Advertisement

1962ರ ಯುದ್ಧದ ಕಹಿ ನೆನಪುಗಳು

01:20 PM Aug 01, 2017 | |

ಭಾರತದ ಹೀನಾಯ ಸೋಲಿನ ಬಳಿಕ ಭಾರತೀಯ ಸೇನೆಯ ಅಧಿಕಾರಿಗಳಾಗಿದ್ದ ಲೆ|ಜ| ಹೆಂಡರ್ಸನ್‌ ಬ್ರೂಕ್ಸ್‌ ಮತ್ತು ಬ್ರಿ| ಪಿ. ಎಸ್‌. ಭಗತ್‌ ಅವರನ್ನೊಳಗೊಂಡ ನಿಯೋಗವನ್ನು ರಚಿಸಿ ಈ ಯುದ್ಧದಲ್ಲಿ ಭಾರತದ ಸೋಲಿಗೆ ಕಾರಣಗಳನ್ನು ಪರಿಶೀಲಿಸಿ ವರದಿ ಒಪ್ಪಿಸುವ ಜವಾಬ್ದಾರಿ ಒಪ್ಪಿಸಲಾಗಿತ್ತು. 1963ರಲ್ಲಿ ಈ ನಿಯೋಗ ಸ‌ರಕಾರಕ್ಕೆ ಒಪ್ಪಿಸಿದ ವರದಿಯಲ್ಲಿ ನೆಹರೂ, ಕೃಷ್ಣ ಮೆನನ್‌ ಹಾಗೂ ಸೇನಾ ಮುಖ್ಯಸ್ಥರು ಮತ್ತು ಗುಪ್ತಚರ ವಿಭಾಗದ ನಿರ್ದೇಶಕರಾಗಿದ್ದ ಬಿ. ಎನ್‌. ಮಲ್ಲಿಕ್‌ ಇವರ ಅಚಾತುರ್ಯಗಳ ಕುರಿತು ಉಲ್ಲೇಖೀಸಿದ್ದರು. 

Advertisement

ಭಾರತ ಮತ್ತು ಚೀನದ ನಡುವೆ ಕಳೆದ ಐದು ವಾರಗಳಿಂದ ನಡೆಯುತ್ತಿರುವ ಬಿಕ್ಕಟ್ಟು ಪರಿಹಾರವಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಜೂನ್‌ ಮೊದಲನೆ ವಾರದಲ್ಲಿ ಸಿಕ್ಕಿಂ ಗಡಿ ವಲಯದ ಡೋಕಲಾಂದಲ್ಲಿ ಚೀನ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲು ಪ್ರಾರಂಭಿಸಿದಾಗ ಭಾರತ ಸೇನೆ ಅದಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ಗಡಿ ವಿವಾದ ತಲೆದೋರಿದ್ದು, ಎರಡೂ ರಾಷ್ಟ್ರಗಳು ಗಡಿಯಲ್ಲಿ ಸೇನೆಯನ್ನು ನಿಯೋಜಿಸಿದ್ದು ಆತಂಕಕ್ಕೆ ಎಡೆ ಮಾಡಿದೆ. 

ಈ ನಡುವೆ ಚೀನದ ಪತ್ರಿಕೆಗಳು ಮಾತ್ರ ಭಾರತವನ್ನು ಗುರಿಯಾಗಿಟ್ಟುಕೊಂಡು ಟೀಕಾ ಪ್ರಹಾರ ಮುಂದುವರಿಸಿವೆ. ಈ ಬಾರಿ ಭಾರತವು ಚೀನವನ್ನು ಕೆದಕುವ ದುಸ್ಸಾಹಸಕ್ಕೆ ಕೈ ಹಾಕಿದಲ್ಲಿ 1962ರಂಥದ್ದೇ ಅಥವಾ ಅದಕ್ಕಿಂತಲೂ ಹೀನಾಯವಾದ ಸೋಲು ಎದುರಿಸಬೇಕಾಬಹುದು ಎನ್ನುತ್ತಾ ಗಾಯದ ಮೇಲೆ ಬರೆ ಎಳೆದಿವೆ. 

