Advertisement

Bitcoin; ಬಿಜೆಪಿ ವಿರುದ್ಧ ಕಾಂಗ್ರೆಸ್‌ ಅಸ್ತ್ರ?ಏನಿದು ವಿವಾದ?

12:03 AM Aug 25, 2024 | Team Udayavani |

ಬೆಂಗಳೂರು: ವಿಪಕ್ಷಗಳ ವಿರುದ್ಧ ಆಕ್ರಮಣಕಾರಿ’ ರಾಜಕಾರಣಕ್ಕೆ ಚಾಲನೆ ನೀಡಲು ಮುಂದಾಗಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಕಾಲದ ಹಗರಣಗಳನ್ನು ಮರಳಿ ಕೆದಕುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದ “ಬಿಟ್‌ ಕಾಯಿನ್‌’ ಪ್ರಕರಣಕ್ಕೆ ಮರುಜೀವ ನೀಡುವುದಕ್ಕೆ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement

ಹೈಕಮಾಂಡ್‌ ನಾಯಕರ ಭೇಟಿಗಾಗಿ ದಿಲ್ಲಿಗೆ ತೆರಳುವುದಕ್ಕೆ ಮುನ್ನವೇ ಈ ಪ್ರಕರಣದ ಬಗ್ಗೆ ಅಧಿಕಾರಿಗಳ ಜತೆಗೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ. ಈ ಪ್ರಕರಣದ ಆಳ-ಅಗಲ ಬಿಜೆಪಿ ರಾಷ್ಟ್ರೀಯ ನಾಯಕರವರೆಗೂ ವ್ಯಾಪಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ತೀವ್ರ ಮುಜುಗರ ಸೃಷ್ಟಿ ಮಾಡುವುದಕ್ಕೆ ಇದೊಂದು ಪ್ರಬಲ ಅಸ್ತ್ರವಾಗಬಹುದೆಂಬ ಸಲಹೆಯನ್ನು ಕೆಲವರು ಸಿದ್ದರಾಮಯ್ಯ ಅವರಿಗೆ ನೀಡಿದ್ದು, ತಮ್ಮ ವಿರುದ್ಧ ನಿತ್ಯ ಆರೋಪ ಮಾಡುವವರನ್ನು ಕಟ್ಟಿ ಹಾಕುವುದಕ್ಕೆ ಈ ರಣತಂತ್ರ ರೂಪಿಸಲಾಗಿದೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಕಾಂಗ್ರೆಸ್‌ನ ಕೆಲವು ನಾಯಕರ ಮಕ್ಕಳ ಹೆಸರು ಕೂಡ ಕೇಳಿ ಬಂದಿದೆ. ಆದರೆ ಈ ಕಾರಣಕ್ಕಾಗಿ ಕೈಯಲ್ಲಿ ಇರುವ ಅಸ್ತ್ರವನ್ನು ಪ್ರಯೋಗಿಸದೆ ಇರುವುದು ಈ ಸಂದರ್ಭದಲ್ಲಿ ಸೂಕ್ತ ರಾಜಕೀಯ ತಂತ್ರಗಾರಿಕೆಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಗೃಹ ಸಚಿವ ಡಾ| ಪರಮೇಶ್ವರ್‌ ಅವರ ಜತೆಗೆ ಸಿದ್ದರಾಮಯ್ಯ ಈಗಾಗಲೇ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಒಂದರಲ್ಲಿ ಆರೋಪಪಟ್ಟಿ

ಬಿಟ್‌ ಕಾಯಿನ್‌ಗೆ ಸಂಬಂಧಿಸಿ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಈ ಸಂಬಂಧ ಒಂದು ಪ್ರಕರಣದಲ್ಲಿ ಮಾತ್ರ ಈಗಾಗಲೇ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಮುಖ ಆರೋಪಿ ಶ್ರೀಕಿ ಮತ್ತು ಮೂವರು ಪೊಲೀಸ್‌ ಅಧಿಕಾರಿಗಳನ್ನು ಬಂಧಿಸಲಾಗಿದೆ. ಉಳಿದ ಪ್ರಕರಣಗಳನ್ನು ಸಿಐಡಿ ಎಸ್‌ಐಟಿ ಇನ್ನೂ ತನಿಖೆ ನಡೆಸುತ್ತಿವೆ. ಈ ಪ್ರಕರಣಗಳಲ್ಲಿ ಬಿಜೆಪಿಯ ಇಬ್ಬರು ಪ್ರಮುಖ ನಾಯಕರ ಮಕ್ಕಳು ಭಾಗಿಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ. ಬಿಜೆಪಿಯ ಪ್ರಮುಖ ನಾಯಕರೊಬ್ಬರ ಪುತ್ರನಿಗೆ ಶ್ರೀಕಿ ಹ್ಯಾಕಿಂಗ್‌ ಸಹಾಯ ಮಾಡಿದ್ದಾನೆಂಬ ನಿರ್ದಿಷ್ಟ ಮಾಹಿತಿಯೂ ಪೊಲೀಸರ ಮುಂದೆ ಇದೆ ಎನ್ನಲಾಗುತ್ತಿದೆ. ಆದರೆ ಇದನ್ನು ಬಿಚ್ಚಿಡುವುದಕ್ಕೆ ಸಾಕಷ್ಟು ರಾಜಕೀಯ ಸವಾಲುಗಳು ಇರುವುದರಿಂದ ತನಿಖೆ ಕುಂಟುತ್ತಿದೆ.

Advertisement

ಮುಡಾ ಪ್ರಕರಣದಲ್ಲಿ ಬಿಜೆಪಿ ನಾಯಕರು ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳು ರಾಷ್ಟ್ರ ಮಟ್ಟದಲ್ಲಿ ತಮ್ಮ ಘನತೆಗೆ ಚ್ಯುತಿ ತಂದಿರುವುದರಿಂದ ತಿರುಗೇಟು ನೀಡುವುದಕ್ಕೆ ಕಾಂಗ್ರೆಸ್‌ ನಾಯಕರು ಈಗ “ಬಿಟ್‌ ಕಾಯಿನ್‌’ ಪ್ರಕರಣಕ್ಕೆ ಮರುಜೀವ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಏನಿದು ವಿವಾದ?

ಹಿಂದಿನ ಬಿಜೆಪಿ ಸರಕಾರದ ವೇಳೆ ರಾಜ್ಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಬಿಟ್‌ಕಾಯಿನ್‌ ಹಗರಣ

ಪ್ರಕರಣದ ಆಳ-ಅಗಲ ಬಿಜೆಪಿ ರಾಷ್ಟ್ರೀಯ ನಾಯಕರವರೆಗೆ ವ್ಯಾಪಿಸಿರುವ ಮಾಹಿತಿ ಮುಖ್ಯಮಂತ್ರಿಗೆ ಲಭ್ಯ

ಬಿಜೆಪಿಯ ಪ್ರಮುಖ ನಾಯಕರೊಬ್ಬರ ಪುತ್ರನಿಗೆ ಪ್ರಮುಖ ಆರೋಪಿ ಶ್ರೀಕಿಯಿಂದ ಹ್ಯಾಕಿಂಗ್‌ ನೆರವು: ಮಾಹಿತಿ

ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿಯನ್ನು ಕಟ್ಟಿ ಹಾಕಲು ಸಿಎಂ ರಣತಂತ್ರ?

Advertisement

Udayavani is now on Telegram. Click here to join our channel and stay updated with the latest news.