Advertisement
ಹಗರಣ ಬೆಳಕಿಗೆ ಬಂದು ಇಲ್ಲಿಗೆ ಬರೋಬ್ಬರಿ 3 ವರ್ಷಗಳೇ ಉರುಳಿದರೂ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯು ಆಮೆಗತಿಯಲ್ಲಿ ಸಾಗಿದೆ. ಸಿಟ್ಜರ್‌ಲ್ಯಾಂಡ್, ಟರ್ಕಿ, ರಷ್ಯಾ, ದಕ್ಷಿಣ ಕೊರಿಯಾ, ಫಿನ್ಲಂಡ್, ಲುಕ್ಸಂಬರ್ಗ್, ಹಾಂಕಾಂಗ್, ಸಿಂಗಾಪುರ, ಇರಾನ್, ನೈಜೀರಿಯಾ, ಐರ್ಲೆಂಡ್, ಸೀಶೆಲ್ಸ್ ದೇಶಗಳಲ್ಲಿರುವ ಬಿಟ್‌ಕಾಯಿನ್ ಎಕ್ಸ್‌ಚೇಂಜ್ ಕಂಪೆನಿಗಳು, ಕ್ರಿಪ್ಟೋ ಎಕ್ಸ್‌ಚೇಂಜ್‌ಗಳು, ಇಂಟರ್ ನ್ಯಾಶನಲ್ ಎಕ್ಸ್‌ಚೇಂಜ್‌ಗಳಿಂದ ಕಾನೂನು ನಿಯಮಗಳನ್ವಯ ಸಾಕ್ಷ್ಯ ಸಿಗದಿರುವುದೇ ತನಿಖೆಗೆ ಭಾರೀ ಹಿನ್ನಡೆಯಾಗಿದೆ.
ಹಗರಣದ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ 8 ಪ್ರಕರಣ ದಾಖಲಾಗಿದೆ. ಈ ಪೈಕಿ ಬೆಂಗಳೂರಿನ ಅಶೋಕನಗರ ಹಾಗೂ ಕೆ.ಜಿ.ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಎಸ್‌ಐಟಿಯು ತನಿಖೆ ಪೂರ್ಣಗೊಳಿಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಪ್ರಕರಣದ ರೂವಾರಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸೇರಿದಂತೆ 25ಕ್ಕೂ ಹೆಚ್ಚಿನ ಆರೋಪಿಗಳ ಹೇಳಿಕೆ ದಾಖಲಿಸುವ ಕಾರ್ಯ ಬಹುತೇಕ ಮುಕ್ತಾಯಗೊಂಡಿದೆ. ಬಿಟ್ ಕಾಯಿನ್ ಎಕ್ಸ್‌ಚೇಂಜ್ ಕುರಿತು ವಿದೇಶಗಳಿಂದ ಆಗಾಗ್ಗೆ ಬರುತ್ತಿರುವ ಮಾಹಿತಿ ಆಧಾರದಲ್ಲಿ ಎಸ್‌ಐಟಿ ತಂಡವು ಇದಕ್ಕೆ ಪೂರಕವಾದ ಸಾಕ್ಷ್ಯ ಸಂಗ್ರಹಿಸುತ್ತಿದೆ.
Related Articles
ಎಸ್‌ಐಟಿ ಅಧಿಕಾರಿಗಳು ಖಾಸಗಿ ತಾಂತ್ರಿಕ ಪರಿಣಿತರ ಮೊರೆ ಹೋಗಿದ್ದು ಅವರ ಸಲಹೆ ಮೇರೆಗೆ ಇನ್ನಷ್ಟು ಆಳಕ್ಕೆ ಹೋಗಿ ತನಿಖೆ ನಡೆಸಿ ಬಿಟ್‌ಕಾಯಿನ್ ಮೂಲಕ ನಡೆದಿರುವ ದುಡ್ಡಿನ ವ್ಯವಹಾರದ ಬಗ್ಗೆ ಕೆದಕುತ್ತಿದೆ.
Advertisement
ಏನಿದು ಬಿಟ್‌ಕಾಯಿನ್ ಹಗರಣ?2020ರಲ್ಲಿ ಬಿಟ್‌ಕಾಯಿನ್ ಹಗರಣದ ಸುಳಿವು ಸಿಕ್ಕಿ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಶ್ರೀಕಿ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಆರೋಪಿಗಳು ಹಲವಾರು ವೆಬ್‌ಸೈಟ್‌ಗಳು, ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್, ಗೇಮಿಂಗ್ ಪೋರ್ಟಲ್‌ಗಳನ್ನು ಹ್ಯಾಕ್ ಮಾಡಿ ಅಕ್ರಮವಾಗಿ ಕೋಟ್ಯಂತರ ರೂ. ಲಪಟಾಯಿಸಿರುವುದು ತನಿಖೆಯಲ್ಲಿ ಕಂಡು ಬಂದಿತ್ತು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಜಾಲಗಳು ಪ್ರಕರಣದಲ್ಲಿ ಶಾಮೀಲಾಗಿರುವುದು, ಸೈಬರ್‌ನಲ್ಲಿ ಪರಿಣತಿ ಹೊಂದಿದ್ದ ಹಗರಣದ ಆರೋಪಿಗಳು ಡಾರ್ಕ್‌ನೆಟ್‌ನಲ್ಲಿ ಡೀಲ್ ಕುದುರಿಸಿರುವುದು ಪತ್ತೆಯಾಗಿತ್ತು. 2023ರ ಜೂನ್ 30ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ರಚಿಸಿದ್ದರು. “ಬಿಟ್ ಕಾಯಿನ್ ಎಕ್ಸ್‌ಚೇಂಜ್ ಕುರಿತು ನಾವು ಕೇಳಿರುವ ಮಾಹಿತಿಗಳು ಹಲವು ದೇಶಗಳಿಂದ ಬರಲು ಬಾಕಿ ಇದೆ. ಶೀಘ್ರದಲ್ಲಿ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆಗಳಿಲ್ಲ. ಹೀಗಾಗಿ ಪ್ರಕರಣದ ತನಿಖೆಯಲ್ಲಿ ಯಾವುದೇ ಮಹತ್ವದ ಬೆಳವಣಿಗೆ ಇಲ್ಲ. ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ವಿಚಾರಣೆ ಬಹುತೇಕ ಮುಗಿದಿದೆ.” -ಮನೀಷ್ ಕರ್ಬೀಕರ್, ಎಸ್‌ಐಟಿ ತಂಡದ ಮುಖ್ಯಸ್ಥ
– ಅವಿನಾಶ್ ಮೂಡಂಬಿಕಾನ