Advertisement

ಕುಣಿದು ಕುಪ್ಪಳಿಸಿದ ಬಿಜೆಪಿ ಕಾರ್ಯಕರ್ತರು

03:48 PM Dec 19, 2017 | Team Udayavani |

ರಾಯಚೂರು: ದೇಶದಲ್ಲಿ ಕದನ ಕುತೂಹಲ ಮೂಡಿಸಿದ್ದ ಗುಜರಾತ್‌, ಹಿಮಾಚಲ ಪ್ರದೇಶಗಳ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಗೆಲುವು ದಾಖಲಿಸುತ್ತಿದ್ದಂತೆ ಜಿಲ್ಲಾದ್ಯಂತ ಪಕ್ಷದ ಮುಖಂಡರು, ಕಾರ್ಯಕರ್ತರು ಸೋಮವಾರ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

Advertisement

ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು, ಹೋಬಳಿ ಹಾಗೂ ಗ್ರಾಮಗಳಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂತಸ ಹಂಚಿಕೊಂಡರು.

ಈ ವೇಳೆ ಮಾತನಾಡಿದ ಮುಖಂಡರು, ದೇಶದಲ್ಲಿ ಬಿಜೆಪಿ ಹವಾ ಶುರುವಾಗಿದೆ. ಸಾಕಷ್ಟು ವಿರೋಧಗಳ ಮಧ್ಯೆಯೂ ಗುಜರಾತ್‌ ನಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಪ್ರತಿಪಕ್ಷಗಳಿಗೆ ಸ್ಪಷ್ಟ ಸಂದೇಶ ರವಾನೆಯಾಗಿದೆ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೂ ಈ ಫಲಿತಾಂಶ ಸ್ಪಷ್ಟ ದಿಕ್ಸೂಚಿಯಾಗಲಿದೆ. ದೇಶದ 19 ರಾಜ್ಯಗಳಲ್ಲಿ ಈಗ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ದೇಶವನ್ನು
ಕಾಂಗ್ರೆಸ್‌ ಮುಕ್ತಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಮುಖಂಡರಾದ ಶಂಕ್ರಪ್ಪ, ಆರ್‌.ತಿಮ್ಮಯ್ಯ, ಅಶೋಕ ಗಸ್ತಿ, ಬಸವನಗೌಡ, ದೊಡ್ಡ ಮಲ್ಲೇಶ, ನರಸಪ್ಪ ಯಕ್ಲಾಸಪುರ, ಎ.ಚಂದ್ರಶೇಖರ, ರವೀಂದ್ರ ಜಲ್ದಾರ್‌ ಸೇರಿ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಚಾಯ್‌ ಪೇ ಚರ್ಚಾ: ಪ್ರಧಾನಿ ಮೋದಿ ಹೋದಲೆಲ್ಲ ಚಾಯ್‌ ವಾಲಾ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದವು. ಆದರೆ, ಚಾಯ್‌ ವಾಲಾನ ಪ್ರಭಾವ ಕುಗ್ಗಿಲ್ಲ ಎಂದು ಬಿಂಬಿಸಲು ಜಿಲ್ಲಾ ಬಿಜೆಪಿ ಮುಖಂಡರು ವಿಜಯೋತ್ಸವ ಸ್ಥಳದಲ್ಲೇ ಚಹಾ ಸೇವಿಸುವ ಮೂಲಕ ಚಾಯ್‌ ಪೇ ಚರ್ಚಾ ನಡೆಸಿದರು.

Advertisement

ಹಳ್ಳಿಗಳಲ್ಲೂ ಸಂಭ್ರಮಾಚರಣೆ: ನಗರ, ಪಟ್ಟಣ ಪ್ರದೇಶಗಳು ಮಾತ್ರವಲ್ಲದೇ ಹಳ್ಳಿಗಳಲ್ಲೂ ಪಕ್ಷದ ಗೆಲುವಿಗೆ ಪಟಾಕಿ ಸಿಡಿಸಿ
ಸಂಭ್ರಮಿಸಲಾಯಿತು. ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ ಕಾರ್ಯಕರ್ತರು, ನಂತರ ಪಟಾಕಿ ಸಿಡಿಸಿ, ಸಿಹಿ ಹಂಚಿ
ಸಂಭ್ರಮಿಸಿದರು. ಗ್ರಾಮಗಳಲ್ಲಿ ನಡೆಸಿದ ಸಂಭ್ರಮಾಚರಣೆಯನ್ನು ಫೇಸ್‌ಬುಕ್‌ ಮತ್ತು ವಾಟ್ಸಾಪ್‌ಗ್ಳಲ್ಲಿ ಹರಿಬಿಟ್ಟಿದ್ದು, ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next