ಬೆಂಗಳೂರು: ರಾಜಧಾನಿಯಲ್ಲಿ ಕೋವಿಡ್ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಇನ್ನೆರಡು ದಿನದಲ್ಲಿ ಕೋವಿಡ್ 19 ವಾರಿಯರ್ಸ್‌ಗಳಾಗಿ ಪ್ರತಿ ವಾರ್ಡ್‌ಗಳಲ್ಲಿ ಜನ ಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ನಗರದಲ್ಲಿ ಭಾನುವಾರ ಮಲ್ಲೇಶ್ವರ ಹಾಗೂ ಹೆಬ್ಟಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ವರ್ಚುವಲ್ ರ್ಯಾಲಿ ಉದ್ದೇಶಿಸಿ ಮಾತನಾಡಿದರು. ಪ್ರತಿ ವಾರ್ಡ್‌ನಲ್ಲೂ ಆರೋಗ್ಯವಂತ 50 ಕಾರ್ಯಕರ್ತರು ಕೋವಿಡ್ 19 ವಾರಿಯರ್ಸ್‌ಗಳಾಗಿ ಸೇವೆಸಲ್ಲಿಸಲಿದ್ದಾರೆ. ಅವರಿಗೆ ಸೂಕ್ತ ತರಬೇತಿ ಕೊಡಿಸಿ ಹಾಫ್ ಪಿಪಿಇ ಕಿಟ್ ನೀಡಿ ಸೇವೆಗೆ ನಿಯೋಜಿಸಲಾಗುವುದೆಂದರು.
ಬಿಬಿಎಂಪಿ 2 ದಿನದಲ್ಲಿ ಹೆಸರು ನೋಂದಾಯಿಸಿಕೊಳ್ಳಲಿದ್ದು, ಕಾರ್ಯಕರ್ತರು ಸ್ವ-ಇಚ್ಛೆಯಿಂದ ಹೆಸರು ನೋಂದಾಯಿಸಿಕೊಳ್ಳಬೇಕು. ಅವರ ವಾರ್ಡ್‌ನ ಪ್ರತಿ ಪ್ರದೇಶದ ಮಾಹಿತಿ ಜತೆಗೆ ಸೋಂಕಿತರನ್ನು ಗುರುತಿಸುವುದು. ಅವರನ್ನು ಪ್ರಾಥಮಿಕ ಹಂತದ ತಪಾಸಣೆಗೆ ಕಳುಹಿಸುವುದು. ಆಸ್ಪತ್ರೆ ಇಲ್ಲವೇ ಮನೆಯಲ್ಲೇ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದು ಸೇರಿದಂತೆ ಅಗತ್ಯವಿರುವ ಎಲ್ಲಾ ಸೇವೆಗಳನ್ನು ಕಾರ್ಯಕರ್ತರು ಮಾಡಬೇಕಾಗುತ್ತದೆ ಎಂದು ವಿವರಿಸಿದರು.
ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಹೆಬ್ಟಾಳ ಕ್ಷೇತ್ರದಲ್ಲಿ ಕೋವಿಡ್ 19 ವಾರಿಯರ್ಸ್ಗಳಾಗಿ ಕಾರ್ಯ ನಿರ್ವಹಿಸಲು 300 ಕಾರ್ಯಕರ್ತರು ಸಿದ್ಧರಿದ್ದಾರೆ. ಅಗತ್ಯವೆನಿಸಿದರೆ ಇನ್ನಷ್ಟು ಕಾರ್ಯಕರ್ತರು ಕೈಜೋಡಿಸಲಿದ್ದಾರೆ ಎಂದು ಹೇಳಿದರು. ಜಿಕೆವಿಕೆಯಲ್ಲಿ ತೆರೆಯಲಾಗಿರುವ 700 ಹಾಸಿಗೆಗಳ ಕೋವಿಡ್ ಚಿಕಿತ್ಸಾ ಕೇಂದ್ರದ ಉಸ್ತುವಾರಿಯನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ವೈ.ಎ.ನಾರಾಯಣಸ್ವಾಮಿ ಅವರಿಗೆ ವಹಿಸಿದರು. ಬೆಂಗಳೂರು ಉತ್ತರ ಜಿಲ್ಲೆ ಬಿಜೆಪಿ ಅಧ್ಯಕ್ಷ ನಾರಾಯಣಗೌಡ ಮತ್ತಿತರರಿದ್ದರು.
ಸೋಂಕು ಹೆಚ್ಚಾಗಿ ಹರಡುತ್ತಿರುವ ಸ್ಥಳಗಳ ಬಗ್ಗೆ ಪಾಲಿಕೆ ಮಾಹಿತಿ ನೀಡಬೇಕು. ಹೆಚ್ಚು ಜನ ಸಾಂದ್ರತೆ ಪ್ರದೇಶಗಳಲ್ಲಿ ಸೋಂಕು ಸಹಜವಾಗಿ ಹೆಚ್ಚಾಗಿರುವುದರಿಂದ ಅದನ್ನು ತಗ್ಗಿಸಲು ಕಾರ್ಯಕರ್ತರ ಪಡೆ ಬಿಬಿಎಂಪಿಗೆ ನೆರವಾಗಬೇಕು. ಇನ್ನೂ ಕನಿಷ್ಠ 4 ತಿಂಗಳಾದರೂ ಈ ಸಮಸ್ಯೆ ಇರಲಿದ್ದು, ಅಷ್ಟೂ ದಿನ ನಿಸ್ವಾರ್ಥವಾಗಿ ಜನಸೇವೆ ಮಾಡಬೇಕು.
-ಅಶ್ವತ್ಥನಾರಾಯಣ, ಡಿಸಿಎಂ