ವಿಪರ್ಯಾಸವೆಂದರೆ 55 ವರ್ಷಗಳ ಅನಂತರವೂ ಭಾರತದ ಮಟ್ಟಿಗೆ ಈ ಗಾಯ ಮಾಸಿಲ್ಲ. ಆದ್ದರಿಂದಲೇ ಪ್ರತಿ ಬಾರಿ ಭಾರತ ಚೀನ ಗಡಿ ವಿವಾದ ಎದುರಾದಾಗ ಪದೇ ಪದೇ ಈ ಗಾಯಕ್ಕೆ ಬರೆ ಎಳೆಯುವ ಕೆಲಸ ನಡೆಯುತ್ತಲೇ ಇದೆ. ಈ ಕಾರಣದಿಂದಲೇ 1962ರಲ್ಲಿ ಭಾರತ ಚೀನದ ವಿರುದ್ಧ ಅನುಭವಿಸಿದ ಅವಮಾನಕರ ಸೋಲಿನ ಕುರಿತು ಈಗ ಭಾರತೀಯರಲ್ಲಿ ಭಾರೀ ಆಸಕ್ತಿ ಉಂಟಾಗಿದೆ. 1962ರಲ್ಲಿ ಯುದ್ಧ ನಡೆಯಲು ಕಾರಣಗಳು, ಇದಕ್ಕೆ ಯಾರು ಹೊಣೆ ಅಥವಾ ಯಾರು ಪ್ರಚೋದನೆ ನೀಡಿದರು, ಈ ಯುದ್ಧವನ್ನು ತಡೆಗಟ್ಟಬಹುದಿತ್ತೇ ಈ ಕುರಿತು ಎಲ್ಲರಲ್ಲೂ ಈಗ ಬಹಳಷ್ಟು ಕುತೂಹಲ. ಎಲ್ಲಕ್ಕಿಂತ ಮಿಗಿಲಾಗಿ ಆಗ ರಾಜಕೀಯ ಮುತ್ಸದ್ದಿ ಎಂದೇ ಖ್ಯಾತರಾಗಿದ್ದ ಪ್ರಧಾನಿ ಜವಾಹರಲಾಲ್‌ ನೆಹರೂ ಮತ್ತು ಭಾರತದ ರಕ್ಷಣಾ ಸಚಿವರಾಗಿದ್ದ ವಿ. ಕೆ. ಕೃಷ್ಣ ಮೆನನ್‌ ಅವರ ಅಸಮರ್ಥತೆ, ರಾಜಕೀಯ ಅಪಕ್ವತೆ, ಸಂಕುಚಿತ ಮನೋಭಾವ ಮತ್ತು ಅಹಂನಿಂದ ಕೂಡಿದ ಪ್ರತಿಕ್ರಿಯೆ ಭಾರತದ ಸೋಲಿಗೆ ಪ್ರಮುಖ ಕಾರಣ ಎಂಬುದು ಈಗ ಜಗಜ್ಜಾಹೀರು. 

