ಶಿಕಾರಿಪುರ: ಪುರಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬೂದಿ ಮುಚ್ಚಿದ ಕೆಂಡದಂತಿದ್ದ ಪಟ್ಟಣದಲ್ಲಿ ನಿಧಾನವಾಗಿ ಪರಿಸ್ಥಿತಿ ಕಾವೇರತೊಡಗಿದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಯಾವುದೇ ರೀತಿಯ ಅಹಿತಕರ ಘಟನೆಗಳಾಗದಂತೆ ಶಾಂತವಾಗಿ ನಡೆದಿದ್ದವು. ಅದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಾರಂಭದಿಂದಲೇ ಪರಿಸ್ಥಿತಿ ವ್ಯತ್ಯಯವಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಂಘರ್ಷ ಪ್ರಾರಂಭವಾದಂತೆ ಇದೆ. ಇದಕ್ಕೆ ಪೂರಕವಾಗಿ ಶನಿವಾರ ಪಟ್ಟಣ ಹೊಯ್ಸಳ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತ ರಾಜಶೇಖರ್ ಗಿರ್ಜಿ ಎಂಬುವವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆದಿರುವ ಘಟನೆ ನಡೆದಿದೆ. ಗಾಯಗೊಂಡ ರಾಜಶೇಖರ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಹಿನ್ನಲೆ: ಗುರುವಾರ ತಾಲೂಕು ಬಿಜೆಪಿ ಅಧ್ಯಕ್ಷ ಕೊಳಗಿ ರೇವಣಪ್ಪ ಪಟ್ಟಣದ 14ನೇ ವಾರ್ಡ್‌ನಲ್ಲಿ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿದ್ದರಿಂದ ವಾರ್ಡ್‌ನಲ್ಲಿ ಇರುವ ಮಹಿಳೆಯೊಬ್ಬರನ್ನು ಚುನಾವಣೆಗೆ ಸ್ಪರ್ಧಿಸಲು ಮನವಿ ಮಾಡಲು ಅವರ ಮನೆಗೆ ಹೋಗಿ ಬಂದಿದ್ದರು. ಈ ವಿಷಯ ತಿಳಿದ ವಿಧಾನ ಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಶಾಂತವೀರಪ್ಪ ಗೌಡ ರೇವಣಪ್ಪ ಅವರಿಗೆ ದೂರವಾಣಿ ಕರೆ ಮಾಡಿ ನನ್ನ ಸಂಬಂಧಿಗೆ ಬಿಜೆಪಿಯಿಂದ ಟಿಕೆಟ್ ಕೊಡಲು ಅವರ ಮನೆಗೆ ಹೊಗಿದೀರಲ್ಲ. ನಿಮಗೆ ನಾಚಿಕೆ ಎನಿಸುವುದಿಲ್ಲವೇ ಎಂದು ಪ್ರಶ್ನಿಸಿದರು. ತಾಕತ್ತಿದ್ದರೆ ಹೊಯ್ಸಳ ವೃತ್ತಕ್ಕೆ ಬನ್ನಿ, ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಮತ್ತೆ ಮೂರು ನಾಲ್ಕು ಬಾರಿ ಕರೆ ಮಾಡಿದರು ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ.
ನಂತರ ಶುಕ್ರವಾರ ಬೆಳಗ್ಗೆ ಬಿಜೆಪಿ ಕಚೇರಿಗೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತ ಎಚ್. ಎಸ್. ರವೀಂದ್ರ (ರಾಘು) ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗುರುಮೂರ್ತಿ ಅವರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮನ ನೊಂದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗುರುಮೂರ್ತಿ ಹಾಗೂ ತಾಲೂಕು ಅಧ್ಯಕ್ಷ ಕೆ. ರೇವಣಪ್ಪ ನೇತೃತ್ವದಲ್ಲಿ ಪಟ್ಟಣ ಪೊಲೀಸ್ ಠಾಣೆಗೆ ಶಾಂತಯುತವಾಗಿ ಮೌನ ಮೆರವಣಿಗೆಯ ಮೂಲಕ ದೂರು ನೀಡಲು ಹೊದಾಗ ಹೋಯ್ಸಳ ವೃತ್ತದಲ್ಲಿ ನಿಂತಿದ ಬಿಜೆಪಿ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಯಕರ್ತ ರಾಜಶೇಖರ್ ಗಿರ್ಜಿ ಅವರ ಮೇಲೆ ಏಕಾಏಕಿ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರಾದ ಪುರಸಭಾ ಸದಸ್ಯ ನಾಗರಾಜ ಗೌಡ, ಚಂದ್ರೇಗೌಡ, ಬೆಂಕಿ ಮಾಲತೇಶ್, ರಾಜಶೇಖರ ಗೌಡ ಮುಂತಾದವರು ಸೇರಿ ಹಲ್ಲೆ ನಡೆಸಿದ್ದಾರೆ.
