ಹೊಸ ದಿಲ್ಲಿ : ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ತಮ್ಮ ಬಿಜು ಜನತಾ ದಳ (ಬಿಜೆಡಿ) ಹಿಂದಿನಂತೆ ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಫರ್ಧಿಸಲಿದೆ ಎಂದು ಗುರುವಾರ ಹೇಳಿದ್ದಾರೆ.
ವಿರೋಧ ಪಕ್ಷಗಳ ಒಗ್ಗಟ್ಟಿನ ರಚನೆಯ ಪ್ರಯತ್ನಗಳ ನಡುವೆ ಜೆಡಿಯು ನಾಯಕ ನಿತೀಶ್ ಕುಮಾರ್ ಅವರನ್ನು ಭೇಟಿಯಾದ ಕೆಲವೇ ದಿನಗಳ ನಂತರ ಈ ಹೇಳಿಕೆ ನೀಡಿದ್ದಾರೆ.
ತಮ್ಮ ರಾಜ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಭೆಯ ನಂತರ ರಾಷ್ಟ್ರ ರಾಜಧಾನಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪಟ್ನಾಯಕ್, ನಿತೀಶ್ ಕುಮಾರ್ ಅವರು ಭುವನೇಶ್ವರಕ್ಕೆ ಬಂದಿರುವುದು ಸೌಜನ್ಯದ ಭೇಟಿ ಎಂದರು. ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಸಮಾನವಾಗಿ ದೂರ ಉಳಿಯುವ ತಮ್ಮ ಪಕ್ಷದ ನಿಲುವನ್ನು ಪುನರುಚ್ಚರಿಸಿದರು.
ಪಟ್ನಾಯಕ್ 2000 ರಿಂದ ಒಡಿಶಾದಲ್ಲಿ ಚುಕ್ಕಾಣಿ ಹಿಡಿದಿದ್ದಾರೆ ಮತ್ತು ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವಿನ ಘರ್ಷಣೆಗಳನ್ನು ಒಳಗೊಂಡಿರುವ ವಿಷಯಗಳ ಬಗ್ಗೆ ತಟಸ್ಥ ನಿಲುವು ಹೊಂದಿರುವ ಕೆಲವು ಪ್ರಾದೇಶಿಕ ಪಕ್ಷಗಳಲ್ಲಿ ಅವರ ಬಿಜೆಡಿ ಸೇರಿದೆ. ಕೆಲವೊಮ್ಮೆ ಸಂಸತ್ತಿನಲ್ಲಿಯೂ ಬಿಜೆಪಿಯನ್ನು ಬೆಂಬಲಿಸಿದೆ.
ಪಟ್ನಾಯಕ್ ಅವರು ತಮ್ಮ ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಲು ಪ್ರಧಾನಿಯನ್ನು ಭೇಟಿಯಾಗಿರುವುದಾಗಿ ಹೇಳಿದರು. ಸುಮಾರು 20-25 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಪಟ್ನಾಯಕ್ ಅವರು ರಾಜ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಜಗನ್ನಾಥ ವಿಮಾನ ನಿಲ್ದಾಣ, ಅಪೂರ್ಣ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಸೌಲಭ್ಯ ಹೊಂದಿರದ ಗ್ರಾಮ ಪಂಚಾಯಿತಿಯಲ್ಲಿ ಬ್ಯಾಂಕ್ ಶಾಖೆಗಳನ್ನು ತೆರೆಯುವುದು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.
ಕುಮಾರ್ ಅವರೊಂದಿಗಿನ ಭೇಟಿಯ ಬಗ್ಗೆ ಮತ್ತು ‘ತೃತೀಯ ರಂಗ’ ಹೊರಹೊಮ್ಮುವ ಸಾಧ್ಯತೆಯ ಬಗ್ಗೆ ಕೇಳಿದಾಗ, “ಇಲ್ಲ, ನನ್ನ ಮಟ್ಟಿಗೆ ಅಲ್ಲ, ಎಂದು ಹೇಳಿದರು.