Advertisement

ಬಿಜೆಪಿ ಅಭ್ಯರ್ಥಿ ಘೋಷಣೆ; ಕಾಂಗ್ರೆಸ್‌ನಿಂದ ಯಾರು?

02:12 PM Mar 13, 2022 | Team Udayavani |

ಬಾಗಲಕೋಟೆ: ಪದವೀಧರರು ಮತ್ತು ಶಿಕ್ಷಕರ ವಲಯದಲ್ಲಿ ಪ್ರತಿಷ್ಠೆಯ ಚುನಾವಣೆ ಮುಂಬರುವ ಮೇ ತಿಂಗಳಲ್ಲಿ ನಡೆಯಲಿದೆ. ಈ ಚುನಾವಣೆಗೆ ಆಡಳಿತಾರೂಢ ಬಿಜೆಪಿಯಿಂದ ಎರಡೂ ಕ್ಷೇತ್ರಕ್ಕೆ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಕಾಂಗ್ರೆಸ್‌ನಿಂದ ಯಾರಿಗೆ ಕಣಕ್ಕಿಳಿಸಬೇಕೆಂಬ ಚರ್ಚೆ ಪಕ್ಷದ ವಲಯದಲ್ಲಿ ನಡೆಯುತ್ತಿದೆ.

Advertisement

ವಾಯವ್ಯ ಪದವೀಧರರ ಮತಕ್ಷೇತ್ರಕ್ಕೆ ಈ ಕ್ಷೇತ್ರದ ಹಾಲಿ ಸದಸ್ಯ ಹನಮಂತ ಆರ್‌. ನಿರಾಣಿ ಹಾಗೂ ವಾಯವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಹಾಲಿ ಸದಸ್ಯ ಅರುಣ ಶಹಾಪುರ ಅವರನ್ನೇ ಬಿಜೆಪಿ ಅಭ್ಯರ್ಥಿಗಳನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ. ಹೀಗಾಗಿ ಬಿಜೆಪಿಯಲ್ಲಿ ಸದ್ಯ ಅಭ್ಯರ್ಥಿಗಳ ಆಯ್ಕೆ ಕುರಿತು ತಲೆನೋವಿಲ್ಲ. ಗೆಲುವಿಗೆ ರಣತಂತ್ರ ಹೆಣೆಯುವಲ್ಲಿ ಬಿಜೆಪಿ ಗಂಭೀರವಾಗಿ ತೊಡಗಿದೆ. ಸರಳವಲ್ಲ ಚುನಾವಣೆ: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೂ, ವಿಧಾನ ಪರಿಷತ್‌ನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ ಅಷ್ಟೊಂದು ಸರಳವಲ್ಲ. ಈ ಕ್ಷೇತ್ರಗಳಿಗೆ ಸಿಮೀತ ಮತದಾರರಿದ್ದು, ಶಿಕ್ಷಕರ ಸಂಘಟನೆಗಳು, ಪದವೀಧರರ ಸಂಘಟನೆಗಳ ಬೆಂಬಲ ಪಡೆಯಲೇಬೇಕು. ಜತೆಗೆ ಈ ಕ್ಷೇತ್ರ ಪ್ರತಿನಿಧಿಸಿದ ವಿಧಾನ ಪರಿಷತ್‌ ಸದಸ್ಯರು, ಯಾವ ರೀತಿ ಕೆಲಸ ಕಾರ್ಯ ಮಾಡಿದ್ದಾರೆಂಬುದರ ಮೇಲೂ ಅತಿ ಹೆಚ್ಚು ಅವಲಂಬನೆಯಾಗಿರುತ್ತದೆ.

