Advertisement

ಹಿತ್ತಿಲ ಬೆಳೆ ಹಾಗಲ

12:10 AM Oct 06, 2019 | Sriram |

ಹಾಗಲ ಕಾಯಿ ರುಚಿ ಕಹಿಯಾದರೂ ಪೌಷ್ಟಿಕಾಂಶಯುಕ್ತ ತರಕಾರಿ. ಇದೊಂದು ಉಷ್ಣ ಪ್ರದೇಶದಲ್ಲಿ ಬೆಳೆಯುವ ಸಸ್ಯ ಕೂಡ ಹೌದು. ಇದು ಹೆಚ್ಚಿನ ಪ್ರಮಾಣದಲ್ಲಿ ಶರ್ಕರ ಪಿಷ್ಟ, ಪ್ರೋಟೀನ್‌, “ಸಿ’ ಜೀವಸತ್ವ , ಖನಿಜಾಂಶಗಳನ್ನು ಒಳಗೊಂಡಿದೆ. ಅಲ್ಲದೆ ಕ್ಯಾಲ್ಸಿಯಂ, ಕೊಬ್ಬು, ರಂಜಕ, ಕಬ್ಬಿಣ, ಪೊಟ್ಯಾಷ್‌, ರೈಬೊಫ್ಲೇಲಿನ ಇತ್ಯಾದಿಗಳನ್ನು ಹೊಂದಿದೆ.

Advertisement

ವಿಸ್ತೀರ್ಣವಾದ ಸ್ಥಳಾವಕಾಶವಿಲ್ಲದಿದ್ದರೂ ಮನೆ ಅಂಗಳದ ಬದಿ, ಹಿತ್ತಿಲಿನಲ್ಲೂ ಇದನ್ನು ಕಡಿಮೆ ಬಂಡವಾಳ ಮತ್ತು ಪರಿಶ್ರಮದಿಂದ ಬೆಳೆಯಬಹುದಾಗಿದೆ. ಆಯುರ್ವೇದದಲ್ಲಿ ಇದನ್ನು ಹಲವಾರು ಕಾಯಿಲೆಗಳಿಗೆ ಔಷಧವಾಗಿ ಬಳಸಲಾಗುತ್ತದೆ.

ಕೃಷಿ ಮಾಡುವುದು ಹೇಗೆ ?
ನೀರು ಬಸಿದು ಹೋಗುವ ಮರಳು ಮಿಶ್ರಿತ ಗೊಡ್ಡು ಮಣ್ಣು , ಕೆಂಪು ಮಣ್ಣು ಹಾಗಲ ಕೃಷಿಗೆ ಉತ್ತಮ. ಹಾಗಲ ಬೀಜದ ಸಿಪ್ಪೆ ಗಟ್ಟಿಯಾಗಿರುವುದರಿಂದ ಬೇಗನೆ ಮೊಳಕೆ ಬರಲಾರದು. ಅದಕ್ಕಾಗಿ ಬಿತ್ತನೆಯ ಮೊದಲ ದಿನ ಬೀಜವನ್ನು ತಣ್ಣೀರಿನಲ್ಲಿ 5-6 ಗಂಟೆಗಳ ಕಾಲ ನನೆ ಹಾಕಿ.

ಸುಮಾರು 2ರಿಂದ 3 ಅಡಿ ಅಗಲ ಮತ್ತು ಒಂದು ಅಡಿ ಆಳದ ಕಾಲುವೆಗಳನ್ನು ನಿರ್ಮಿಸಿ. ಕಾಲುವೆಯಲ್ಲಿರುವ ಮಣ್ಣಿಗೆ ಸ್ವಲ್ಪ ಸುಡುಮಣ್ಣು ಅಥವಾ ಬೂದಿ ಮಿಶ್ರ ಮಾಡಿ. ಅದರಲ್ಲಿ 2 ಅಡಿ ದೂರದಲ್ಲಿ ಸಣ್ಣ ಗುಳಿಗಳನ್ನು ಮಾಡಿ ಬೀಜ ಬಿತ್ತಬೇಕು. ಬಿತ್ತನೆ ವೇಳೆ ಪ್ರತಿ ಕುಳಿಗಳಲ್ಲಿ 3-4 ಬೀಜ ಹಾಕಿ, ಅವು ಮೊಳಕೆ ಬಂದಾಗ ಹೆಚ್ಚುವರಿ ಗಿಡಗಳನ್ನು ಕೀಳಬೇಕು. ಪ್ರತಿಯೊಂದು ಕುಳಿಗಳಲ್ಲೂ ಎರಡು ಸಸಿ ಉಳಿಸಿ.