ಈ ಕುರಿತ ಎಲ್ಲ ಮಾಹಿತಿಯನ್ನು ಮುಚ್ಚಿ ಹಾಕುವ ಪ್ರಯತ್ನಗಳು ಇತ್ತೀಚಿನವ‌ರೆಗೆ ನಡೆದಿದ್ದರ ಪರಿಣಾಮ ಈ ಸೋಲಿನ ಕುರಿತು ಭಾರತದಲ್ಲಿ ಸಾಕಷ್ಟು ಮಾಹಿತಿ ಲಭ್ಯವಿರಲಿಲ್ಲ. ಭಾರತದ ಹೀನಾಯ ಸೋಲಿನ ಬಳಿಕ ಭಾರತೀಯ ಸೇನೆಯ ಅಧಿಕಾರಿಗಳಾಗಿದ್ದ ಲೆ|ಜ| ಹೆಂಡರ್ಸನ್‌ ಬ್ರೂಕ್ಸ್‌ ಮತ್ತು ಬ್ರಿ| ಪಿ. ಎಸ್‌. ಭಗತ್‌ ಅವರನ್ನೊಳಗೊಂಡ ನಿಯೋಗವನ್ನು ರಚಿಸಿ ಈ ಯುದ್ಧದಲ್ಲಿ ಭಾರತದ ಸೋಲಿಗೆ ಕಾರಣಗಳನ್ನು ಪರಿಶೀಲಿಸಿ ವರದಿ ಒಪ್ಪಿಸುವ ಜವಾಬ್ದಾರಿ ಒಪ್ಪಿಸಲಾಗಿತ್ತು. 1963ರಲ್ಲಿ ಈ ನಿಯೋಗ ಸ‌ರಕಾರಕ್ಕೆ ಒಪ್ಪಿಸಿದ ವರದಿಯಲ್ಲಿ ಆಗ ಪ್ರಧಾನಿಯಾಗಿದ್ದ ನೆಹರೂ, ರಕ್ಷಣಾ ಸಚಿವರಾಗಿದ್ದ ಕೃಷ್ಣ ಮೆನನ್‌ ಹಾಗೂ ಸೇನಾ ಮುಖ್ಯಸ್ಥರು ಮತ್ತು ಗುಪ್ತಚರ ವಿಭಾಗದ ನಿರ್ದೇಶಕರಾಗಿದ್ದ ಬಿ. ಎನ್‌. ಮಲ್ಲಿಕ್‌ ಇವರ ಅಚಾತುರ್ಯಗಳ ಕುರಿತು ಉಲ್ಲೇಖೀಸಿದ್ದರು. ಮಾತ್ರವಲ್ಲ, ಈ ಒಟ್ಟು ವೈಫ‌ಲ್ಯವೇ ಭಾರತದ ಅವಮಾನಕರ ಸೋಲಿಗೆ ಕಾರಣ ಎಂದು ನಿರ್ದಾಕ್ಷಿಣ್ಯವಾಗಿ ಹೇಳಲಾಗಿತ್ತು ಎಂಬುದಾಗಿ ದಿಲ್ಲಿಯಲ್ಲಿ “ದ ಟೈಮ್ಸ್‌’ ಪತ್ರಿಕೆಯ  ವರದಿಗಾರರಾಗಿದ್ದ ನೆವಿಲ್‌ ಮ್ಯಾಕ್ಸ್‌ವೆಲ್‌ 2014ರಲ್ಲಿ ಈ ವರದಿಯ ಒಂದು ಭಾಗವನ್ನು ಪ್ರಕಟಿಸಿದಾಗ ಮಾಹಿತಿ ಸಾರ್ವಜನಿಕವಾಯ್ತು. 

Advertisement

ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರಕಾರಕ್ಕೆ ವರದಿ ಬಹಿರಂಗ ಮಾಡುವಂತೆ ಒತ್ತಾಯಿಸಿದ್ದರೂ ತಾನು ಅಧಿಕಾರಕ್ಕೆ ಬಂದ ಅನಂತರ ಈ ವರದಿಯನ್ನು ಬಹಿರಂಗಗೊಳಿಸುವ ಗೋಜಿಗೆ ಹೋಗಿಲ್ಲ. ಈಗಲೂ ಈ ವರದಿ ರಹಸ್ಯವರ್ಗದ ಮಾಹಿತಿಯಾಗಿಯೇ ಉಳಿದಿದೆಯಾದರೂ ವರದಿಯ ಪ್ರಮುಖ ಅಂಶಗಳು ಸಾರ್ವಜನಿಕ ವಲಯಗಳಲ್ಲಿ ಲಭ್ಯ. 

ಜವಾಹರ್‌ಲಾಲ್‌ ನೆಹರೂ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಒಪ್ಪಿಸಿದ್ದು ಕ್ಷಮಿಸಲಾರದಂಥ ಪ್ರಮಾದವಾದರೆ, 1962 ಭಾರತ -ಚೀನ ಯುದ್ಧದಲ್ಲಿ ಭಾರತ ಅನುಭವಿಸಿದ ಹೀನಾಯ ಸೋಲು ರಾಷ್ಟ್ರೀಯ ಕಳಂಕ ಎಂದೇ ಹೇಳಬಹುದು. ಈಗ ಈ ಎರಡೂ ಸಮಸ್ಯೆಗಳು ನಮ್ಮನ್ನು ದೈತ್ಯಾಕಾರವಾಗಿ ಕಾಡುತ್ತಿವೆ. ನೆಹರೂ ಅವರಂತಹ ರಾಜಕೀಯ ಮುತ್ಸದ್ದಿ ಇಂತಹ ಪ್ರಮಾದ ಮಾಡಿದರೆ ಅವರ ಮರಿಮೊಮ್ಮಗ ರಾಹುಲ್‌ ಗಾಂಧಿ ಈಗ ಭಾರತ-ಚೀನದ ನಡುವಿನ ಪ್ರಕ್ಷುಬ್ಧ ವಾತಾವರಣದ ಹೊರತಾಗಿಯೂ ಚೀನದ ರಾಯಭಾರಿಯನ್ನು ಕದ್ದು ಮುಚ್ಚಿ ಭೇಟಿಯಾಗಿದ್ದಾರೆ! 

ಹೆಂಡರ್ಸನ್‌ ವರದಿಯಲ್ಲಿ ಭಾರತದ ಜನತೆ ನಂಬಿಕೆ ಇಟ್ಟ ರಾಜಕೀಯ ನಾಯಕರ ವೈಫ‌ಲ್ಯ ಚೀನ ಯದ್ಧದಲ್ಲಿ ಸೋಲಿಗೆ ಕಾರಣವಾಯ್ತು ಎಂಬುದು ಸ್ಪಷ್ಟವಾಗಿ ದಾಖಲಾಗಿದೆ. ಕೊನೆಯವರೆಗೂ ನೆಹರೂ ಮತ್ತು ಕೃಷ್ಣ ಮೆನನ್‌ ಚೀನವು ಭಾರತದ ಮೇಲೆ ದಾಳಿ ಮಾಡುವುದಿಲ್ಲ ಎಂದೇ ನಂಬಿದ್ದರು ಮತ್ತು ಅದನ್ನು ನಂಬಿ ಯುದ್ಧವನ್ನು ಎದುರಿಸುವ ಯಾವುದೇ ತಯಾರಿ ಮಾಡಿರಲಿಲ್ಲ. ಕೊನೆಗೆ ವಸ್ತುಸ್ಥಿತಿ ಎದುರಾದಾಗ ಯಾವುದೇ ಪೂರ್ವಸಿದ್ಧತೆ ಮಾಡದೆ ಏಕಾಏಕಿ ಯುದ್ಧಕ್ಕೆ ಇಳಿಯುವಂತಹ ಪರಿಸ್ಥಿತಿ ಬಂತು. ಭಾರತ ಇಂತಹ ಸಂಭವನೀಯ ಪರಿಸ್ಥಿತಿ ಎದುರಿಸುವ ಸಮಯದಲ್ಲಿ ದೇಶದ ಪ್ರಧಾನ ಮಂತ್ರಿ ಮತ್ತು ರಕ್ಷಣಾ ಮಂತ್ರಿಗಳು ವಿಶ್ವ ಪರ್ಯಟನೆಯಲ್ಲಿ ನಿರತರಾಗಿದ್ದರು! 

ಸೇನೆಯ ಬಗ್ಗೆ ಸಂಶಯ 
ಭಾರತಕ್ಕೆ ರಕ್ಷಣಾ ನೀತಿಯೇ ಬೇಡ, ಸೇನೆಯ ಅಗತ್ಯ ಇಲ್ಲ ಎಂದು ಹೇಳಿದ ನೆಹರೂ ಸೇನೆಯನ್ನು ತೊಡೆದು ಹಾಕಬೇಕು ಎಂಬ ಮಾತನ್ನಾಡಿದ್ದರು ಎಂಬುದನ್ನು 1962ರ ಚೀನ-ಭಾರತ ಯುದ್ಧ ಕುರಿತು ಶಿವ ಕುನಲ್‌ ಅವರು ಅಧ್ಯಯನ ಮಾಡಿ ಬರೆದ ಪುಸ್ತಕದಲ್ಲಿ ಹೇಳಿದ್ದಾರೆ. ಕೇವಲ ಪೊಲೀಸ್‌ ಪಡೆ ಇದ್ದರೆ ಸಾಕು, ನಾವು ಅಹಿಂಸಾ ವಾದದಲ್ಲಿ ನಂಬಿಕೆ ಇರುವವರು, ನಮಗೆ ಯಾರೂ ವೈರಿಗಳಿಲ್ಲ ಎಂದು ಮುಕ್ತವಾಗಿ ಹೇಳಿಕೊಂಡಿದ್ದರು ನೆಹರೂ. ಅಷ್ಟೇ ಅಲ್ಲ, ಭಾರತ -ಚೀನ ಗಡಿ ಸಮಸ್ಯೆ ನಡುವೆಯೇ ಸೇನಾ ಮುಖ್ಯಸ್ಥರಾಗಿದ್ದ ಜ| ತಿಮ್ಮಯ್ಯ ಅವರು ತನಗೆ ಪ್ರತಿಸ್ಪರ್ಧಿಯಾಗಬಹುದು ಎಂಬ ಸಂಶಯದ ಆಧಾರದಲ್ಲಿ ನೆಹರೂ ಮತ್ತು ರ‌ಕ್ಷಣಾ ಮಂತ್ರಿ ಕೃಷ್ಣ ಮೆನನ್‌ ಸೇರಿ ತಿಮ್ಮಯ್ಯ ಅವರು ರಾಜೀನಾಮೆ ನೀಡುವಂತೆ ಮಾಡಿದ್ದರು. ಸೇನಾ ಮುಖ್ಯಸ್ಥರಾಗಿ ನೇಮಕಗೊಂಡ 20 ದಿನಗಳ ಮೊದಲು ಕೃಷ್ಣ ಮೆನನ್‌ ಅವರನ್ನು ನೆಹರೂ ರಕ್ಷಣಾ ಸಚಿವರಾಗಿ ನೇಮಕ ಮಾಡಿದ್ದರು. ಆದರೆ ಮೆನನ್‌ ಅವರು ತಿಮ್ಮಯ್ಯ ಅವರಿಗೆ ಒಬ್ಬ ಸೇನಾ ಮುಖ್ಯಸ್ಥರಿಗೆ ಕೊಡಬೇಕಾದ ಗೌರವ ಕೊಟ್ಟಿರಲಿಲ್ಲ ಎಂಬುದು ಕೂಡ ತಿಮ್ಮಯ್ಯ ಅವರ ರಾಜೀನಾಮೆಗೆ ಕಾರಣವಾಗಿತ್ತು.

ತಿಮ್ಮಯ್ಯ ಅವರು ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಮಾಡುವಲ್ಲಿ ನೆಹರೂ ಯಶಸ್ವಿಯಾದರೂ ಅದು ಕೇವಲ ತೋರಿಕೆ ಮಾತ್ರ. ತಮ್ಮ ಕುರ್ಚಿಯನ್ನು ಭದ್ರವಾಗಿಸುವ ಉದ್ದೇಶವಿದ್ದ ನೆಹರೂ-ಮೆನನ್‌ ಸೇರಿ ತಿಮ್ಮಯ್ಯ ಅವರ ರಾಜೀನಾಮೆ ಪತ್ರವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದರು. ಆದರೆ ರಾಜೀನಾಮೆ ಹಿಂತೆಗೆದ ವಿಷಯವನ್ನು ಬಚ್ಚಿಟ್ಟರು. ಇದೇ ವೇಳೆ ನೆಹರೂ ಅವರು ಪಾರ್ಲಿಮೆಂಟ್‌ನಲ್ಲಿ ಹೇಳಿಕೆ ನೀಡಿ ಸೇನಾ ಮುಖ್ಯಸ್ಥರಾದ ತಿಮ್ಮಯ್ಯ ಅವರು ಕಾರಣವಿಲ್ಲದೇ ಯುದ್ಧದ ಭೀತಿ ಹುಟ್ಟಿಸಿದ್ದಾರೆ ಎಂದು ತಿಳಿಸಿದ್ದೇ ಅಲ್ಲದೆ, ತಿಮ್ಮಯ್ಯ ಅವರು ಕ್ಷುಲ್ಲಕ ಕಾರಣಗಳಿಗೆ ರಾಜೀನಾಮೆ ನೀಡಿದ್ದರು ಎಂದು ಹೀಯಾಳಿಸಿದರು.

ಒಬ್ಬ ನಿಷ್ಠಾವಂತ ಮತ್ತು ಶಿಸ್ತುಬದ್ಧ ಸೇನಾ ಮುಖ್ಯಸ್ಥರಾಗಿದ್ದ ಜ| ತಿಮ್ಮಯ್ಯ ಈ ವಿದ್ಯಮಾನಗಳಿಂದ ಬೇಸತ್ತು ಅವಮಾನವನ್ನು ಸಹಿಸಿಕೊಂಡೇ ಭಾರತ ಸೈನ್ಯವನ್ನು ಯುದ್ಧಕ್ಕೆ ಸಿದ್ಧಗೊಳಿಸಿದ್ದರು ಎಂಬುದು ಈಗ ಬಹಿರಂಗವಾಗಿದೆ. 

ಕೌಲ್‌ ನೇಮಕಾತಿ ಮತ್ತೂಂದು ಪ್ರಮಾದ
ಜ| ತೊರಾಟ್‌ ಅವರನ್ನು ಮುಖ್ಯಸ್ಥರನ್ನಾಗಿ ಮಾಡಬೇಕು ಎಂದು ಜ| ತಿಮ್ಮಯ್ಯ ಅವರು ಶಿಫಾರಸು ಮಾಡಿದ್ದರೂ ನೆಹರೂ ತಮ್ಮ ಸಂಬಂಧಿ ಕಾಶ್ಮೀರದ ಬಿ. ಎಂ. ಕೌಲ್‌ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ಮಾಡುವ ಉದ್ದೇಶದಿಂದ ಜ| ಥಾಪರ್‌ ಅವರನ್ನು ತಾತ್ಕಾಲಿಕವಾಗಿ ಸೇನಾ ಮುಖ್ಯಸ್ಥರನ್ನಾಗಿ ಮಾಡಿ ಅನಂತರ ಕೌಲ್‌ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡುವಲ್ಲಿ ಯಶಸ್ವಿಯಾದರು. ಆದರೆ ರಣರಂಗದಲ್ಲಿ ಆಡಳಿತಾತ್ಮಕ ಅನುಭವದ ಆವಶ್ಯಕತೆಗಿಂತ ಯಾವ ರೀತಿ ಹೋರಾಟ ಮಾಡಿ ಗೆಲುವು ಸಾಧಿಸಬೇಕು ಎನ್ನುವ ಅನುಭವ ಬಹಳ ಅಗತ್ಯ. ಈ ಅನುಭವದ ಕೊರತೆ ಇದ್ದ ಕೌಲ್‌ ಅವರ ಮಾರ್ಗದರ್ಶನದಲ್ಲಿ ಭಾರತೀಯ ಸೇನೆ ಹೋರಾಡಬೇಕಾಗಿ ಬಂದದ್ದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ. 

