ಬೆಂಗಳೂರು: ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಗುರುವಾರ ಅಹೋರಾತ್ರಿ ಧರಣಿ ಆರಂಭಿಸಿತು.
ಸದನದಲ್ಲಿ ಇದನ್ನು ಪ್ರಕಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿ, ರಾಜ್ಯಪಾಲರು ಪ್ರಮುಖ ತೀರ್ಮಾನ ಕೈಗೊಳ್ಳಬಾರದು ಎಂದು ಸೂಚಿಸಿದ್ದರೂ ಕಡತ ವಿಲೇವಾರಿಯಂತಹ ಪ್ರಮುಖ ತೀರ್ಮಾನಗಳನ್ನು ಕೈಗೊಂಡಿದ್ದಾರೆ ಎಂದು ದೂರಿದರು.
‘ನಾವು 105 ಶಾಸಕರಿದ್ದೇವೆ. ಮೈತ್ರಿ ಪಕ್ಷಗಳ ಶಾಸಕರ ಬಲ 98ಕ್ಕೆ ಇಳಿದಿದ್ದು, ಬಹುಮತ ಇಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆ ಏನು ಬೇಕು?. ಸದನದಲ್ಲಿ ಬಿಜೆಪಿ ಶಾಸಕರನ್ನು ಪ್ರಚೋದಿಸುವ ಕೆಲಸ ಮಾಡಲಾಗಿದೆ. ನಮ್ಮೆಲ್ಲಾ ಶಾಸಕರು ರಾತ್ರಿ ಸದನದಲ್ಲಿ ಧರಣಿ ನಡೆಸುತ್ತೇವೆ’ ಎಂದು ಹೇಳಿದರು.
ರೆಸಾರ್ಟ್ ವಾಸ್ತವ್ಯ ದಿಢೀರ್ ರದ್ದು: ಯಲಹಂಕದ ರಮಡಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ಶಾಸಕರು ಪೂರ್ವ ಯೋಜ ನೆಯಂತೆ ಗುರುವಾರ ರಾತ್ರಿ ರೆಸಾರ್ಟ್‌ಗೆ ಮರಳಬೇಕಿತ್ತು. ಆದರೆ, ವಿಶ್ವಾಸಮತ ಯಾಚನೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಅಹೋರಾತ್ರಿ ಧರಣಿಗೆ ಮುಂದಾದ ಹಿನ್ನೆಲೆಯಲ್ಲಿ ರೆಸಾರ್ಟ್‌ಗೆ ಹಿಂತಿರುಗುವ ಕಾರ್ಯಕ್ರಮ ರದ್ದಾಯಿತು.
ಮೊಗಸಾಲೆಯಲ್ಲೇ ಊಟ, ನಿದ್ರೆ: ವೈದ್ಯಕೀಯ ಸಿಬ್ಬಂದಿ ಯಡಿಯೂರಪ್ಪ ಸೇರಿ ಇತರರ ಆರೋಗ್ಯ ತಪಾಸಣೆ ನಡೆಸಿದರು. ಬಳಿಕ ವಿಧಾನ ಸಭೆಯ ಕಾರ್ಯದರ್ಶಿಯವರು ಬಿಜೆಪಿ ಶಾಸಕ ರಿಗೆ ಊಟದ ವ್ಯವಸ್ಥೆ ಮಾಡಿದರು. ಮೊಗಸಾಲೆ ಯಲ್ಲೇ ಊಟ ಮಾಡಿದ ಬಿಜೆಪಿ ಶಾಸಕರು, ಬಳಿಕ ಅಲ್ಲಿದ್ದ ಸೋಫಾಗಳ ಮೇಲೆಯೇ ವಿಶ್ರಮಿಸಿದರು. ಕೆಲವರು ಹೊರಗಿನಿಂದ ದಿಂಬು, ಹೊದಿಕೆಗಳನ್ನು ತಂದು ಮಲಗಿದರು.
ಶುಕ್ರವಾರ ಶಾಸಕಾಂಗ ಸಭೆ: ಶುಕ್ರವಾರ ಬೆಳಗ್ಗೆ 9 ಗಂಟೆಗೆ ಪಕ್ಷದ ಶಾಸಕಾಂಗ ಸಭೆ ಕರೆಯಲಾ ಗಿದ್ದು, ಅಲ್ಲಿ ಸದನದಲ್ಲಿ ನಡೆದುಕೊಳ್ಳಬೇಕಾದ ರೀತಿಯ ಬಗ್ಗೆ ಯಡಿಯೂರಪ್ಪ ಸೇರಿದಂತೆ ಇತರ ನಾಯಕರು ಸೂಚನೆ ನೀಡಲಿದ್ದಾರೆ. ಅದ ರಂತೆ ಎಲ್ಲ ಶಾಸಕರು ಮುಂದುವರಿಯಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.
ನ್ಯಾಯವಾದಿಗಳಿಗೆ ಮಾಹಿತಿ ರವಾನೆ: ಹಿರಿಯ ನ್ಯಾಯವಾದಿ ಮುಕುಲ್ ರೋಹrಗಿ ಅವರಿಗೂ ಗುರುವಾರ ವಿಧಾನಸಭೆಯ ಕಲಾಪದ ವಿವರವನ್ನು ರವಾನಿಸಲಾಗಿದೆ. ಜತೆಗೆ ಮುಂದೆ ಕಾನೂನಾತ್ಮಕ ಅಡೆತಡೆಗಳು ತಲೆದೋರಿದರೆ ಯಾವ ರೀತಿಯಲ್ಲಿ ಎದುರಿಸಬೇಕು ಎಂಬ ಬಗ್ಗೆಯೂ ಸಲಹೆ ಪಡೆದಿದ್ದಾರೆ. ಶುಕ್ರವಾರ ಎಲ್ಲ ಶಾಸಕರು ಒಗ್ಗಟ್ಟು ಕಾಯ್ದುಕೊಳ್ಳುವ ಮೂಲಕ ಮುಖ್ಯಮಂತ್ರಿಗಳ ವಿಶ್ವಾಸಮತ ಯಾಚನೆ ಯನ್ನು ವಿಫಲಗೊಳಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ಕಲಾಪ ವೀಕ್ಷಿಸಿದ ನಾಯಕರು: ಗುರುವಾರದ ವಿಶ್ವಾಸಮತ ಯಾಚನೆ ನಿರ್ಣಯ ಮಂಡನೆಯ ಕಲಾಪವನ್ನು ರಾಜ್ಯಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್, ವಿಧಾನಪರಿಷತ್ ಸದಸ್ಯರಾದ ಶರಣಪ್ಪ ಮಟ್ಟೂರು, ಬೋಸರಾಜು, ಜಯಮ್ಮ, ವೀಣಾ ಅಚ್ಚಯ್ಯ ಸೇರಿದಂತೆ ಹಲವರು ವಿಧಾನಸಭೆ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದರು. ವಿಧಾನಪರಿಷತ್ ಸದಸ್ಯ ಬೋಜೇಗೌಡ, ಲೆಹರ್‌ಸಿಂಗ್ ಪತ್ರಕರ್ತರ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಿಸಿದರು.