ ತೊರೆಯುವವರ ಸಂಖ್ಯೆ ಕಡಿಮೆಯಾಗಿದ್ದರೆ ಹೆಚ್ಚು ಸ್ಥಾನ ಗೆಲ್ಲುತ್ತಿದ್ದೆವು ಎಂದು ಹೇಳಿದರು.
ದೇಶದಲ್ಲಿ ಲೋಕಸಭೆ ಚುನಾವಣೆ ನಡೆದ ಮೂರೇ ತಿಂಗಳಲ್ಲಿ ಜನರು ಇಷ್ಟೊಂದು ಪ್ರಮಾಣದಲ್ಲಿ ಬದಲಾವಣೆ ನೀಡಿರುವುದು ವಿಧಾನಸಭೆ ಚುನಾವಣೆಗೂ ಲೋಕಸಭೆ ಚುನಾವಣೆಗೂ ಸಂಬಂಧ ಇಲ್ಲ ಎನ್ನುವುದು ತಿಳಿಯುತ್ತದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು ಭಾವನಾತ್ಮಕ ವಿಷಯ ಹಾಗೂ ಮೋದಿ ನಾಮ ಬಲದಿಂದ ಗೆದಿದ್ದರು. ಈಗ ಮೋದಿ ನಾಮ ಬಲಕ್ಕೆ ಜನರು ಮರುಳಾಗಿಲ್ಲ ಎಂದರು.
ಮಹಾರಾಷ್ಟ್ರದ ಚುನಾವಣೆಯಲ್ಲಿ ಕನ್ನಡಿಗರು ಹೆಚ್ಚಾಗಿರುವ ಜತ್, ಅಕ್ಕಲಕೋಟೆ, ಸಾಂಗ್ಲಿ ಕ್ಷೇತ್ರಗಳಲ್ಲಿ ಚುನಾವಣೆ ಪ್ರಚಾರ ನಡೆಸಿದ್ದೆ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ. ಕೇರಳದ ಮಂಜೇಶ್ವರಕ್ಕೂ ಪ್ರಚಾರಕ್ಕೆ ಹೋಗಿದ್ದೆ ಅಲ್ಲಿಯೂ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂದು ಹೇಳಿದರು.