ಕಾಕತಾಳೀಯವೆಂಬಂತೆ ಕೌಲ್‌ ಅವರು ಯುದ್ಧದ ಮಹತ್ವದ ವೇಳೆಯಲ್ಲೆ ಅನಾರೋಗ್ಯಕ್ಕೊಳಗಾಗಿ ಯುದ್ಧರಂಗದಿಂದ ಹೊರಗುಳಿಯಬೇಕಾಯ್ತು. ಇದು ಭಾರತದ ಸೇನೆಯ ನೈತಿಕತೆಗೆ ಮಾರಕವಾಯ್ತು. ಈ ಯುದ್ಧದಲ್ಲಿ ಭಾರತದ ಸುಮಾರು 2,000 ಸೈನಿಕರು ಮೃತರಾಗಿದ್ದು 1,047 ಸೈನಿಕರು ಗಾಯಗೊಂಡರು. ಅಲ್ಲದೇ ಸುಮಾರು ಭಾರತದ 4,000 ಸೈನಿಕರನ್ನು ಚೀನ ಸೆರೆಹಿಡಿದಿತ್ತು. ಒಂದು ತಿಂಗಳ ಯುದ್ಧದ ಅನಂತರ ಚೀನ ನ.20ರಂದು ಏಕಾಏಕಿ ಕದನ ವಿರಾಮ ಘೋಷಿಸಿತು. ಒಂದು ವೇಳೆ ಚೀನ ಕದನ ವಿರಾಮ ಘೋಷಿಸದೆ ಇದ್ದಲ್ಲಿ ಭಾರತ ಇನ್ನೂ ಹೆಚ್ಚಿನ ಸಾವು ನೋವು ಮತ್ತು ನಷ್ಟ ಅನುಭವಿಸಬೇಕಾಗಿತ್ತೋ ಏನೋ!

ಯುದ್ಧ ಮುಗಿದ ಅನಂತರ ಗಾನಕೋಗಿಲೆ ಲತಾ ಮಂಗೇಶ್ಕರ್‌ ಜೂನ್‌ 27, 1963ರಂದು ಕವಿ ಪ್ರದೀಪ್‌ ಅವರು ಬರೆದ “ಯೆ ಮೇರೆ ವತನ್‌ ಕೆ ಲೋಗೋಂ’  ಗೀತೆಯನ್ನು ಸಂಸತ್ತಿನಲ್ಲಿ ಹಾಡಿದ್ದರು. ದೇಶದ ರಕ್ಷಣೆಗಾಗಿ ತ್ಯಾಗ ಮಾಡಿದ ಸೈನಿಕರಿಗೆ ಶ್ರದ್ಧಾಂಜಲಿಯಾಗಿ ಹಾಡಿದ ಈ ಹಾಡು ಈ ದೇಶದ ಪ್ರಧಾನಿ ಸೇರಿದಂತೆ ಹಲವರಲ್ಲಿ ಕಣ್ಣೀರಿನ ಕೋಡಿಯೇ ಹರಿಸಿತು ಎಂದು ಹೇಳಲಾಗಿದೆ. ನೆಹರೂ ನಿಜವಾಗಿ ತಮ್ಮ ಪ್ರಮಾದವನ್ನು ಅರಿತು ಕಣ್ಣೀರು ಸುರಿಸಿದರೆ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. 

ಭಾರತದ ಸೇನಾಪಡೆ ಯುದ್ಧಕ್ಕೆ ಅಣಿಯಾಗದಿರುವಾಗಲೇ ಅನಗತ್ಯವಾಗಿ ಯುದ್ಧವನ್ನು ಮೈಮೇಲೆ ಎಳೆದುಕೊಂಡ ನೆಹರೂ ಮತ್ತು ಮೆನನ್‌ ಅವರ ಮುತ್ಸದ್ದಿತನಕ್ಕೆ ತುಕ್ಕು ಹಿಡಿದಿತ್ತೇ ಅಥವಾ ಅವರ ಅಚಾತುರ್ಯಕ್ಕೆ ಬೇರೆ ಕಾರಣ ಇರಬಹುದೇ ಎಂಬುದು ಇಂದು ಕೂಡ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಕ್ಲಾಡ್‌ ಡಿ’ಸೋಜಾ

Advertisement

Udayavani is now on Telegram. Click here to join our channel and stay updated with the latest news.

Next