ಗಿಡ ಮೊಳಕೆ ಬಂದು ಒಂದು ವಾರದಲ್ಲಿ ಸೊಪ್ಪು, ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು. ಬಳಿಕ ಗಿಡ ಬೆಳೆಯುತ್ತಿದ್ದಂತೆ ಬೂದಿ, ಸುಡುಮಣ್ಣು, ಆಕಳಗಂಜಲ, ನೆಲಗಡಲೆ ಹಿಂಡಿ, ಆಡಿನ ಹಿಕ್ಕೆ, ಮೊಲದ ಹಿಕ್ಕೆ ಇತ್ಯಾದಿಗಳನ್ನು ಹಾಕಬೇಕು. ಒಂದು ವಾರದ ಬಳಿಕ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡಗಳ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ನೆಡಬೇಕು. ಚಪ್ಪರ ಹಾಕಿದರೆ ಉತ್ತಮ. ಬಳ್ಳಿಗಳು ಹುಲುಸಾಗಿ ಹಬ್ಬಿ ಕೆಲವೇ ದಿನಗಳಲ್ಲಿ ಹಳದಿ ಬಣ್ಣದ ಹೂ ಬಿಡುತ್ತವೆ. ಅನಂತರ ಒಂದೆರಡು ವಾರಗಳಲ್ಲಿ ಕಾಯಿ ಮೂಡುವುದು. ಕಾಯಿ ಬಲಿತು ಪಕ್ವಗೊಂಡಂತೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಳದಿಯಾದಂತೆ ಅದು ಬಳಕೆಗೆ ಅಷ್ಟೊಂದು ಯೋಗ್ಯವೆನಿಸುವುದಿಲ್ಲ. ಆದ್ದರಿಂದ ಕಾಯಿ ಎಳತಾಗಿರುವಾಗಲೇ ಕೊಯ್ಲು ಮಾಡುವುದು ಸೂಕ್ತ. ಮಳೆಗಾಲವಲ್ಲದಿದ್ದರೆ 2 ದಿನಗಳಿಗೊಮ್ಮೆ ಬೆಳಗ್ಗೆ ಅಥವಾ ಸಂಜೆ ನೀರುವುಣಿಸಬೇಕು.

Advertisement

ಮುಖ್ಯ ತಳಿಗಳು
ಹಾಗಲದಲ್ಲಿ ಸ್ಥಳೀಯ ತಳಿಗಳಲ್ಲದೆ ಭಾರತೀಯ ಕೃಷಿ ಸಂಶೋಧನ ಸಂಸ್ಥೆ, ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆ ಹಾಗೂ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯಗಳು ಕೆಲವೊಂದು ಉತ್ತಮ ತಳಿಗಳನ್ನು ಸಂಶೋಧಿಸಿವೆ. ಮುಖ್ಯವಾಗಿ ಅರ್ಕಾಹರಿತ್‌, ಪೂಸಾದೋಮೌಸವಿ, ಕೊಯಮತ್ತೂರು ಲಾಂಗ್‌ ಮೊದಲಾದವುಗಳು.

ರೋಗ, ಔಷಧ
ಕೆಂಪು, ಬೂದಿ ರೋಗ, ಹಸುರು ಹುಳಗಳ ಬಾಧೆ ಸಾಮಾನ್ಯವಾಗಿ ಹಾಗಲ ಕೃಷಿಯನ್ನು ಕಾಡುತ್ತದೆ. ಇವುಗಳ ತಡೆಗೆ ಕಹಿಬೇವಿನ ಹಿಂಡಿ ಹಾಕಬಹುದು. ಬೋಡೋì ಮಿಶ್ರಣ, ಗೋಮೂತ್ರದಿಂದ ತಯಾರಿಸಿದ ಜೀವಾಮೃತ ಔಷಧ ಸಿಂಪಡಿಸಬಹುದು.

 -ಗಣೇಶ ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next