Advertisement
‘ಭಾರತ್ ಕಿ ಮನ್ ಕಿ ಬಾತ್, ಮೋದಿ ಕೆ ಸಾಥ್’ (ಮೋದಿಯವರೊಂದಿಗೆ ಭಾರತೀಯರ ಮನದಾಳದ ಮಾತು) ಎಂಬ ಒಂದು ತಿಂಗಳ ಅಭಿಯಾನದ ಪ್ರಾರಂಭದ ದಿನವೇ ಈ ಹೊಸ ಘೋಷವಾಕ್ಯವನ್ನು ಕಮಲ ಪಕ್ಷವು ಬಿಡುಗಡೆ ಮಾಡಿದೆ. ಈ ಅಭಿಯಾನದ ಮೂಲಕ ಬಿ.ಜೆ.ಪಿ.ಯು ದೇಶಾದ್ಯಂತ ಸುಮಾರು 10 ಕೋಟಿ ಜನರಿಂದ ತನ್ನ ಮುಂಬರುವ ಪ್ರಣಾಳಿಕೆ ರೂಪಿಸಲು ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಿದೆ. ಈ ಸಲಹೆ ಸೂಚನೆಗಳನ್ನು ಆಧರಿಸಿ ಬಿ.ಜೆ.ಪಿ.ಯು ಲೋಕ ಸಮರಕ್ಕಾಗಿ ತನ್ನ ಚುನಾವಣಾ ಪ್ರಣಾಳಿಕೆ ‘ಸಂಕಲ್ಪ್ ಪತ್ರ್’ ತಯಾರಿಸಲಿದೆ. 2014ರ ಚುನಾವಣೆಯಲ್ಲಿ ‘ಸಬ್ ಕೆ ಸಾಥ್ ಸಬ್ ಕಾ ವಿಕಾಸ್’ ಎಂಬ ಘೋಷವಾಕ್ಯದೊಂದಿಗೆ ಚುನಾವಣೆಯನ್ನು ಎದುರಿಸಿತ್ತು. ಮತ್ತು ಈ ಮೂಲಕ ಯುವ ಮತದಾರರ ಹೃದಯವನ್ನು ಗೆದ್ದು ನರೇಂದ್ರ ಮೋದಿ ಅವರು ಭರ್ಜರಿ ಬಹುಮತದೊಂದಿಗೆ ಭಾರತೀಯ ಜನತಾ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ಏರಿಸುವಲ್ಲಿ ಯಶಸ್ವಿಯಾಗಿದ್ದರು.
‘ದೆಶದ ಜನರಿಂದ ಸಲಹೆಗಳನ್ನು ಪಡೆದುಕೊಂಡು ಪ್ರಣಾಳಿಕೆಯನ್ನು ರೂಪಿಸುವ ಈ ನಮ್ಮ ನೂತನ ಯೋಚನೆ ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಇನ್ನಷ್ಟು ಸಹಕಾರಿಯಾಗುವುದು’ ಎಂಬ ಆಶಾವಾದವನ್ನು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ‘ದೇಶ ನಿರ್ಮಾಣದಲ್ಲಿ ಮತದಾರರ ಕನಸುಗಳೇನು ಮತ್ತು ಈ ನಿಟ್ಟಿನಲ್ಲಿ ಅವರು ಯಾವೆಲ್ಲ ರೀತಿಯ ಸಲಹೆಗಳನ್ನು ನೀಡುತ್ತಾರೆ ಎಂಬುದನ್ನು ನಮಗೆ ತಿಳಿಸಿದರೆ ಅದಕ್ಕೆ ಸೂಕ್ತವಾದ ಪ್ರಣಾಳಿಕೆಯನ್ನು ರೂಪಿಸಲು ಅನುಕೂಲವಾಗುತ್ತದೆ ಮತ್ತು ಆ ಮೂಲಕ ನಮಗೆ ನಮ್ಮ ಕನಸಿನ ಭಾರತವನ್ನು ನಿರ್ಮಾಣ ಮಾಡಲು ಸುಲಭವಾಗುತ್ತದೆ ಎಂದು ಶಾ ಇದೇ ಸಂದರ್ಭದಲ್ಲಿ ಹೇಳಿದರು. ಪಕ್ಷದ ಇಂದಿನ ಸಭೆ ನಡೆದ ಹೊಟೇಲ್ ನ ಪರಿಚಾರಕರೊಬ್ಬರಿಂದ ಪ್ರಥಮ ಸಲಹೆಯನ್ನು ಪಡೆಯುವ ಮೂಲಕ ಬಹು ನಿರೀಕ್ಷಿತ ಈ ಅಭಿಯಾನಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಈ ಅಭಿಯಾನದ ಅಂಗವಾಗಿ ದೇಶಾದ್ಯಂತ ಇರುವ 4000 ವಿಧಾನಸಭಾ ಕ್ಷೇತ್ರಗಳಲ್ಲಿ ಜನರ ಅಭಿಪ್ರಾಯವನ್ನು ಸಂಗ್ರಹಿಸಲು 300 ವಿಶೇಷ ವಾಹನಗಳನ್ನು ಸಿದ್ಧಪಡಿಸಲಾಗಿದೆ ಮತ್ತು ಈ ವಾಹನಗಳಲ್ಲಿ 7700 ಸಲಹೆ ಸಂಗ್ರಹ ಪೆಟ್ಟಿಗೆಗಳನ್ನು ಇರಿಸಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ‘ಸಂಕಲ್ಪ್ ಪತ್ರ್’ ಆಯೋಗದ ಮುಖ್ಯಸ್ಥರಾಗಿದ್ದಾರೆ.
Related Articles
Advertisement