ಲಕ್ನೋ : ಒತ್ತೆ ಹಣಕ್ಕಾಗಿ ಉದ್ಯಮಿಯೋರ್ವರ ಆರು ವರ್ಷದ ಮಗನನ್ನು ಅಪಹರಿಸಿ ಕೊಂದು ಆತನ ಅಣ್ಣನನ್ನು ಗಂಭೀರವಾಗಿ ಗಾಯಗೊಳಿಸಿದ ಅಪಹರಣಕಾರರನ್ನು ಪೊಲೀಸರು ಗುಂಡಿನ ಕಾಳಗದಲ್ಲಿ ಮಣಿಸಿ ಸೆರೆ ಹಿಡಿದಿರುವ ಘಟನೆ ಉತ್ತರ ಪ್ರದೇಶದ ಸುಲ್ತಾನ್ ಪುರ ಜಿಲ್ಲೆಯಲ್ಲಿ ನಡೆದಿದೆ.
ಸುಲ್ತಾನ್‌ಪುರದ ಉದ್ಯಮಿ ರಾಕೇಶ್ ಅಗ್ರಹಾರಿ ಅವರ 6ರ ಹರೆಯದ ಪ್ರಿಯಾಂಶ್ ಮತ್ತು ಆತನ 8 ವರ್ಷದ ಸಹೋದರನನ್ನು, ಅವರು ಶಾಲೆಗೆ ಹೋಗುತ್ತಿದ್ದ ವೇಳೆ, ಸುಲ್ತಾನಪುರ ಜಿಲ್ಲೆಯ ಗೋಸಾಯಿಗಂಜ್ ಪ್ರದೇಶದ ಕಟ್ಕಾ ಬಜಾರ್‌ನಿಂದ ಅಪಹರಣಕಾರರು ಅಪಹರಿಸಿ 50 ಲಕ್ಷ ರೂ. ಒತ್ತೆ ಹಣದ ಬೇಡಿಕೆಯನ್ನು ಇಟ್ಟಿದ್ದರು.
ಎನ್‌ಕೌಂಟರ್ ನಡೆಸಿದ ಪೊಲೀಸರು ಉದ್ಯಮಿಯ ಹಿರಿಯ ಪುತ್ರ ದಿವ್ಯಾಂಶ್ ನನ್ನು ರಕ್ಷಿಸಿ ಒಡನೆಯೇ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ ಆಸ್ಪತ್ರೆಗೆ ದಾಖಲಿಸಿದರು. ಆತನ ಸ್ಥಿತಿ ಗಂಭೀರವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಉದ್ಯಮಿಯ ಕಿರಿಯ ಪುತ್ರ ಪ್ರಿಯಾಂಶ್ ನನ್ನು ಅಪಹರಣಕಾರರು ಪೊಲೀಸರು ಎನ್‌ಕೌಂಟರ್ ನಡೆಸಿ ತಮ್ಮನ್ನು ಸೆರೆ ಹಿಡಿಯುವ ಮೊದಲೇ ಕೊಂದಿದ್ದರು.
ಎನ್‌ಕೌಂಟರ್ ಅನುಸರಿಸಿ ಪೊಲೀಸರು ಈ ಅಪಹರಣದ ಮಾಸ್ಟರ್ ಮೈಂಡ್ ಸಹಿತ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ರಘುಬರ್, ಹರಿಓಂ, ಸೂರಜ್ ಮತ್ತು ಶಿವಪೂಜನ್ ಎಂದು ಗುರುತಿಸಲಾಗಿದೆ. ಈ ಪೈಕಿ ಶಿವಪೂಜನ್ ಗೆ ಕಾಲಿಗೆ ಗುಂಡೇಟು ತಗುಲಿದ್ದು ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.