Advertisement

ಕಬ್ಬಿನಿಂದ ಕಹಿ ಪಪ್ಪಾಯ ಆಯ್ತು ಸಿಹಿ !

07:24 PM Mar 31, 2019 | Sriram |

ಕಬ್ಬಿನ ಬೆಳೆಯಿಂದ ಸಿಹಿಯ ಅನುಭವಕ್ಕೆ ಬದಲು ಕಹಿಯೇ ಜೊತೆಯಾಯಿತು. ಕಬ್ಬಿನಿಂದ ಲಾಸ್‌ ಆಯಿತೆಂದು ರೈತ ಲಕ್ಷ್ಮಣ ಕಂಗಾಲಾಗಲಿಲ್ಲ. ಅದೇ ನೆಲದಲ್ಲಿ ಪಪ್ಪಾಯ ಸೇರಿದಂತೆ ಹಲವು ಬೆಳೆ ಬೆಳೆದು ಲಾಭ ಕಂಡರು…

Advertisement

ಉತ್ತಮ ಮಣ್ಣು, ಸಾಕಷ್ಟು ನೀರು, ಶ್ರದ್ಧೆಯಿಂದ ದುಡಿಯುವ ಮಾಡುವ ಉಮೇದು ಇದ್ದರೂ ಕಬ್ಬಿನ ಬೆಳೆಯಲ್ಲಿ ಸಿಹಿಗಿಂತ ಕಹಿ ಉಂಡವರೇ ಹೆಚ್ಚು. ಅದೇ ಕಬ್ಬಿನ ಗದ್ದೆಯಲ್ಲಿ ಇನ್ನಿತರ ಬೆಳೆ ತೆಗೆಯಲು ಪ್ರಯತ್ನಿಸಿ, ಕೃಷಿ ಕ್ಷೇತ್ರದಲ್ಲಿ ಉತ್ತಮ ಬದುಕು ಕಂಡುಕೊಂಡವರೂ ಹಲವರು! ಇಂಥವರಲ್ಲಿ ಮುಂಚೂಣಿಯಾಗಿ ಗುರುತಿಸಲ್ಪಡುವವರು ಗೋಕಾಕ ತಾಲೂಕಿನ ನಾಗನೂರು ಗ್ರಾಮದ ಲಕ್ಷ್ಮಣ ಈರಪ್ಪ ಸಕ್ರೆಪ್ಪಗೋಳ. 48 ವಯಸ್ಸು. ವಾಣಿಜ್ಯ ಪದವಿಧರ. ಇವರದು ಜಾನುವಾರು, ತೋಟಗಾರಿಕೆ ಆಧಾರಿತ ಕೃಷಿ. ಒಟ್ಟು ಹತ್ತು ದೇಸಿ ಆಕಳು, 2ಎತ್ತು, 4ಕರು ಹಾಗೂ 6ಆಡುಗಳ ಸಗಣಿ, ಗಂಜಲು, ಹಿಕ್ಕೆಯನ್ನು ಸಂಪೂರ್ಣ ಬಳಸಿ ಕೃಷಿ ಒಳಸುರಿಗಳ ವೆಚ್ಚಕ್ಕೆ ಕಡಿವಾಣ ಹಾಕುತ್ತ ಕೃಷಿಯಲ್ಲಿ ನೆಮ್ಮದಿ ಕಂಡುಕೊಂಡವರು. ಒಟ್ಟು 12 ಎಕರೆಯಲ್ಲಿ ವೈವಿಧ್ಯಮಯ ಕೃಷಿ ಬೆಳೆಗಳು. ಎಲ್ಲ ಬೆಳೆಗೆ ಹನಿ ನೀರಾವರಿಯ ಅನುಕೂಲ. ಕಬ್ಬು, ಅರಿಶಿಣ, ಬಾಳೆ, ತರಕಾರಿ, ಗೋದಿ ಹಾಗೂ ಸದಕ ಮುಖ್ಯ ಬೆಳೆಗಳು. ಪುದಿನಾ, ಪಪ್ಪಾಯ ಇತ್ತೀಚಿನ ಸೇರ್ಪಡೆಗಳು.

