Advertisement

ಕಲುಷಿತ ನೀರು ನದಿಗೆ ಬಿಟ್ರೆ ಕ್ರಮ: ಡಿಸಿ

09:51 AM Jun 19, 2019 | Team Udayavani |

ಬಾಗಲಕೋಟೆ: ನದಿಯ ಪಕ್ಕದ ಗ್ರಾಮ ಹಾಗೂ ಪಟ್ಟಣಗಳಿಂದ ಬರುವ ಕಲುಷಿತ ನೀರು ನದಿಗೆ ಸೇರದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಗ್ರಾಮ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದರು.

Advertisement

ನವನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಾಲಿನ್ಯ ನಿಯಂತ್ರಣ ಕುರಿತು ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.

ಕಲುಷಿತ ನೀರನ್ನು ನದಿಗೆ ಹರಿ ಬಿಡುವುದರಿಂದ ನೀರಿನ ಗುಣಮಟ್ಟ ತೀವ್ರವಾಗಿ ಕುಸಿಯುತ್ತದೆ. ಯಾವುದೇ ರೀತಿಯಲ್ಲಿ ಕಲುಷಿತ ನೀರು ನದಿಗೆ ಸೇರದಂತೆ ಕ್ರಮವಹಿಸಲು ಸಂಸ್ಕರಣಾ ಘಟಕ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.

ಕೃಷ್ಣಾ ನದಿಯ ಪಕ್ಕದ ಗ್ರಾಮಗಳಾದ ತಮದಡ್ಡಿ, ಹಳಿಂಗಳಿ, ಮದನಮಟ್ಟಿ ಹಾಗೂ ಆಸಂಗಿ ಗ್ರಾಮಗಳ ಕೊಳಚೆ ನೀರು ನದಿಗೆ ಹರಿಯದಂತೆ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಜಿಪಂ ಉಪ ಕಾರ್ಯದರ್ಶಿ ಎಸ್‌.ಎಸ್‌. ಹಿರೇಮಠ ಅವರಿಗೆ ಸೂಚಿಸಿದರು.

ಜಿಲ್ಲೆಯ ಗ್ರಾಮ ಮತ್ತು ನಗರ ಪ್ರದೇಶದಲ್ಲಿರುವ ಸಾಮೂಹಿಕ ಶೌಚಾಲಯಗಳ ಇರುವ ಸಂಖ್ಯೆ ಎಷ್ಟು, ಅದರಲ್ಲಿ ಬಳಕೆಯಾಗುತ್ತಿರುವ ಹಾಗೂ ಬಳಕೆಯಾಗದೇ ಇರುವ ಶೌಚಾಲಯಗಳ ಮಾಹಿತಿ ನೀಡುವಂತೆ ತಿಳಿಸಿದರು. ಅದರಲ್ಲಿ ಎಷ್ಟು ಸಾಮೂಹಿಕ ಶೌಚಾಲಯಗಳಿಗೆ ನೀರಿನ ವ್ಯವಸ್ಥೆ, ನಿರ್ವಹಣೆ ಕೈಗೊಂಡ ಮಾಹಿತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

