Advertisement

ಹಾಗಲಕಾಯಿ ಸ್ಪೆಷಲ್‌

01:28 AM Sep 06, 2019 | mahesh |

ಮಧುಮೇಹದಿಂದ ನರಳುತ್ತಿರುವ ರೋಗಿಗಳು ಹಾಗಲಕಾಯಿಯನ್ನು ಪ್ರತಿದಿನವೂ ಬಳಸುತ್ತಿದ್ದರೆ ರೋಗ ಪ್ರಬಲಿಸುವುದಿಲ್ಲ. ಅತಿಸಾರ, ಮೂಲವ್ಯಾಧಿ, ಕೆಮ್ಮು , ದಮ್ಮು ಈ ರೋಗಗಳಿಂದ ನರಳುತ್ತಿರುವವರು ಹಾಗಲಕಾಯಿಯನ್ನು ತಪ್ಪದೇ ಸೇವಿಸುತ್ತಿದ್ದರೆ ರೋಗ ಶಮನವಾಗುವುದು.

Advertisement

ಹಾಗಲಕಾಯಿ ಪಲಾವ್‌

ಬೇಕಾಗುವ ಸಾಮಗ್ರಿ: ಹಾಗಲಕಾಯಿ- 1, ಎಣ್ಣೆ- 1/2 ಕಪ್‌, ಅಕ್ಕಿ- 1/2 ಕಪ್‌, ನಿಂಬೆರಸ- 2 ಚಮಚ, ಸಕ್ಕರೆ- 1 ಚಮಚ, ತೆಂಗಿನತುರಿ- 1/4 ಕಪ್‌, ಕೊತ್ತಂಬರಿಸೊಪ್ಪು- 1/4 ಕಪ್‌, ಹಸಿಶುಂಠಿ- 1 ಇಂಚು, ಬೆಳ್ಳುಳ್ಳಿ 3-4 ಎಸಳು, ಈರುಳ್ಳಿ- 1, ಸೋಂಪು- 1/4 ಚಮಚ, ಚಕ್ಕೆ- 1, ಲವಂಗ- 1, ಮೊಗ್ಗು-1, ಜಾಯಿಕಾಯಿ- 1 ಚಿಟಿಕೆ, ಹಸಿಮೆಣಸು 2-3, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಕಾಯಿತುರಿ, ಕೊತ್ತಂಬರಿಸೊಪ್ಪು , ಶುಂಠಿ, ಬೆಳ್ಳುಳ್ಳಿ , ಈರುಳ್ಳಿ, ಸೋಂಪು, ಚಕ್ಕೆ, ಮೊಗ್ಗು , ಲವಂಗ, ಜಾಯಿಕಾಯಿ, ಹಸಿಮೆಣಸು, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಹಾಗಲಕಾಯಿಯನ್ನು ತುಂಬ ಸಣ್ಣಗೆ ತುಂಡು ಮಾಡಿ ಎಣ್ಣೆಯಲ್ಲಿ ಕೆಂಪಗೆ ಹುರಿದು, ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಅಕ್ಕಿ, 1 ಕಪ್‌ ನೀರು, ಉಪ್ಪು , ಸಕ್ಕರೆ, ನಿಂಬೆರಸ ಹಾಕಿ ತೊಳಸಿ. ನಂತರ 3 ವಿಸಿಲ್ ಕೂಗಿಸಿ. ಉಪ್ಪು , ಹುಳಿ, ಕಾರ, ಸಿಹಿ, ಕಹಿ ಎಲ್ಲವೂ ಹೊಂದಿಕೊಂಡು ತಯಾರಾದ ಪಲಾವ್‌ ಡಯಾಬಿಟೀಸ್‌ ರೋಗಿಗಳಿಗೆ ಒಳ್ಳೆಯದು. ಸೋಂಪು ಬಳಸುವುದರಿಂದ ಅರುಚಿ, ಅಜೀರ್ಣ, ಹೊಟ್ಟೆನೋವು ತಡೆಗಟ್ಟಲು ಒಳ್ಳೆಯದು.