ಕಬ್ಬಿನೊಂದಿಗೆ ಕೃಷಿ ಬೆಳೆಗಳ ಜುಗಲ್‌ಬಂದಿ 5 ಎಕರೆ ಯಲ್ಲಿ ಬೆಳೆದಿದ್ದು 86032 ತಳಿಯ ಕಬ್ಬು. ನಾಲ್ಕು ಎಕರೆ ಕಟಾವಾಗಿದ್ದು ಸರಾಸರಿ ಎಕರೆಗೆ 62ಟನ್‌ ಇಳುವರಿ. ಈಗಿರುವ ಕೂಳೆಯಲ್ಲಿ ನಾಲ್ಕು ಅಡಿ ಸಾಲಿನಲ್ಲಿ 2ಸಾಲು ಗೋವಿನಜೋಳ ಹಾಗೂ 2ಸಾಲು ಕಡಲೆ ಇದೆ. ಒಂದು ಎಕರೆಯಲ್ಲಿ 10ಅಡಿ ಸಾಲಿನ ಅಂತರದ್ದು, ಜೋಡಿಸಾಲು ಪದ್ಧತಿಯಲ್ಲಿ ಕಬ್ಬು ನಾಟಿ ಮಾಡಿದ್ದಾರೆ. ಜೋಡಿಸಾಲು ನಡುವೆ ಕಡಲೆ, ಸದಕ ಹಾಗೂ ಗೋದಿ ಇದ್ದು, ಕಬ್ಬಿನ ಸಾಲಿನಲ್ಲಿ ಗೋನಜೋಳ, ಉಳ್ಳಾಗಡ್ಡಿ ಬೆಳೆ ಇದೆ. ಮುಂಗಾರಿಯಲ್ಲಿ ಪಾಲಕ, ಮೆಂತೆ, ರಾಜಗಿರಿ, ಹರಿವೆ, ಕೊತ್ತಂಬರಿ, ಬದನೆ, ಬೆಂಡೆಯಂಥ ತರಕಾರಿಗಳು ಇಲ್ಲಿ ಸ್ಥಳ ಪಡೆದಿದ್ದವು. ಇದು ಪ್ರತಿ ಮುಂಗಾರು ಹಂಗಾಮಿನಲ್ಲಿ ಪುನರಾವರ್ತಿತ ಕ್ರಿಯೆ. ಸಾಲುಗಳ ಅಂತರ ಹೆಚ್ಚು ಮಾಡಿ ಅಂತರಬೆಳೆ ಮಾಡಿದರೆ, ಕೀಟ/ರೋಗ ನಿರ್ವಹಣೆ ಸುಲಭ. ಕೈಯಲ್ಲೂ ಕಾಸು, ಫ‌ಸಲು ಹುಲುಸು.

ಪುದಿನಾ, ಪೇರಲ ಸಾಂಗತ್ಯ
10*10ಅಡಿ ಅಂತರದಲ್ಲಿ ಒಂದು ಎಕರೆಯಲ್ಲಿ ಸರದಾರ ತಳಿ ಪೇರಲವನ್ನು ಕಳೆದ ಫೆಬ್ರವರಿ ತಿಂಗಳಿನಲ್ಲಿ ನಾಟಿ ಮಾಡಿದರು. ಈಗ, ಪೇರಲ ಹೂವು ಕಚ್ಚಿ ಕಾಯಿ ಹಿಡಿಯುವ ಹಂತದಲ್ಲಿದೆ. ಮಧ್ಯದಲ್ಲಿ ಪುದಿನಾ ಸಾಗುವಳಿ. 10ರಿಂದ12ಕಡ್ಡಿ ಹೊಂದಿರುವ ಒಂದು ಸಿವುಡಿಗೆ 2ರೂ.ದರ. ಬೇರಿನ ಮೇಲ್ಭಾಗ ಕಾಂಡ ಕೊಯ್ಲು ಮಾಡಿ ಸಿವುಡು (ಕಟ್ಟು) ಕಟ್ಟುತ್ತಾರೆ. ದಿನ ಬಿಟ್ಟು ದಿನ ಕೊಯ್ಲು ಮುಂದುವರೆಯುತ್ತದೆ. ಬೆಂಗಳೂರು, ಬೆಳಗಾವಿ, ಗೋವಾಗಳಿಗೆ ರಾತ್ರಿ ಬಸ್‌ಗೆ ಹಾಕುತ್ತಾರೆ. ಪ್ರತಿದಿನ 1500ರಿಂದ‌ 2ಸಾವಿರ ಸಿವುಡು ಮಾರುಕಟ್ಟೆಗೆ ರವಾನೆಯಾಗುತ್ತವೆ. ಪುದಿನಾ ಕಡ್ಡಿ ಕಿತ್ತು ಸಿವುಡು ಕಟ್ಟಲು ಪ್ರತಿದಿನ ನಾಲ್ಕು ಆಳು ಕಾರ್ಯನಿರ್ವಸುತ್ತಾರೆ. 100ಸಿವುಡು ಕಟ್ಟಲು 40ರೂ.ಕೂಲಿ. ದಿನ ಒಂದಕ್ಕೆ ಒಬ್ಬರು ಸರಾಸರಿ500 ರಿಂದ 600 ಸಿವುಡು ಕಟ್ಟುತ್ತಾರೆ.