ಅಲ್ಲದೇ ವಾಯವ್ಯ ಪದವೀಧರರ ಮತ್ತು ವಾಯವ್ಯ ಶಿಕ್ಷಕರ ಮತಕ್ಷೇತ್ರದ ಕೇಂದ್ರ ಸ್ಥಾನ ಬೆಳಗಾವಿ ಆಗಿದ್ದು, ಇದರಡಿ ಬಾಗಲಕೋಟೆ, ವಿಜಯಪುರ ಕೂಡ ಒಳಗೊಂಡಿವೆ. 33 ವಿಧಾನಸಭೆ ಮತಕ್ಷೇತ್ರಗಳು, ಮೂರು ಜಿಲ್ಲೆಗಳು ಒಳಗೊಂಡ ಅತಿ ದೊಡ್ಡ ಮತಕ್ಷೇತ್ರಗಳಿವು. ಹೀಗಾಗಿ ಚುನಾವಣೆಗೆ ಪಕ್ಷ, ಆಯಾ ಮತಕ್ಷೇತ್ರಕ್ಕೆ ಸಂಬಂಧಿಸಿದ ಸಂಘಟನೆಗಳ ಬೆಂಬಲವಿಲ್ಲದೇ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಸುಮಾರು ನಾಲ್ಕು ಬಾರಿ ಪದವೀಧರ ಮತಕ್ಷೇತ್ರ ಪ್ರತಿನಿಧಿಸಿದ್ದ ಹಿರಿಯ ರಾಜಕಾರಣಿ ಡಾಣಎಂ.ಪಿ. ನಾಡಗೌಡ ಅವರು ಕಳೆದ ಎರಡು ಅವಧಿಯಲ್ಲಿ ಸೋಲು ಕಂಡಿದ್ದಾರೆ. ಈ ಕ್ಷೇತ್ರಗಳು ಪದವೀಧರರ ಮುತ್ಸದ್ಧಿ ರಾಜಕಾರಣಿಗಳಿಗೆ ಎಂಬುದು ಈಗಿಲ್ಲ. ಇಲ್ಲೂ ಹಣ ಬಲ, ಪಕ್ಷದ ಪ್ರತಿಷ್ಠೆಯ ಬಲದಿಂದಲೇ ಚುನಾವಣೆ ನಡೆಯುತ್ತದೆ.

ಕಾಂಗ್ರೆಸ್‌ನಿಂದ ಯಾರು ?: ಶಿಕ್ಷಕರ ಕ್ಷೇತ್ರದಿಂದ ಕಳೆದ ಮೂರು ಬಾರಿ ಸ್ಪರ್ಧಿಸಿದ್ದ ಕೆರೂರಿನ ಎನ್‌ .ಬಿ. ಬನ್ನೂರ, ಇದೊಂದು ಬಾರಿ ಸ್ಪರ್ಧೆಗೆ ಮತ್ತೆ ಅಣಿಯಾಗಿದ್ದಾರೆ. ಅವರು ಕಳೆದ ಬಾರಿ ಸ್ಪರ್ಧಿಸಿದ್ದಾಗ ಇದು ನನ್ನ ಕೊನೆಯ ಚುನಾವಣೆ ಎಂದು ಪ್ರಚಾರ ಮಾಡಿದ್ದರು. ಅಂತಹ ಅನುಕಂಪ ಅವರಿಗೆ ವರ್ಕೌಟ್ ಆಗಲಿಲ್ಲ. ಬಿಜೆಪಿಯ ಅರುಣ ಶಹಾಪುರ ಅವರೇ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಎನ್‌.ಬಿ. ಬನ್ನೂರ, ಹುನಗುಂದ ತಾಲೂಕಿನ ಗೊರಜಿನಾಳದ ನಿವೃತ್ತ ಉಪನ್ಯಾಸಕ ಗೌಡರ, ಜಮಖಂಡಿಯ ಸಂದೀಪ ಬೆಳಗಲಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಮುಖ್ಯವಾಗಿ ಬೆಳಗಾವಿ ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಈ ಬಾರಿ ಶಿಕ್ಷಕರ ಕ್ಷೇತ್ರದಿಂದ ಕಣಕ್ಕಿಳಿಯಲು ಗಂಭೀರ ಪ್ರಯತ್ನ ನಡೆಸಿದ್ದಾರೆಂದು ತಿಳಿದು ಬಂದಿದೆ.