ಈ ವೇಳೆ ದೂರು ನೀಡಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗುರುಮೂರ್ತಿ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾ ವರ್ತನೆ ಜಾಸ್ತಿಯಾಗಿದ್ದು ನಿನ್ನೆ ನಾನು ಬೈಕ್‌ನಲ್ಲಿ ಬರುವಾಗ ಶಾಂತವೀರಪ್ಪ ಗೌಡರ ಮಗ ರವೀಂದ್ರ ಮನೆಯವರೆಗೆ ಮತ್ತು ಬಿಜೆಪಿ ಕಚೇರಿಯವರೆಗೆ ಹಿಂಬಾಲಿಸಿಕೊಂಡು ಬಂದು ನನ್ನ ಬಗ್ಗೆ ನನ್ನ ಕುಟುಂಬದ ಬಗ್ಗೆ ತಾಲೂಕು ಅಧ್ಯಕ್ಷರಾದ ರೇವಣಪ್ಪ ಅವರ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದರು. ರಾತ್ರಿ 11 ಗಂಟೆಗೆ ಪುರಸಭಾ ಅಧ್ಯಕ್ಷರ ಮನೆ ಬಾಗಿಲಿಗೆ ಹೋಗಿ ದಮ್ಕಿ ಹಾಕಿದರು. ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. ಆದರೆ ಪೊಲೀಸ್ ಇಲಾಖೆಯಾಗಲಿ, ತಾಲೂಕು ಆಡಳಿತವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ಕಾನೂನನ್ನು ಕೈಗೆ ತೆಗೆದುಕೊಂಡು ಬಂದರೂ ಅಧಿಕಾರಿಗಳು ಮೌನವಾಗಿದ್ದಾರೆ. ನಾವು ಎಲ್ಲಿಯವರೆಗೆ ಒಂದು ರಾಜಕೀಯ ಪಕ್ಷವಾಗಿ ಸಹಿಸಿಕೊಂಡು ಬರಬೇಕು. ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ನಾವು ಶಾಂತಿಯುತವಾಗಿ ನಡೆದುಕೊಳ್ಳುತ್ತಿದ್ದೇವೆ. ಕಾಂಗ್ರೆಸ್‌ನವರ ದೌರ್ಜನ್ಯ ಹೀಗೇ ಮುಂದುವರಿದರೆ ನಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತರು ನಿರ್ಭಯವಾಗಿ ಓಡಾಡುವುದು ದುಸ್ಥರವಾಗುತ್ತದೆ. ನಮ್ಮ ಕಾರ್ಯಕರ್ತ ರಾಜಶೇಖರ್ ಗಿರ್ಜಿ ಅವರ ಮೇಲೆ ಅಮಾನುಷವಾಗಿ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ನಮಗೆ ಸೂಕ್ತ ರಕ್ಷಣೆಯನ್ನು ಜಿಲ್ಲಾ ರಕ್ಷಣಾಧಿಕಾರಿಗಳು ಕೊಡಬೇಕು ಎಂದು ಆಗ್ರಹಿಸಿದರು. ಹಲ್ಲೆ ಘಟನೆ ಖಂಡಿಸಿ ತಾಲೂಕು ಬಿಜೆಪಿ ವತಿಯಿಂದ ಪಟ್ಟಣದ ಪೊಲೀಸ್ ಠಾಣೆಯ ಮುಂದೆ ಮೌನ ಪ್ರತಿಭಟನೆ ನಡೆಸುತ್ತಿದ್ದು ಆರೋಪಿಗಳನ್ನು ಬಂಧಿಸುವ ವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದ್ದಿದ್ದಾರೆ. ಸ್ಥಳದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಕೆ.ಎಸ್. ಗುರುಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷ ಕೆ. ರೇವಣಪ್ಪ, ಕಾರ್ಯದರ್ಶಿಗಳಾದ ಸಿದ್ದಲಿಂಗಪ್ಪ, ಪರುಶುರಾಮ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಗಡಿ ಅಶೋಕ್, ಎಂ.ಬಿ. ಚನ್ನವೀರಪ್ಪ, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಸಣ್ಣ ಹನುಮಂತಪ್ಪ, ಪರಮೇಶ್ವರಪ್ಪ, ಸುಕೇಂದ್ರಪ್ಪ, ಈಶ್ವರಪ್ಪ, ಮಂಜಾಚಾರ್, ವಸಂತಗೌಡ, ಗುರುರಾಜ್ ಜಗತಾಪ್, ಗಿರೀಶ್ ಧಾರವಾಡ, ಪಾಪಣ್ಣ ಇದ್ದರು.