ಪುದಿನಾ/ಪೇರಲಕ್ಕೆ ರಸಾವರಿ
ವಾರಕ್ಕೊಮ್ಮೆ ಜೀವಸಾರ ಪೂರೈಸಿದರೆ, ಘನ ಜೀವಾಮೃತವನ್ನು ತಿಂಗಳಿಗೊಮ್ಮೆ ಹಾಕುತ್ತಾರೆ. ಹನಿ ನೀರಿನೊಂದಿಗೆ, ಗೋಮೂತ್ರ ಹಾಗೂ ಜೀವಸಾರವನ್ನು ದ್ರವ ಬೆಳೆಗೆ ಪೂರೈಸುತ್ತಾರೆ. ಕಟಾವು ಆದ 25ರಿಂದ 30ದಿನಗಳಿಗೆ ಮತ್ತೆ ಚಿಗುರೊಡೆಯುತ್ತದೆ ಪುದಿನಾ. ಪ್ರತಿ ದಿನ ಕಟಾವು ಸಾಧ್ಯವಾಗುವಂತೆ ವಿನ್ಯಾಸಗೊಳಿಸಿ ಸಾಗುವಳಿ ಮಾಡಿದ್ದಾರೆ ಲಕ್ಷ್ಮಣ.

Advertisement

ರೆಡ್‌ ಲೇಡಿ ತಳಿ. 8*5ಅಡಿ ಅಂತರದಲ್ಲಿ 1100 ಸಸಿಗಳನ್ನು ಸೆಪ್ಟೆಂಬರ್‌ ತಿಂಗಳಿನಲ್ಲಿ ನಾಟಿ ಮಾಡಿದ್ದಾರೆ. ಹುಬ್ಬಳ್ಳಿ ಮೂಲದ ಕಂಪನಿಯೊಂದು ಕೆ.ಜಿಗೆ 10ರೂ.ನಂತೆ ಖರೀದಿಸುವ ಒಡಂಬಡಿಕೆ ಮಾಡಿಕೊಂಡಿದೆ. ಪ್ರತಿ ಗಿಡ 50ಕ್ಕೂ ಹೆಚ್ಚು ಫ‌ಲ ಹಿಡಿದಿದ್ದು, ಕಾಯಿ ಸರಾಸರಿ 2ರಿಂದ 3 ಕೆ.ಜಿ ತೂಕ ಹೊಂದಿವೆ. ನಾಟಿ ಪೂರ್ವ ಹಸಿರೆಲೆ ಗೊಬ್ಬರ, ಘನ ಜೀವಾಮೃತವನ್ನು ಮಣ್ಣಿಗೆ ಸೇರಿಸಿದ್ದಾರೆ. 15ದಿನಕ್ಕೊಮ್ಮೆ ಜೀವಸಾರ ಉಣಿಸುತ್ತಾರೆ. ತಿಂಗಳಿಗೆ ಪ್ರತಿ ಗಿಡಕ್ಕೆ ಅರ್ಧ ಕೆ.ಜಿಯಷ್ಟು ಘನ ಜೀವಾಮೃತ ನೀಡುತ್ತಾರೆ. ಪಪ್ಪಾಯ ನಾಟಿ ಪೂರ್ವ ಇದ್ದ ಚಂಡುಹೂವಿನ ಬೆಳೆಯ ತಪ್ಪಲು ಉತ್ಕೃಷ್ಟ ಗೊಬ್ಬರವಾಗಿ ಪಪ್ಪಾಯದ ಬೆಳವಣಿಗೆಗೆ ಸಹಕಾರಿಯಾಗಿದೆ. ಬೇವು, ಗ್ಲಿರಿಸಿಡಿಯಾ ಕಷಾಯ ಸಿಂಪರಣೆ ಮೂಲಕ ಮುಟುರು ರೋಗ ನಿರ್ವಹಣೆ ಮಾಡಿದ್ದಾರೆ. ಪ್ರಸ್ತುತ 10ಟನ್‌ ಕಟಾವು ಆಗಿದ್ದು, ಕೊಯ್ಲು ಮುಂದುವರೆದಿದೆ. ಪ್ರತಿ ಗಿಡ‌ಕ್ಕೆ ಕನಿಷ್ಠ 50ಕಾಯಿ, 2ಕೆಜಿ ತೂಕ, 10ರೂ ದರದಲ್ಲಿ ಒಂದು ಸಾವಿರ ಗಿಡಕ್ಕೆ ಸರಾಸರಿ 10ಲಕ್ಷ ನಿವ್ವಳ ಆದಾಯ ನಿರೀಕ್ಷೆ ಇವರದು.