ಹಾಗಲಕಾಯಿ ರೊಟ್ಟಿ

Advertisement

ಬೇಕಾಗುವ ಸಾಮಗ್ರಿ: ಎಳೆ ಹಾಗಲಕಾಯಿ ಚೂರು- 1/2 ಕಪ್‌, ತುಪ್ಪ- 2 ಚಮಚ, ಅಕ್ಕಿಹಿಟ್ಟು- 1/4 ಕಪ್‌, ಗೋಧಿಹಿಟ್ಟು- 1/4 ಕಪ್‌, ತೆಂಗಿನತುರಿ- 1/4 ಕಪ್‌, ನೀರುಳ್ಳಿ ಚೂರು- 1/4 ಕಪ್‌, ಕರಿಬೇವಿನೆಲೆ ಚೂರು- 2 ಚಮಚ, ಹಸಿಮೆಣಸು ಪೇಸ್ಟ್‌- 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು , ಅರಸಿನಪುಡಿ- 1 ಚಮಚ.

ತಯಾರಿಸುವ ವಿಧಾನ: ಹಾಗಲಕಾಯಿಯನ್ನು ತುರಿದು, ಉಪ್ಪು , ಅರಸಿನ ಹಾಕಿ ಕಲಸಿ 1/2 ಗಂಟೆ ಕಾಲ ನೆನೆಸಿ. ನಂತರ ನೀರು ತೆಗೆಯಿರಿ. ನಂತರ ತುಪ್ಪ ಸೇರಿಸಿ ಹುರಿಯಿರಿ. ನಂತರ ಅಕ್ಕಿಹಿಟ್ಟು , ಗೋಧಿಹಿಟ್ಟು , ತೆಂಗಿನತುರಿ, ಈರುಳ್ಳಿ ಚೂರು, ಕರಿಬೇವಿನೆಲೆ ಚೂರು, ಹಸಿಮೆಣಸು ಪೇಸ್ಟ್‌ , ಹುರಿದ ಹಾಗಲಕಾಯಿ ಚೂರು, ಉಪ್ಪು ಸೇರಿಸಿ ಕಲಸಿ. ನಂತರ ನೀರು ಹಾಕಿ ಕಲಸಿ. ನಂತರ ಉಂಡೆ ಮಾಡಿ ಬಾಡಿಸಿದ ಬಾಳೆಲೆಯಲ್ಲಿ ತಟ್ಟಿ ಕಾದ ತವಾದ ಮೇಲೆ ತುಪ್ಪ ಹಾಕಿ 2 ಬದಿ ಬೇಯಿಸಿ ತೆಗೆಯಿರಿ. ಈಗ ರುಚಿಕರವಾದ ಪೌಷ್ಟಿಕ ರೊಟ್ಟಿ ಸವಿಯಲು ಸಿದ್ಧ.

ಹಾಗಲಕಾಯಿ ಗೊಜ್ಜು

ಬೇಕಾಗುವ ಸಾಮಗ್ರಿ: ಹಾಗಲಕಾಯಿ- 1, ಧನಿಯಾ- 1 ಚಮಚ, ಜೀರಿಗೆ- 1/2 ಚಮಚ, ಬ್ಯಾಡಗಿಮೆಣಸು 4-5, ಸ್ವಲ್ಪ ಕರಿಬೇವಿನೆಲೆ, ತೆಂಗಿನತುರಿ- 1 ಕಪ್‌, ಹುಳಿರಸ- 1 ಚಮಚ, ಅರಸಿನ- 1/2 ಚಮಚ, ಎಣ್ಣೆ- 1 ಸೌಟು, ಸಾಸಿವೆ- 1/2 ಚಮಚ, ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1, ರುಚಿಗೆ ತಕ್ಕಷ್ಟು ಉಪ್ಪು , ಧನಿಯಾ- 1 ಚಮಚ, ಜೀರಿಗೆ- 1/2 ಚಮಚ, ಕೆಂಪುಮೆಣಸು 3-4.