Advertisement

ಮೊದಲು ನಗರ ಪ್ರದೇಶಗಳು ಮಾಲಿನ್ಯದಿಂದ ಮುಕ್ತಿಗೊಂಡು ಮಾದರಿ ನಗರಗಳಾಗಿ ಪರಿವರ್ತನೆಗೊಳ್ಳಬೇಕು. ಅದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿಯೂ ಸಹ ಮಾಲಿನ್ಯ ನಿಯಂತ್ರಿ ಸುವ ಕೆಲಸವಾಗಬೇಕು. ಸಭೆಯಲ್ಲಿ ಮಾಹಿತಿ ಇಲ್ಲದೇ ಆಗಮಿಸಿದ ತೇರದಾಳ ಪಟ್ಟಣ ಪಂಚಾಯತಿಯ ಅಧಿಕಾರಿಗಳನ್ನು ಸಭೆಯಿಂದ ಕಳುಹಿಸಲಾಯಿತು.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಹಾಗೂ ಎಲ್ಲೆಂದರಲ್ಲಿ ಕಸ ಹಾಕುತ್ತಿರುವವರ ಮೇಲೆ ದಂಡ ಹಾಕಲು ತಿಳಿಸಿದರು. ಶುಗರ್ ಫ್ಯಾಕ್ಟರಿಗಳಿಂದ ಬರುವ ಕಲುಷಿತ ನೀರು ನದಿಗೆ ಸೇರುತ್ತಿರುವ ಬಗ್ಗೆ ದೂರುಗಳು ಹಾಗೂ ಮರೆಗುದ್ದಿ ಗ್ರಾಮದಲ್ಲಿ ಶುಗರ್ ಫ್ಯಾಕ್ಟರಿಗಳಿಂದ ಮಾಲಿನ್ಯ ಆಗುತ್ತಿರುವ ಬಗ್ಗೆ ಪಿಸಿಬಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನೋಟಿಸ್‌ ನೀಡಲು ಸೂಚಿಸಿದರು.

ಇಟ್ಟಂಗಿ ಬಟ್ಟಿಗಳಿಂದ ಉಂಟಾಗುವ ಮಾಲಿನ್ಯ ಸಹ ತಡೆಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಮನಿಯಾರ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡ ಕ್ರಿಯಾ ಯೋಜನೆ ಬಗ್ಗೆ ವಿವರಿಸಿದರು.

ಜಿಪಂ ಉಪ ಕಾರ್ಯದರ್ಶಿ ಎಸ್‌.ಎಸ್‌. ಹಿರೇಮಠ, ನಗರಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ, ರಬಕವಿ-ಬನಹಟ್ಟಿ ನಗರಸಭೆಯ ಪೌರಾಯುಕ್ತ ಆರ್‌.ಎಂ. ಕೊಡಗಿ, ಎಸ್‌.ಎಸ್‌. ಹತ್ತಿ ಉಪಸ್ಥಿತರಿದ್ದರು.

ನಿರುಪಯುಕ್ತ ನೀರು ಶುದ್ಧ : ಕಾಲುವೆಗೆ ಬಳಕೆ

ರಬಕವಿ-ಬನಹಟ್ಟಿ ನಗರಸಭೆಯು ಮನೆ ಮತ್ತು ಶೌಚಾಲಯಗಳಿಂದ ನಿರೂಪಯುಕ್ತ ನೀರನ್ನು ಒಂದೆಡೆ ಸಂಗ್ರಹಿಸಿ ಶುದ್ದೀಕರಿಸುವ ಕಾರ್ಯ ಕೈಗೊಂಡಿದ್ದು, ಶುದ್ದೀಕರಿಸಿದ ಆ ನೀರನ್ನು ನಾಲೆಗಳಿಗೆ ಬಿಡಲಾಗುತ್ತಿದೆ. ಆ ನೀರು ಇತರೆ ಉದ್ದೇಶಗಳಿಗೆ ಹಾಗೂ ಜಮೀನುಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಶುದ್ದೀಕರಿಸಿದ ನೀರು ಬೇಕಾದಲ್ಲಿ ನೇರವಾಗಿ ಪೈಪ್‌ಲೈನ್‌ ಅಳವಡಿಸಿಕೊಂಡು ನೀರನ್ನು ಉಚಿತವಾಗಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಯುಐಡಿಎಫ್‌ಸಿಯ ಸಹಾಯಕ ಇಂಜಿನೀಯರ್‌ ಎಸ್‌.ಎಸ್‌.ಹತ್ತಿ (8277222159) ಅವರನ್ನು ಸಂಪರ್ಕಿಸಲು ಸಭೆಯಲ್ಲಿ ತಿಳಿಸಲಾಯಿತು.
Advertisement

Udayavani is now on Telegram. Click here to join our channel and stay updated with the latest news.

Next