ಒಂದು ಎಕರೆಯಲ್ಲಿ 10*5ಅಡಿ ಅಂತರದಲ್ಲಿ ಜಿ-9 ಬಾಳೆ ಹಾಗೂ 10*10ಅಡಿ ಅಂತರದಲ್ಲಿ 80ಜವಾರಿ ಬಾಳೆ ನೆಟ್ಟಿದ್ದಾರೆ. 5ಗುಂಟೆ ಅರಿಶಿಣದಲ್ಲಿ 25ಕೆಜಿ ಉದ್ದು, ಹೆಸರು ಕಟಾವು ಆಗಿದ್ದು, 5ಗುಂಟೆಯಲ್ಲಿ ಉಳ್ಳಾಗಡ್ಡಿ, ಬೆಳ್ಳುಳ್ಳಿ, ಬದನೆ ಹಾಗೂ ಇತರ ಮನೆ ಬಳಕೆಗೆ ಬೇಕಾದ ತರಕಾರಿ ಬೆಳೆದುಕೊಂಡಿದ್ದಾರೆ. ಜಾನುವಾರುಗಳಿಗೆ ಅರ್ಧ ಎಕರೆ ಮೇನಜೋಳ, 20ಗುಂಟೆ ನೇಪಿಯರ್‌ ಹುಲ್ಲು ಬೆಳೆದಿದ್ದಾರೆ.

ಸೌರಶಕ್ತಿ ಅಳವಡಿಕೆ
ಕಣ್ಣು ಮುಚ್ಚಾಲೆ ಆಡುವ ವಿದ್ಯುತ್‌, ಬೆಳೆಗಳಿಗೆ ನೀರು ಹಾಯಿಸುವ ಸಮಯಕ್ಕೆ ಕೈಕೊಡುವುದೇ ಹೆಚ್ಚು. ಅದರಲ್ಲೂ ಬೇಸಿಗೆ ಕಾಲಕ್ಕೆ ವಿದ್ಯುತ್‌ ಅಭಾವ ಹೆಚ್ಚು. ಈ ತೊಂದರೆ ನೀಗುವ ದಿಶೆಯಲ್ಲಿ 4.70ಲಕ್ಷ ಬಂಡವಾÙ ತೊಡಗಿಸಿ, ಸೌರಶಕ್ತಿ ಚಾಲಿತ ಮೋಟಾರ್‌ ಪಂಪಸೆಟ್‌ ಅಳವಡಿಸಿಕೊಂಡಿದ್ದಾರೆ. ಮೂರು ಇಂಚು ನೀರು ಇರುವ ಕೊಳವೆ ಬಾವಿಗೆ ಇದು ಜೋಡಿಸಲ್ಪಟ್ಟಿದೆ. ನಬಾರ್ಡ್‌ ಸಂಸ್ಥೆಯಿಂದ 2.0ಲಕ್ಷ ಸಬ್ಸಿಡಿ ಸಿಕ್ಕಿದೆ. ಇದರಿಂದ 5ರಿಂದ 6ಗಂಟೆ ನೀರು ಹರಿಸಲು ಅನುಕೂಲವಾಗಿದೆ ಎನ್ನುತ್ತಾರೆ ಲಕ್ಷ್ಮಣ. 10ಸೋಲಾರ್‌ ಪ್ಲೇಟ್‌ ಸಾಮರ್ಥ್ಯದ ಎರಡು ಪ್ಯಾನಲ್‌ಗ‌ಳ ಮೂಲಕ ಸೂರ್ಯರಶ್ಮಿ ಸೌರಶಕ್ತಿಯಾಗಿ ಪರಿವರ್ತನೆಗೊಂಡು, 5ಎಚ್‌.ಪಿ.ಮೋಟಾರ್‌ ಚಾಲನೆಗೆ ವಿದ್ಯುತ್‌ ಒದಗಿಸುತ್ತದೆ. ಹೇರಳವಾಗಿ ಸಿಗುವ ಸೂರ್ಯರಶ್ಮಿಯ ಸಮರ್ಥ ಬಳಕೆಯಾಗುತ್ತಿದೆ ಇಲ್ಲಿ. ಸಮಗ್ರ ಕೃಷಿ ಅಳವಡಿಸಿ, ಸಾಲ ಸೋಲಕ್ಕೆ ಕೈ ಒಡ್ಡದೆ ಮುನ್ನಡಿ ಇಟ್ಟರೆ ಕೃಷಿ ಗೆಲುವು ಖಂಡಿತ ಎನ್ನುವ ನಿಲುವು ಇವರದು.

ಮಾಹಿತಿಗೆ- 84969 77769
– ಶೈಲಜಾ ಬೆಳ್ಳಂಕಿಮಠ

Advertisement

Udayavani is now on Telegram. Click here to join our channel and stay updated with the latest news.

Next