ತಯಾರಿಸುವ ವಿಧಾನ: ಹಾಗಲಕಾಯಿಯನ್ನು ಸಣ್ಣಗೆ ಹೆಚ್ಚಿ ಉಪ್ಪು ಅರಸಿನ ಹಾಕಿ ಕಲಸಿ. 1/2 ಗಂಟೆ ಬಿಡಿ. ನಂತರ ರಸ ಹಿಂಡಿ ತೆಗೆಯಿರಿ. ಕಾದ ಎಣ್ಣೆಗೆ ಹಾಕಿ ಕೆಂಪಗೆ ಕರಿದು ತೆಗೆಯಿರಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಹಾಕಿ. ಸಾಸಿವೆ ಸಿಡಿದ ಮೇಲೆ ಕರಿಬೇವಿನೆಲೆ ಚೂರು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕೆಂಪಗೆ ಹುರಿಯಿರಿ. ಧನಿಯಾ, ಜೀರಿಗೆ, ಕೆಂಪುಮೆಣಸು, ತೆಂಗಿನತುರಿ ಸೇರಿಸಿ ಪುಡಿ ಮಾಡಿ. ನಂತರ ಮೇಲಿನ ಮಿಶ್ರಣಕ್ಕೆ ಹಾಕಿ. ನಂತರ ಉಪ್ಪು , ಕರಿದ ಹಾಗಲ ಹೋಳುಗಳನ್ನು ಹಾಕಿ ಚೆನ್ನಾಗಿ ತೊಳಸಿ. ಅನ್ನಕ್ಕೆ ಕಲಸಿ ತಿನ್ನಲು ಈ ಗೊಜ್ಜು ರುಚಿಯಾಗಿರುತ್ತದೆ. ಬೇಕಾದರೆ ಸಣ್ಣ ತುಂಡು ಬೆಲ್ಲ ಹಾಕಬಹುದು.

ಹಾಗಲಕಾಯಿ ಬಾತ್‌

ಬೇಕಾಗುವ ಸಾಮಗ್ರಿ: ಎಣ್ಣೆ- 1/4 ಕಪ್‌, ಜೀರಿಗೆ- 1 ಚಮಚ, ತೆಳ್ಳಗೆ ಹೆಚ್ಚಿದ ಈರುಳ್ಳಿ- 1, ಜಜ್ಜಿದ ಬೆಳ್ಳುಳ್ಳಿ 3-4, ಒಣಮೆಣಸು 3-4, ಕರಿಬೇವು- 1 ಎಸಳು, ಉಪ್ಪು ರುಚಿಗೆ ತಕ್ಕಷ್ಟು , 2 ಚಮಚ ಹುಳಿರಸ, ತಿರುಳು ತೆಗೆದು ತುರಿದ ಹಾಗಲ -1/2 ಕಪ್‌, ನಿಂಬೆರಸ- 2 ಚಮಚ, ಪುಡಿಬೆಲ್ಲ- 1 ಚಮಚ, ತೆಂಗಿನತುರಿ- 1/2 ಕಪ್‌, ಕೊತ್ತಂಬರಿಸೊಪ್ಪು- 1 ಚಮಚ, ಅನ್ನ- 1/2 ಕಪ್‌.

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಜೀರಿಗೆ ಹಾಕಿ. ಜೀರಿಗೆ ಸಿಡಿದಾಗ ಈರುಳ್ಳಿ ಹಾಕಿ ಕೆಂಪಗೆ ಹುರಿದು, ಜಜ್ಜಿದ ಬೆಳ್ಳುಳ್ಳಿ ಹಾಕಿ. ಸ್ವಲ್ಪ ಹುರಿದು, ಒಣಮೆಣಸು ಚೂರು ಹಾಕಿ ಸ್ವಲ್ಪ ಹುರಿದು, ಹುಳಿರಸ, ತುರಿದ ಹಾಗಲ ಹಾಕಿ ಚೆನ್ನಾಗಿ ಹುರಿದು, ನಿಂಬೆರಸ, ಬೆಲ್ಲ, ಕಾಯಿತುರಿ, ಅನ್ನ, ಉಪ್ಪು, ಕೊತ್ತಂಬರಿಸೊಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಕೆಳಗಿಳಿಸಿ. ಈಗ ರುಚಿಯಾದ ಪೌಷ್ಟಿಕ ಹಾಕಲಕಾಯಿ ಬಾತ್‌ ಸವಿಯಲು ಸಿದ್ಧ.

ಸರಸ್ವತಿ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next