ಪದವೀಧರ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್‌: ಪದವೀಧರ ಕ್ಷೇತ್ರಕ್ಕೆ ಕಳೆದ ಬಾರಿ ಬಿಜೆಪಿಯಿಂದ ಹನಮಂತ ನಿರಾಣಿ, ಮೊದಲ ಬಾರಿಗೆ ಆಯ್ಕೆಯಾಗಿದ್ದು, ಆರು ವರ್ಷಗಳ ಕಾಲ ಉತ್ತಮ ಕೆಲಸ ಮಾಡಿದ್ದಾರೆಂಬ ಹೆಸರಿದೆ. ಅದಕ್ಕೂ ಮುಂಚೆ ಕಾಂಗ್ರೆಸ್‌ ಹಿಡಿತದಲ್ಲಿದ್ದ ಈ ಕ್ಷೇತ್ರವನ್ನು ಮೊದಲ ಬಾರಿಗೆ ಬಿಜೆಪಿ ವಶಕ್ಕೆ ಪಡೆಯುವಲ್ಲಿ ನಿರಾಣಿ ಯಶಸ್ವಿಯಾಗಿದ್ದರು. ಈ ಬಾರಿಯೂ ಬಿಜೆಪಿಯಿಂದ ಅವರೇ ಸ್ಪರ್ಧೆ ಮಾಡಿದ್ದು, ಅವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ಯಾರು ಸ್ಪರ್ಧೆ ಮಾಡಲಿದ್ದಾರೆಂಬ ಕುತೂಹಲ ಮೂಡಿದೆ.

Advertisement

ಸದ್ಯದ ಮಾಹಿತಿ ಪ್ರಕಾರ ಕಾಂಗ್ರೆಸ್‌ನಿಂದ ಬೈಲಹೊಂಗಲದ ಕಿರಣ ಸಾಧುನವರ, ಅಥಣಿಯ ಸಂಕ, ಬಾಗಲಕೋಟೆಯ ಇಬ್ಬರು ವಕೀಲರಾದ ಬಸವರಾಜ ಸಂಶಿ, ಬಗಲಿದೇಸಾಯಿ ಅವರು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯಿಂದ ಈಗಾಗಲೇ ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್‌ ಅಂತಿಮಗೊಳ್ಳಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ವಿಧಾನ ಪರಿಷತ್‌ನ ಪದವೀಧರ ಕ್ಷೇತ್ರದಿಂದ ಪಕ್ಷದಿಂದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದು, ನಾನು ಕಳೆದ ಆರು ವರ್ಷಗಳ ಕಾಲ ಪದವೀಧರರ ಕ್ಷೇತ್ರದ ಎಲ್ಲ ಮತದಾರರ ಆಗು ಹೋಗುಗಳಿಗೆ ಸ್ಪಂದಿಸುವ ಕೆಲಸ ಮಾಡಿರುವೆ. ಪರಿಷತ್‌ನಲ್ಲಿ ಅವರ ಪರವಾಗಿ ನಿರಂತರ ಧ್ವನಿ ಎತ್ತಿದ್ದೇನೆ. ಕಳೆದ ಬಾರಿ 23 ಸಾವಿರಕ್ಕೂ ಹೆಚ್ಚು ಮತಗಳಿಂದ ನನ್ನನ್ನು ಆಯ್ಕೆ ಮಾಡಿದ್ದು, ಈ ಬಾರಿಯೂ ಮತದಾರರು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸವಿದೆ.
ಹನಮಂತ ನಿರಾಣಿ, ವಿಧಾನ ಪರಿಷತ್‌ ಸದಸ್ಯ, ಪದವೀಧರ ಕ್ಷೇತ

ಪದವೀಧರ ಕ್ಷೇತ್ರಕ್ಕೆ ನಾಲ್ಕು ಜನ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ನಾಲ್ವರು ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಜಿಲ್ಲೆಯಿಂದ ಎರಡೂ ಕ್ಷೇತ್ರಕ್ಕೆ ಐದು ಜನ ಟಿಕೆಟ್‌ ಕೇಳಿದ್ದು, ಆ ಅರ್ಜಿಗಳನ್ನು ಪಕ್ಷದ ರಾಜ್ಯ ಚುನಾವಣೆ ಸಮಿತಿಗೆ ಕಳುಹಿಸಲಾಗಿದೆ. ಯಾರಿಗೆ ಟಿಕೆಟ್‌ ಘೋಷಿಸಿದರೂ ಅವರ ಗೆಲುವಿಗೆ ಪಕ್ಷದ ಮೂರು ಜಿಲ್ಲೆಗಳ ಹಿರಿಯರೊಂದಿಗೆ ಶ್ರಮಿಸುತ್ತೇವೆ.
ಎಸ್‌.ಜಿ.ನಂಜಯ್ಯನಮಠ, ಜಿಲ್ಲಾಧ್ಯಕ್ಷ ಕಾಂಗ್ರೆಸ್‌

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next